SUDDIKSHANA KANNADA NEWS/ DAVANAGERE/ DATE:02-11-2023
ಬೆಂಗಳೂರು: ಕಾಂಗ್ರೆಸ್ ಉಸ್ತುವಾರಿಗಳು ಕರ್ನಾಟಕಕ್ಕೆ ಬರುವುದೇ ಹಣ ವಸೂಲಿಗಾಗಿ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ (B. S. Yediyurappa) ಅವರು ಕಾಂಗ್ರೆಸ್ ವಿರುದ್ಧ ಘರ್ಜಿಸಿದ್ದಾರೆ.
Read Also This Story:
8 ವರ್ಷಗಳಲ್ಲಿ ಮೊದಲ ಬಾರಿಗೆ ಅಕ್ಕಿ ಉತ್ಪಾದನೆಯಲ್ಲಿ ಭಾರೀ ಕುಸಿತ…? ಗಗನಕ್ಕೇರಲಿದೆ Rice ದರ… ರಫ್ತು ನಿರ್ಬಂಧ ಮತ್ತಷ್ಟು ವಿಸ್ತರಿಸಲಾಗುತ್ತಾ…?
ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಕಾಂಗ್ರೆಸ್ ಉಸ್ತುವಾರಿಗಳು ಕರ್ನಾಟಕಕ್ಕೆ ಬರುವುದೇ ಹಣ ವಸೂಲಿಗೆ ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ಮೇಲೆ ಅನಗತ್ಯವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇವರ ಆಂತರಿಕ ಕಚ್ಚಾಟದಿಂದಾಗಿ ಅಭಿವೃದ್ದಿ ಕಾಮಗಾರಿಗಳು ನಿಂತುಹೋಗಿವೆ ಎಂದು ಆರೋಪಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸುರ್ಜೆವಾಲ ಮತ್ತು ಕೆ.ಸಿ.ವೇಣುಗೋಪಾಲ್ ಕರ್ನಾಟಕಕ್ಕೆ ಏಕಾಏಕಿ ಬಂದಿದ್ದು ಏಕೆ ಎಂಬುದು ಎಲ್ಲರಿಗೂ ಗೊತ್ತಿದೆ. ಸಚಿವರು ಮತ್ತು ಶಾಸಕರು ನಾಯಿನರಿಗಳ ತರ ಕಿತ್ತಾಡಿಕೊಳುತ್ತಿದ್ದಾರೆ. ಉಸ್ತುವಾರಿಗಳು ರಾಜ್ಯಕ್ಕೆ ಬರುವುದು ವಸೂಲಿಗೆ ಎಂಬುದು ಬಾಯ್ಬಿಟ್ಟು ಹೇಳಬೇಕೆ ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಗಿದೆ. ಆದರೆ ಸರ್ಕಾರ ಮಾತ್ರ ಗಾಳಿಯಿಲ್ಲದೇ ಮುಂದೆ ಹೋಗುತ್ತಿಲ್ಲ. ತಮ್ಮ ಆಶ್ವಾಸನೆ ಈಡೇರಿಸಲು ಪರದಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಚಿತ್ರ ಪರಿಸ್ಥಿತಿಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.
ಕರ್ನಾಟಕದಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಗಿತವಾಗಿವೆ. ವಿದ್ಯುತ್ ದರದಲ್ಲಿ ಭಾರಿ ಹೆಚ್ಚಳ ಮಾಡಿದ್ದಾರೆ.ಬರ ಪೀಡಿತ ಪ್ರದೇಶಕ್ಕೆ ಸಿಎಂ ಸೇರಿ ಒಬ್ಬ ಮಂತ್ರಿ ಕೂಡ ಹೋಗಿಲ್ಲ. ಸರ್ಕಾರ ಯಾವ ರೀತಿ ದಿವಾಳಿ ಯಾಗಿದೆ ಎಂದರೆ ಶಾಸಕರ ಅನುದಾನ 2 ಕೋಟಿ ಬದಲು 50 ಲಕ್ಷ ಮಾತ್ರ ಬಿಡುಗಡೆ ಮಾಡಲಾಗಿದೆ. ಅನುದಾನವನ್ನು ಸಹ ಸರಿಯಾಗಿ ಬಿಡುಗಡೆ ಮಾಡಿಲ್ಲ ಎಂದು ದೂರಿದರು.
ತಾಂಡಾ, ಬೋವಿ, ಅಂಬೇಡ್ಕರ್ ನಿಗಮಗಳಿಗೆ ಒಂದು ಪೈಸೆಯೂ ಬಿಡುಗಡೆ ಮಾಡಿಲ್ಲ. ರೈತ ಬರಗಾಲದಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಕೃಷಿ ಪಂಪ್ಸೆಟ್ಗೆ ಉಚಿತ ವಿದ್ಯುತ್ ನೀಡಲಾಗುತಿತ್ತು.ಮುಂದೆ ವಿದ್ಯುತ್ ಶುಲ್ಕ ರೈತನೇ ಭರಿಸುವ ಕೆಲಸ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯನವರು ಅನಗತ್ಯವಾಗಿ ಪ್ರಧಾನಿನರೇಂದ್ರ ಮೋದಿ ಅವರನ್ನು ಟೀಕೆ ಮಾಡುವ ಚಾಳಿ ಇಟ್ಟುಕೊಂಡಿದ್ದಾರೆ. ಅವರಿಗೆ ಮಾಹಿತಿ ಕೊರತೆ ಇರಬಹುದು. ಕೇಂದ್ರ ಸರ್ಕಾರ ಅಭಿವೃದ್ಧಿಗೆ ಸಾಕಷ್ಟು ಹಣ ಬಿಡುಗಡೆ ಮಾಡಿದೆ ಎಂದರು.
ಎನ್ಡಿಆರ್ಎಫ್ನಿಂದ 12,784 ಕೋಟಿ, ಎಸ್ಡಿಆರ್ಎಫ್ನಿಂದಲೂ ಹಣ ಬಿಡುಗಡೆಯಾಗಿದೆ. 5.23 ಲಕ್ಷ ಕೋಟಿ ಕೇಂದ್ರದ ಯೋಜನೆ ಹೊರತುಪಡಿಸಿ ಕೊಟ್ಟಿದ್ದಾರೆ. 37 ಲಕ್ಷ ಕೋಟಿ ರಸ್ತೆ ಕಾಮಗಾರಿಗೆ ನೀಡಲಾಗಿದೆ. ಹೆದ್ದಾರಿ ಕಾಮಗಾರಿಗೆ 47,200 ಕೋಟಿ, ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ ಜೊತೆಗೆ ಚೆನೈ-ಬೆಂಗಳೂರು ಎಕ್ಸ್ಪ್ರೆಸ್ ವೇ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.
ಕಿಸಾನ್ ಯೋಜನೆಗೆ ನಮ್ಮ ಸರ್ಕಾರ 4 ಸಾವಿರ ಕೊಡುತ್ತಿತ್ತು. ಈಗ ಸಿದ್ದರಾಮಯ್ಯನವರು ಅದನ್ನೂ ನಿಲ್ಲಿಸಿದ್ದಾರೆ. ಭದ್ರಾ ಯೋಜನೆಗೆ ನೀಡಲಾಗಿದೆ. ರಾಜ್ಯದ ರೈಲು ಯೋಜನೆಗೆ 800 ಕೋಟಿ ನೀಡಿದರೆ ಈಗ 3,700 ಕೋಟಿ ಕೊಡಲಾಗುತ್ತಿದೆ. ಬೆಂಗಳೂರು ಉಪರೈಲು ಯೋಜನೆಗೆ 400 ಕೋಟಿ ನೀಡಲಾಗಿದೆ. ಬೆಂಗಳೂರು ಮೆಟ್ರೋ ರೈಲು ಎರಡು, ಮೂರನೇ ಯೋಜನೆಗೆ ಹಣ ಬಿಡುಗಡೆ ಮಾಡಿದೆ. ನರೇಂದ್ರ ಮೋದಿ ಅವರು ರಾಜಕೀಯ ಮಾಡದೆ ಕೆಲಸ ಮಾಡುತ್ತಿದ್ದಾರೆ ಎಂದು ಬಿ. ಎಸ್. ಯಡಿಯೂರಪ್ಪನವರು ಹೇಳಿದರು.
ನಾವು ಆರು ತಿಂಗಳು ಅವಕಾಶ ನೀಡಿದೆವು. ಆದರೆ ಆರು ತಿಂಗಳಲ್ಲಿ ಯಾವುದೇ ಸುಧಾರಣೆ ಆಗಲಿಲ್ಲ. ಹಾಗಾಗಿ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ , ಮಾಜಿ ಸಚಿವರಾದ ಗೋವಿಂದ ಆರ್. ಕಾರಜೋಳ, ಶಾಸಕ ರಘು, ಎಸ್. ಆರ್. ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ರವಿಕುಮಾರ್ , ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಮತ್ತಿತರರು ಹಾಜರಿದ್ದರು.