SUDDIKSHANA KANNADA NEWS/ DAVANAGERE/ DATE:01-11-2023
ದಾವಣಗೆರೆ: ಆಪರೇಷನ್ ಕಮಲ ಮಾಡಿ ಸರ್ಕಾರ ಬೀಳಿಸಲು ಯತ್ನಿಸಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಚಿವ ಬಿ. ಸಿ. ಪಾಟೀಲ್ ಅವರು, ಆಪರೇಷನ್ ಕಮಲ ಮಾಡಲಾಗುತ್ತದೆ ಎಂಬುದು ಮೂರ್ಖತನದ ಪರಮಾವಧಿ. ಬಿದ್ದರೆ ಕಾಂಗ್ರೆಸ್ ನಾಯಕರಿಂದಲೇ ಆಗುತ್ತೆ. ಸರ್ಕಾರ ತೆಗೆಯಲು ಯಾರೂ ಮನಸು ಮಾಡೋದಿಲ್ಲ. ಇದು ಕಾರ್ಯಸಾಧುವೇ ಎಂದು ಮಾಜಿ ಸಚಿವ ಬಿ. ಸಿ. ಪಾಟೀಲ್ ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 50 ಕೋಟಿ ರೂಪಾಯಿ ಪ್ರತಿ ಶಾಸಕರಿಗೆ ಯಾರು ಕೊಡ್ತಾರೆ. ಸಿಎಂ ಆಗಲು ಇಷ್ಟೊಂದು ದೊಡ್ಡ ಮೊತ್ತ ಹೊಂದಿಸುವವರು ಯಾರು? ಇವೆಲ್ಲಾ ಆಗೋ ಕೆಲಸವಲ್ಲ. ಆಪರೇಷನ್ ಕಮಲ
ಮಾಡಲಾಗುತ್ತದೆ ಎಂಬುದು ಬೋಗಸ್. ರಮೇಶ್ ಜಾರಕಿಹೊಳಿ ಹೇಳಿದಂತೆ ರಾತ್ರೋರಾತ್ರಿ ಕಾಂಗ್ರೆಸ್ ನಾಯಕರಿಂದಲೇ ಪತನವಾಗಬೇಕು. ಬಿಜೆಪಿಗೆ ಹೋದ 17 ಶಾಸಕರು ಕಷ್ಟ ಅನುಭವಿಸಿದ್ದು ಎಲ್ಲರಿಗೂ ಗೊತ್ತು. ತಿಂಗಳುಗಟ್ಟಲೇ ಆಯ್ತು.
ಮತ್ತೆ ಆಪರೇಷನ್ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪತನಗೊಳಿಸುವುದು ಸುಲಭವಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದ್ರೆ, ಕಾಂಗ್ರೆಸ್ ನವರೇ ಸರ್ಕಾರ ಬೀಳಿಸಬೇಕು. ಸಚಿವ ಸತೀಶ್ ಜಾರಕಿಹೊಳಿ, ಬಿ. ಕೆ. ಹರಿಪ್ರಸಾದ್, ಬಸವರಾಜ್ ರಾಯರೆಡ್ಡಿ, ಶಾಮನೂರು ಶಿವಶಂಕರಪ್ಪನವರು ಈಗಲೇ ಸರ್ಕಾರವನ್ನು ಅಲುಗಾಡಿಸಿದ್ದಾರೆ. ಮತ್ತೆ ಉಪಚುನಾವಣೆ ನಡೆಯಬಾರದು ಎಂದರೆ 90 ಶಾಸಕರು ಬರಬೇಕು. ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್ ರ ಬಣಗಳು ಪ್ರತ್ಯೇಕವಾಗಿ ಸಭೆ ನಡೆಸುತ್ತಿವೆ. ಈ ಬಣಗಳ ಜಗಳದಿಂದಲೇ ಸರ್ಕಾರ ಉರುಳಬೇಕು ಎಂದರು.
ಐದು ಗ್ಯಾರಂಟಿಗಳನ್ನು ನೀಡಿರುವ ಕಾಂಗ್ರೆಸ್ ಅದನ್ನು ಪೂರೈಸುವಲ್ಲಿ ವಿಫಲವಾಗಿದೆ. ರಾಜ್ಯ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. 65ರಿಂದ 70 ಸಾವಿರ ಕೋಟಿ ರೂಪಾಯಿ ಭಾಗ್ಯಗಳಿಗೆ ಬೇಕಾಗುತ್ತದೆ. ಸಿಎಂ ಅವರೇ ಅಭಿವೃದ್ಧಿ ಕೇಳಬೇಡಿ, ಅನುದಾನಕ್ಕೆಂದು ಬರಬೇಡಿ ಎಂದು ಹೇಳಿದ್ದಾರೆ. ಜನರ ಗಮನ ಬೇರೆಡೆ ಸೆಳೆಯುವ ಸಲುವಾಗಿ ಆಪರೇಷನ್ ಕಮಲ, ಹುಲಿ ಉಗುರು ಸೇರಿದಂತೆ ಇತರೆ ವಿಚಾರ ಕೆದಕಲಾಗುತ್ತಿದೆ. ಇದೇ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿವೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ. ಬರಗಾಲದಲ್ಲಿಯೂ ಹಣ ಬಿಡುಗಡೆ ಮಾಡಿಲ್ಲ. ಅತಿವೃಷ್ಟಿಯಾದಾಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 2100 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ನಯಾಪೈಸೆ ಬಿಡುಗಡೆ ಮಾಡಿಲ್ಲ. ಒಂದು ಎಕೆರೆಗೆ 6800 ರೂಪಾಯಿಯಿಂದ 13 ಸಾವಿರ ರೂಪಾಯಿಗೆ ಹೆಚ್ಚಿಸಿ ಪರಿಹಾರ ನೀಡಿದ್ದೆವು. ಯಾವ ಸಚಿವರು, ಕಾಂಗ್ರೆಸ್ ಶಾಸಕರು ರೈತರ ಬಗ್ಗೆ ಚಕಾರ ಎತ್ತುತ್ತಿಲ್ಲ. ಹಾವೇರಿ ಜಿಲ್ಲೆಯಲ್ಲಿ ಇದುವರೆಗೆ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಹುಲಿ ಉಗುರು ಸಂಬಂಧ ಈಗ ಎಚ್ಚೆತ್ತಿರುವ ಅರಣ್ಯ ಇಲಾಖೆ ಇಷ್ಟು ವರ್ಷ ಏನು ಮಾಡುತಿತ್ತು. ಅಧಿಕಾರಕ್ಕೆ ಬಂದ ಸರ್ಕಾರಗಳು ಏನು ಮಾಡುತ್ತಿದ್ದವು. ಈಗ ಜನರ ಗಮನ ಬೇರೆಡೆ ಸೆಳೆಯುವ ಸಲುವಾಗಿಯೇ ಇದನ್ನು ದೊಡ್ಡದು
ಎನ್ನುವಂತೆ ಬಿಂಬಿಸಲಾಯಿತು ಎಂದರು.
ಕಾಂಗ್ರೆಸ್ ನ ಭ್ರಷ್ಟಾಚಾರ, ಆಡಳಿತ ವಿರೋಧಿ ನೀತಿ ವಿರುದ್ಧ ರೊಚ್ಚಿಗೇಳುವ ಜನರು ಒದ್ದೋಡಿಸುತ್ತಾರೆ. ನಾಲ್ಕೂವರೆ ವರ್ಷ ಕಾಯುತ್ತೇವೆ. ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. 28 ಕ್ಷೇತ್ರಗಳಲ್ಲಿಯೂ ಬಿಜೆಪಿ – ಜೆಡಿಎಸ್
ಮೈತ್ರಿಕೂಟವೇ ಗೆಲ್ಲಲಿದೆ. ಬಿದ್ದರೆ ಕಾಂಗ್ರೆಸ್ ಸರ್ಕಾರ ವೇ ಬೀಳಬೇಕು. ಸರ್ಕಾರ ತೆಗೆಯಲು ಯಾರೂ ಮನಸು ಮಾಡಲ್ಲ. ಜನರು ಒದ್ದೊಡಿಸ್ತೇವೆ. ನಮಗೆ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.