SUDDIKSHANA KANNADA NEWS/ DAVANAGERE/ DATE-22-06-2025
ದಾವಣಗರೆ: ಕಳೆದ ಲೋಕಸಭೆ ಚುನಾವಣಾ ಫಲಿತಾಂಶ ಹೊರ ಬಂದ ಬಳಿಕ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಬಟಾಬಯಲಾಗಿದೆ. ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಬಣ ಹಾಗೂ ಕೇಂದ್ರದ ಮಾಜಿ ಸಚಿವ ಡಾ. ಜಿ. ಎಂ. ಸಿದ್ದೇಶ್ವರ ಗುಂಪಿನ ನಡುವಿನ ಜಟಾಪಟಿ ತಾರಕಕ್ಕೇರಿದೆ. ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಪರ ರೇಣು ಅಂಡ್ ಟೀಂ ನಿಂತಿದ್ದರೆ. ಬಿ. ವೈ. ವಿಜಯೇಂದ್ರ ಬದಲಾಗಬೇಕು ಎಂಬ ಪಟ್ಟು ಹಿಡಿದಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಹರಿಹರ ಶಾಸಕ ಬಿ. ಪಿ. ಹರೀಶ್ ನನ್ನನ್ನು ಹಾಗೂ ರೇಣುಕಾಚಾರ್ಯ ಇಬ್ಬರನ್ನೂ ಪಕ್ಷದಿಂದ ತೆಗೆದು ಹಾಕಿ ಎಂಬ ಸವಾಲು ಹಾಕಿದ್ದಾರೆ.
ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿ. ಪಿ. ಹರೀಶ್, ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಜಿಲ್ಲಾ ಬಿಜೆಪಿ ಕಲಹಕ್ಕೆ ಕಾರಣರಾಗಿರುವ ರೇಣುಕಾಚಾರ್ಯ ಅವರನ್ನು ಮೊದಲು ಪಕ್ಷದಿಂದ ಉಚ್ಚಾಟಿಸಿ. ಆಮೇಲೆ ಬೇಕಾದರೆ ನನ್ನನ್ನು ತೆಗೆದು ಹಾಕಿ ಎಂದು ವರಿಷ್ಠರಲ್ಲಿ ಹೇಳಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ರೇಣುಕಾಚಾರ್ಯ ವಿರುದ್ಧದ ಬಿ. ಪಿ. ಹರೀಶ್ ಹೋರಾಟ ಸದ್ಯಕ್ಕೆ ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ.
ಬಿಜೆಪಿ ರಾಜ್ಯ ನಾಯಕರನ್ನು ಭೇಟಿ ಮಾಡಿ ದಾವಣಗೆರೆ ಜಿಲ್ಲೆಯ ಬಿಜೆಪಿಯ ಎಲ್ಲಾ ಬೆಳವಣಿಗೆಗಳು, ಪಕ್ಷ ವಿರೋಧಿ ಚಟುವಟಿಕೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಲು ಯಾರ್ಯಾರು ಕಾರಣಕರ್ತರು ಸೇರಿದಂತೆ ಕೆಲ ವಿಚಾರಗಳನ್ನು ಗಮನಕ್ಕೆ ತಂದಿದ್ದೇನೆ. ರೇಣುಕಾಚಾರ್ಯ ವಿರುದ್ಧ ಕ್ರಮ ಆಗಲೇಬೇಕೆಂದು ಒತ್ತಾಯಿಸಿದ್ದೇವೆ ಎಂದು ಮಾಹಿತಿ ನೀಡಿದರು.
ವರಿಷ್ಠರು ಈ ವಿಚಾರ ಕುರಿತಂತೆ ಮಾಹಿತಿ ಪಡೆದಿದ್ದಾರೆ. ಮಾಧ್ಯಮಗಳ ಮುಂದೆ ಹೆಚ್ಚು ಮಾತನಾಡಬೇಡಿ ಎಂಬ ಸೂಚನೆ ಕೊಟ್ಟಿದ್ದಾರೆ. ಹಾಗಾಗಿ, ಹೆಚ್ಚು ಮಾತನಾಡುತ್ತಿಲ್ಲ. ಸದ್ಯದಲ್ಲಿಯೇ ಪಕ್ಷದೊಳಗೆ ಎಲ್ಲವೂ ಸರಿ ಆಗಲಿದೆ ಎಂಬ ವಿಶ್ವಾಸ ಇದೆ. ಪಕ್ಷದ ವರಿಷ್ಠರು ರಾಜ್ಯ, ಜಿಲ್ಲೆ ಹಿತದೃಷ್ಟಿಯಿಂದ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ. ರಾಜಕೀಯ ನಾಯಕರ ಮೇಲೆ ಜನರ ನಿರಾಸಕ್ತಿ ಹೋಗಬೇಕೆಂದಿದ್ದರೆ ಮೊದಲು ಪಕ್ಷದಲ್ಲಿ ಕ್ರಮ ಆಗಲೇಬೇಕು. ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಶಿಕ್ಷೆಯಾಗಲೇಬೇಕು ಎಂದು ಬಿ. ಪಿ. ಹರೀಶ್ ಹೇಳಿದ್ದಾರೆ.
ಒಂದು ವೇಳೆ ರೇಣುಕಾಚಾರ್ಯ ವಿರುದ್ಧ ಆಕ್ರೋಶ ಭುಗಿಲೆದ್ದರೆ ಹೊನ್ನಾಳಿಯಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದರೆ ಮತ್ತೆ ಶಾಸಕರಾಗುವುದು ಸುಲಭವಲ್ಲ. ಹಾಗಾಗಿ, ಏನಾದರೂ ಮಾಡಿ ರೇಣುಕಾಚಾರ್ಯ ಅವರಿಗೆ ಟಿಕೆಟ್ ತಪ್ಪಿಸುವ ದೊಡ್ಡ ಯೋಜನೆ ಇದರ ಹಿಂದಿಂದೆ ಎಂಬ ಮಾತು ಹರಿದಾಡುತ್ತಿದೆ.