SUDDIKSHANA KANNADA NEWS/ DAVANAGERE/ DATE:22-06-2023
ದಾವಣಗೆರೆ (Davanagere): ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಘೋಷಿಸಿತ್ತು. ಆದ್ರೆ, ಈಗ ಅಧಿಕಾರಕ್ಕೆ ಬಂದು ಒಂದು ತಿಂಗಳಾದರೂ ಬೇಡಿಕೆ ಈಡೇರಿಸಿಲ್ಲ. ಕೆಲ ಷರತ್ತು ವಿಧಿಸಿ ಶಕ್ತಿ ಯೋಜನೆ ಜಾರಿ ಬಿಟ್ಟರೆ ಉಳಿದ ನಾಲ್ಕು ಭರವಸೆಗಳ ಈಡೇರಿಸುವ ಲಕ್ಷಣ ಗೋಚರಿಸುತ್ತಿಲ್ಲ. ಜುಲೈ 4ರೊಳಗೆ ನಾಲ್ಕು ಗ್ಯಾರಂಟಿ ಅನುಷ್ಠಾನಗೊಳಿಸದಿದ್ದರೆ ಬೆಂಗಳೂರಿನ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ (B. S. Yediyurappa) ಘೋಷಿಸಿದರು.
ಈ ಸುದ್ದಿಯನ್ನೂ ಓದಿ:
ವಿಧಾನಸೌಧದ ಮುಂದೆ ಧರಣಿ ಕೂರುವುದಾಗಿ ಬಿ. ಎಸ್. ಯಡಿಯೂರಪ್ಪ ಹೇಳಿದ್ಯಾಕೆ…?
ನಗರದ ರೇಣುಕಾ ಮಂದಿರದಲ್ಲಿ ಆಯೋಜಿಸಿದ್ದ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಶಾಸಕರು ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತ ಬಿಜೆಪಿ ಅಭ್ಯರ್ಥಿಗಳು
ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಅಧಿವೇಶನ ಮುಗಿಯುವವರೆಗೆ ಹೋರಾಟ: ಬಿ. ಎಸ್. ಯಡಿಯೂರಪ್ಪ (B. S. Yediyurappa)
ಈಗಾಗಲೇ ಮಾಜಿ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಹಲವು ನಾಯಕರ ಜೊತೆ ಮಾತನಾಡಿದ್ದೇನೆ. ಜುಲೈ ತಿಂಗಳಿನಲ್ಲಿ ಅಧಿವೇಶನ ಪ್ರಾರಂಭವಾಗಲಿದೆ. 4ರಂದು ರಾಜ್ಯಪಾಲರ ಭಾಷಣ ಇರುತ್ತದೆ. ಷರತ್ತು ವಿಧಿಸದೇ ಗ್ಯಾರಂಟಿ
ಜಾರಿಗೊಳಿಸದಿದ್ದರೆ ಪ್ರತಿಭಟನೆಯನ್ನು 5 ನೇ ತಾರೀಖಿನಿಂದಲೇ ನಡೆಸುತ್ತೇನೆ. ಅಧಿವೇಶನ ಎಲ್ಲಿಯವರೆಗೆ ನಡೆಯುತ್ತದೆಯೋ ಅಲ್ಲಿಯವರೆಗೆ ಹೋರಾಟ ಮುಂದುವರಿಯಲಿದೆ ಎಂದು ಬಿ. ಎಸ್. ಯಡಿಯೂರಪ್ಪ (B. S. Yediyurappa)ತಿಳಿಸಿದರು.
ಸದನದ ಒಳಗೆ, ಹೊರಗೆ ಪ್ರೊಟೆಸ್ಟ್:
ಸದನದ ಒಳಗೆ ಶಾಸಕರು, ಹೊರಗೆ ನಾವು ಹೋರಾಟ, ಸತ್ಯಾಗ್ರಹ ಮಾಡೋಣ. ಸದನದೊಳಗೆ ಮೂಗು ಹಿಡಿದು ಉಸಿರಾಡದಂತೆ ಮಾಡಬೇಕು. ಕಾಂಗ್ರೆಸ್ ಪಕ್ಷವು ಮನೆ ಮನೆಗೆ ಹೋಗಿ 5 ಗ್ಯಾರಂಟಿ ಪತ್ರ ಕೊಟ್ಟಿತ್ತು. ಸಿದ್ದರಾಮಯ್ಯ ಹಾಗೂ
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಸಹಿ ಮಾಡಿ ಗ್ಯಾರಂಟಿ ಕಾರ್ಡ್ ಹಂಚಿದ್ದರು. ಅಧಿಕಾರಕ್ಕೆ ಬಂದ ಮೇಲೆ ಜಾರಿಗೊಳಿಸುತ್ತಾರೆ ಎಂಬ ವಿಶ್ವಾಸ ಇತ್ತು. ಆದ್ರೆ, ಇದು ಈಡೇರುವ ಲಕ್ಷಣ ಕಾಣುತ್ತಿಲ್ಲ ಎಂದು ಬಿ. ಎಸ್. ಯಡಿಯೂರಪ್ಪ (B. S. Yediyurappa) ಅಸಮಾಧಾನ ವ್ಯಕ್ತಪಡಿಸಿದರು.
ಹಿನ್ನೆಡೆ ಬಗ್ಗೆ ಚಿಂತೆ ಬೇಡ:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಿನ್ನೆಡೆ ಅನುಭವಿಸಿದ್ದಕ್ಕೆ ಕಾರ್ಯಕರ್ತರು ಚಿಂತೆಗೆ ಒಳಗಾಗುವುದು ಬೇಡ. ಬಿಜೆಪಿ ಕಾರ್ಯಕರ್ತರು ಕೈಕಟ್ಟಿ ಕೂರಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರದ ವೈಫಲ್ಯತೆಗಳನ್ನು ಜನರಿಗೆ ತಿಳಿಸುವ ಕೆಲಸ ನಾವೆಲ್ಲರೂ ಸೇರಿ ಮಾಡೋಣ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಈಡೇರಿಸಿ, ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ ಹೋರಾಟ ಮಾಡೋಣ ಎಂದು ಕರೆ ನೀಡಿದರು.
ಬಿಜೆಪಿ ಕಾರ್ಯಕರ್ತರೂ ಕಾಂಗ್ರೆಸ್ ಗೆ ಮತ:
ಕಾಂಗ್ರೆಸ್ 5 ಗ್ಯಾರಂಟಿ ಜಾರಿ ಮಾಡುತ್ತದೆ ಎಂಬ ಕಾರಣಕ್ಕೆ ನಮ್ಮ ಪಕ್ಷದ ಕಾರ್ಯಕರ್ತರೂ ಸಹ ಕಾಂಗ್ರೆಸ್ ಗೆ ಮತ ಹಾಕಿದರು. ಹಾಗಾಗಿ, ಯಾರೂ ನಿರೀಕ್ಷೆ ಮಾಡದಷ್ಟು ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಒಂದು ತಿಂಗಳ ಕಾಲ ಕಾದು ಕುಳಿತೆವು.
ಸರ್ಕಾರ ಭರವಸೆ ಈಡೇರಿಸಿಲ್ಲ. ಸಿಎಂ ಸಿದ್ದರಾಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಜನರಿಗೆ ದ್ರೋಹ, ಮೋಸ, ನಂಬಿಕೆ ದ್ರೋಹ ಮಾಡಿದ್ದಾರೆ. ಚುನಾವಣೆಯಲ್ಲಿ ಗೆದ್ದು ಬಂದ ಬಳಿಕ ಉಚಿತ ಬಸ್ ಪ್ರವಾಸಕ್ಕೆ ಕೆಲ ಷರತ್ತು ವಿಧಿಸಿ ಕೊಟ್ಟಿದ್ದರೆ ಬೇರೆ ಏನೂ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.
15 ಕೆಜಿ ಅಕ್ಕಿ ಕೊಡ್ಲೇಬೇಕು:
ಪ್ರತಿ ಒಬ್ಬ ವ್ಯಕ್ತಿಗೆ 15 ಕೆಜಿ ಅಕ್ಕಿ ನೀಡಲೇಬೇಕು. ಕೇಂದ್ರ ಸರ್ಕಾರವು ಐದು ಕೆಜಿ ಅಕ್ಕಿ ನೀಡುತ್ತದೆ. ಹಾಗಾಗಿ, ಸಿದ್ದರಾಮಯ್ಯರು ಚುನಾವಣೆಗೆ ಮುನ್ನ ಘೋಷಣೆ ಮಾಡಿದ ಪ್ರಕಾರ ಹತ್ತು ಕೆಜಿ ಸೇರಿಸಿ ಒಟ್ಟು 15 ಕೆಜಿ ಅಕ್ಕಿ ಕೊಡಬೇಕು ಎಂದು ಒತ್ತಾಯಿಸಿದರು.
ಸುಮ್ಮನೆ ಕೂರಲು ಆಗಲ್ಲ:
ಜನರಿಗೆ ಕೊಟ್ಟ ಭರವಸೆ ಈಡೇರಿಸದೇ ದ್ರೋಹ ಮಾಡಿದರೆ ಸಹಿಸಿಕೊಂಡು ಕೂರಲು ಸಾಧ್ಯವೇ ಇಲ್ಲ. ಫಸಲ್ ಭೀಮಾ ವಿಮಾ ಹಣ ಪಾವತಿ ಮಾಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ನವರು ರಾಜಕೀಯ ದೊಂಬರಾಟ ಮಾಡುತ್ತಿದ್ದಾರೆ. ಜನರ ಹಿತ ಮರೆತಿದ್ದಾರೆ. ಇಂಥವರಿಗೆ ತಕ್ಕ ಪಾಠ ಕಲಿಸಲೇಬೇಕು. ಗ್ಯಾರಂಟಿ ಈಡೇರಿಸುವವರೆಗೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
Comments 1