ದಾವಣಗೆರೆ: ನಾನು ಪ್ರಧಾನಿ ನರೇಂದ್ರ ಮೋದಿ (NARENDRA MODI) ಅವರಿಗೆ ನಿಮ್ಮ ಮೂಲಕ ವಾಗ್ದಾನ ನೀಡಲು ಇಚ್ಚಿಸುತ್ತಿದ್ದೇನೆ. ಇದಕ್ಕೆ ಒಪ್ಪುವವರು ಎರಡು ಕೈ ಮೇಲಕ್ಕೆ ಎತ್ತಿ. ಇನ್ನುಳಿದ ಎರಡು ತಿಂಗಳ ಕಾಲ ಮನೆ ಮನೆಗೆ ತೆರಳಿ ಕೇಂದ್ರ (CENTRAL) ಹಾಗೂ ರಾಜ್ಯ (STATE) ಸರ್ಕಾರದ ಸಾಧನೆಗಳ ಕುರಿತು ತಿಳಿಸೋಣ. ಯಾವುದೇ ಕಾರಣಕ್ಕೂ ವಿರಮಿಸುವುದು ಬೇಡ. ರಾಜ್ಯದಲ್ಲಿ ಮತ್ತೆ ಬಿಜೆಪಿ (BJP)ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ತರುತ್ತೇವೆ ಎಂಬ ಸಂಕಲ್ಪ ಮಾಡೋಣ ಎಂದು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಹೇಳಿದರು.
ನಗರದ ಜಿಎಂಐಟಿ (GMIT) ಸಮೀಪದ 400 ಎಕರೆ ಜಾಗದಲ್ಲಿ ಏರ್ಪಡಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ (BJP VIJAYA SANKALPA YATHRE) ಸಮಾರೋಪ ಮಹಾಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೀವು, ನಿಮ್ಮ ಪತ್ನಿ ಮತ್ತು ಮಕ್ಕಳು ಎರಡು ತಿಂಗಳ ಕಾಲ ಪ್ರಾಮಾಣಿಕವಾಗಿ ದುಡಿಯಿರಿ. ಕೇಂದ್ರ ಸರ್ಕಾರ ಸವಲತ್ತು ಪ್ರತಿಯೊಂದು ಮನೆಗೆ ಒಂದಲ್ಲಾ ಒಂದು ರೀತಿಯ ಸೌಲಭ್ಯ ಕೊಟ್ಟಿದ್ದೇವೆ. ಯಾವ ಮನೆಗೂ ತಲುಪಿಲ್ಲ ಎಂದು ಯಾರೂ ಹೇಳಲ್ಲ ಎಂದು ತಿಳಿಸಿದರು.
70 ವರ್ಷ ಕಡುಬು ತಿನ್ನುತ್ತಿದ್ದರಾ..?
ಈಗ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ (CARD) ಹಂಚುತ್ತಿದೆ. 70 ವರ್ಷ ಕಡುಬು ತಿನ್ನುತ್ತಿದ್ದರಾ. ಗ್ಯಾರಂಟಿ ಕಾರ್ಡ್ ಈಗ ಕೊಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಸುಳ್ಳು ಭರವಸೆ ಕೊಟ್ಟು ಕಾಂಗ್ರೆಸ್ (CONGRESS) ಜನರನ್ನು ವಂಚಿಸುತ್ತಿದೆ. ನಾವು ಜಾರಿಗೆ ತರುವ ಪ್ರಾಮಾಣಿಕ ಪ್ರಯತ್ನ ಈಗಾಗಲೇ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಿದ್ದು ವಿರುದ್ಧ ಟೀಕೆ:
ಒಂದು ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಆಗದ ವಿರೋಧ ಪಕ್ಷದ ನಾಯಕರು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಸವರಾಜ್ ಬೊಮ್ಮಾಯಿ ಅವರ ಡಬಲ್ ಎಂಜಿನ್ ಸರ್ಕಾರದ ಕಾರ್ಯಕ್ರಮಗಳು ಜನರ ಮನೆಗೆ ತಿಳಿಸಲೇಬೇಕಿದೆ. ಕಾಂಗ್ರೆಸ್ ನಂಬುವ ಸ್ಥಿತಿಯಲ್ಲಿ ರಾಜ್ಯದ ಜನರಿಲ್ಲ ಎಂದರು.
ನಾನು ಹಳ್ಳಿ ಹಳ್ಳಿಗೆ ಹೋಗುತ್ತೇನೆ:
ನನಗೆ 80 ವರ್ಷ ತುಂಬಿದೆ. ಮುಂಬರುವ ವಿಧಾನಸಭೆ ಚುನಾವಣೆ ಗೆಲ್ಲುವವರೆಗೆ ಎಲ್ಲಾ ಮುಖಂಡರೊಂದಿಗೆ ಹಳ್ಳಿ ಹಳ್ಳಿಗೆ ತೆರಳುತ್ತೇನೆ. ಮಾತ್ರವಲ್ಲ, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ (NARENDRA MODI) ಆಗಬೇಕು. ಈ ಸಂಕಲ್ಪ ಮಾಡಿ. ನಿರೀಕ್ಷೆಗೆ ಮೀರಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿ ಆಶೀರ್ವಾದ ಮಾಡಿದ್ದಾರೆ. ದಲಿತ, ಹಿಂದುಳಿದ ವರ್ಗಕ್ಕೆ ನೀಡಿರುವ ಸೌಲಭ್ಯ ತಿಳಿಸುವ ಮೂಲಕ ಬಿಜೆಪಿಗೆ ಸ್ಫಷ್ಟ ಬಹುಮತ ಕೊಡಿಸುವ ಕೆಲಸ ಮಾಡೋಣ. ವಿದೇಶ ಪ್ರಯಾಣ ಮಾಡಿದರೂ, ಕೊರೊನಾ ಸಂಕಷ್ಟದ ಕಾಲವೂ ಸೇರಿದಂತೆ ಮೋದಿ ಪ್ರಧಾನಿಯಾದ ಬಳಿಕ ಒಂದು ದಿನ ವಿಶ್ರಾಂತಿ ಪಡೆಯಲಿಲ್ಲ. ದಾವಣಗೆರೆ (DAVANAGERE)ಯಲ್ಲಿ ನಡೆಯುತ್ತಿರುವುದು ಬಿಜೆಪಿ (BJP) ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಅಲ್ಲ. ಇದು ವಿಜಯಯಾತ್ರೆಯ ಆರಂಭ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾತನಾಡಿ ವಿದೇಶಕ್ಕೆ ಹೋಗಿ ಪ್ರಜಾಪ್ರಭುತ್ವ ಅವಹೇಳನ ಮಾಡ್ತಾರೆ. ರಾಜದ್ರೋಹ, ರಾಷ್ಟ್ರದ್ರೋಹ ಕೆಲಸ ಇದು. ಕಾಂಗ್ರೆಸ್ (CONGRESS) ಪಕ್ಷ ದೇಶದ್ರೋಹ ಕೆಲಸ ಮಾಡುತ್ತಿದೆ. ಪಾಕ್ ಜನರು ಸಹ ಮೋದಿಯಂಥ ನಾಯಕತ್ವ ಬೇಕು ಎನ್ನುತ್ತಿದ್ದಾರೆ. ಆದ್ರೆ,ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಮೋದಿ ಬಗ್ಗೆ ಟೀಕೆ ಮಾಡುತ್ತಾರೆ. ಇಂಥ ನಾಯಕತ್ವ ಬೇಕಾ ಎಂದು ಪ್ರಶ್ನಿಸಿದರು.
ಬರುವ ದಿನಗಳಲ್ಲಿ ಕಳಸಾ ಬಂಡೂರಿ ನಾಲೆಯನ್ನು ನಾವೇ ಮತ್ತೆ ಅಧಿಕಾರಕ್ಕೆ ಬಂದು ಪೂರ್ಣಗೊಳಿಸುತ್ತೇವೆ. 16 ಸಾವಿರ ಕೋಟಿ ರೂಪಾಯಿಯನ್ನು ರೈತ ಸಮ್ಮಾನ್ ಕಿಸನ್ ಯೋಜನೆಯಡಿ ರೈತರಿಗೆ ನೀಡಿದ್ದೇವೆ. ಮೂರು ವರ್ಷದ ಹಿಂದೆ ಪ್ರಧಾನಿಯವರು ಕೆಂಪುಕೋಟೆಯ ಮೇಲೆ ನಿಂತು ಎಲ್ಲರ ಮನೆಗೆ ನೀರು ನೀಡುತ್ತೇವೆ ಎಂದಿದ್ದರು. ಯಾವ ಪ್ರಧಾನಿ ಹೇಳಿರಲಿಲ್ಲ. 130 ಕೋಟಿ ಜನರಿಗೆ ಮನೆ ಮನೆಗೆ ನೀರು ನೀಡುವ ಕೆಲಸ ಮಾಡಲಾಯಿತು. ಕಾಂಗ್ರೆಸ್ ಸರ್ಕಾರದಿಂದ ಆಗದಿದ್ದದ್ದು ಮೋದಿ ಅವರಿಂದ ಸಾಧ್ಯವಾಯಿತು ಎಂದು ಹೇಳಿದರು.
72 ವರ್ಷ ಕರ್ನಾಟಕದಲ್ಲಿ 25 ಲಕ್ಷ ಮನೆಗಳಿಗೆ ನೀರು ಪೂರೈಸಲಾಗುತಿತ್ತು. ಮೂರು ವರ್ಷದಲ್ಲಿ 40 ಲಕ್ಷ ಮನೆಗಳಿಗೆ ಕುಡಿಯುವ ನೀರು ಕೊಟ್ಟಿದ್ದೇವೆ. ಇದೊಂದು ಭಗೀರಥ ಪ್ರಯತ್ನ. ಜಲಕ್ರಾಂತಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಕೊಟ್ಟಿದ್ದಾರೆ. 17 ಲಕ್ಷ ಮನೆಗಳಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನೀಡಿದ್ದಾರೆ. 12 ಲಕ್ಷ ಮನೆಗಳಿಗೆ ಶೌಚಾಲಯ ನೀಡಿದ್ದಾರೆ. ವಿದ್ಯಾನಿಧಿ 11 ಲಕ್ಷ ರೈತ ಕುಟುಂಬಗಳಿಗೆ ನೀಡಿದೆ. ರೈತ ಶಕ್ತಿ ಯೋಜನೆಯಡಿ 47 ಲಕ್ಷ ರೈತರಿಗೆ ಬೀಜ ಸಬ್ಸಿಡಿ ನೀಡಿದ್ದೇವೆ. ಶೂನ್ಯ ಬಡ್ಡಿ ದರದಲ್ಲಿ 3 ರಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಿದ್ದೇವೆ. ರೈತರ ಪರ ಇರುವುದು ಬಿಜೆಪಿ ಸರ್ಕಾರ ಎಂದು ವಿವರಿಸಿದರು.
ರಾಜ್ಯದ ಜನರ ಶಕ್ತಿ ಉಪಯೋಗಿಸಿಕೊಂಡು ಕರ್ನಾಟಕ ಕಟ್ಟುವ ಸಂಕಲ್ಪ ಮಾಡಿದ್ದೇವೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರ ಬಡವರು, ದಲಿತರು, ಹಿಂದುಳಿದರು, ಮಹಿಳೆಯರು, ಯುವಕರ ಭವಿಷ್ಯ ಬರೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಚಿವರಾದ ಶ್ರೀರಾಮುಲು, ಆರ್. ಅಶೋಕ್, ಗೋವಿಂದ ಕಾರಜೋಳ, ಬೈರತಿ ಬಸವರಾಜ್, ಸಿ. ಸಿ. ಪಾಟೀಲ್, ಮಾಜಿ ಸಚಿವರಾದ ಕೆ. ಎಸ್. ಈಶ್ವರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ಸಂಸದ ಜಿ. ಎಂ. ಸಿದ್ದೇಶ್ವರ್, ಬಿ. ವೈ. ವಿಜಯೇಂದ್ರ, ಶಶಿಕಲಾ ಜೊಲ್ಲೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತಿತತರು ಹಾಜರಿದ್ದರು.
ಕರ್ನಾಟಕ ಪೇಟ, ಬೆಳ್ಳಿ ಗದೆ:
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಮೈಸೂರು ಪೇಟವನ್ನು ಸಂಸದ ಜಿ. ಎಂ. ಸಿದ್ದೇಶ್ವರ್ ತೊಡಿಸಿದರು. ಸಿಎಂ ಬಸವರಾಜ್ ಬೊಮ್ಮಾಯಿ ಅವರು, 2023ರ ವಿಧಾನಸಭೆ ಚುನಾವಣೆಯ ವಿಜಯಯಾತ್ರೆಯ ಪ್ರಯುಕ್ತ ಬೆಳ್ಳಿಗದೆಯನ್ನು ಮೋದಿ ಅವರಿಗೆ ನೀಡಿದರು.