SUDDIKSHANA KANNADA NEWS/ DAVANAGERE/ DATE-02-05-2025
ದಾವಣಗೆರೆ: ದೇವಸ್ಥಾನ ನಿರ್ಮಾಣ ಮಾಡಲು ನಾವು ಎಷ್ಟು ಕಾಳಜಿ ತೋರಿಸುತ್ತೇವೆಯೋ ಅಷ್ಟೇ ಕಾಳಜಿ, ಗಮನವನ್ನು ಶಾಲೆಗಳ ಅಭಿವೃದ್ಧಿಗೆ ನೀಡಬೇಕಾದ ಅವಶ್ಯಕತೆ ಇದೆ ಎಂದು ಇನ್ ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಪ್ರತಿಪಾದಿಸಿದರು.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಯರಲಬನ್ನಿಕೋಡು ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಕರಿಯಮ್ಮದೇವಿ ಮತ್ತು ಶ್ರೀ ಮಾತಂಗಮ್ಮ ದೇವಾಲಯದ ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ, ಕರಿಗಲ್ಲು ಸ್ಥಾಪನೆ ಮತ್ತು ನೂತನ ಗೋಪುರ ಕಳಸಾರೋಹಣ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಮಕ್ಕಳು ಐಎಎಸ್, ಐಪಿಎಸ್ ಆಗಬೇಕಾದರೆ ನಮ್ಮೂರಿನ ಶಾಲೆಗಳು ಅಭಿವೃದ್ಧಿ ಆಗಬೇಕು ನನ್ನ ಬಲವಾದ ನಂಬಿಕೆ. ದೇವಸ್ಥಾನ ಕಟ್ಟಲು ಆರಂಭದಿಂದ ಹಿಡಿದು ಕೊನೆಯವರೆಗೂ ಎಚ್ಚರ ವಹಿಸುತ್ತೇವೆ. ಅನುದಾನ ಪಡೆಯುತ್ತೇವೆ. ಕಾಳಜಿ ವಹಿಸಿ ಶ್ರದ್ಧಾ ಭಕ್ತಿಯಿಂದ ಕೆಲಸ ಮಾಡುತ್ತೇವೆ. ಅದೇ ರೀತಿಯಲ್ಲಿ ಗ್ರಾಮದ ಶಾಲೆಗಳ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತರೆ ಸುಸಜ್ಜಿತ, ಸುಂದರ ಶಾಲೆ ನಿರ್ಮಾಣ ಅಸಾಧ್ಯವೇನಲ್ಲ ಎಂದು ಅಭಿಪ್ರಾಯಪಟ್ಟರು.
ಯಾವುದೇ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣ ಎಂದರೆ ಶಕ್ತಿಯನುಸಾರ ದುಡ್ಡು ಕೊಡುತ್ತೇವೆ. ಅದೇ ರೀತಿಯಲ್ಲಿ ಶಾಲೆಗಳ ಅಭಿವೃದ್ಧಿಗೆ ಗ್ರಾಮದ ಹಿರಿಯರು, ಮುಖಂಡರು, ಜನರು ಸಹಕಾರ ನೀಡಬೇಕು. ದೇವಸ್ಥಾನ ನಿರ್ಮಾಣ ಆಗುವುದು ಖುಷಿಯ ವಿಚಾರ. ಗ್ರಾಮದ ಜನರಲ್ಲಿ ಒಗ್ಗಟ್ಟು, ಕಳಕಳಿ, ಸಾಮರಸ್ಯಕ್ಕಾಗಿ ದೇವಸ್ಥಾನದ ಅಗತ್ಯತೆ ಇದೆ. ಜೊತೆಗೆ ಸುಸಜ್ಜಿತ, ಸುಂದರ ಶಾಲೆ ಮತ್ತು ಗ್ರಂಥಾಲಯ ಇದ್ದರೆ ಗ್ರಾಮ ಪರಿಪೂರ್ಣವಾಗುತ್ತದೆ ಎಂಬುದು ನನ್ನ ಭಾವನೆ ಎಂದು ಹೇಳಿದರು.
ಜಾತಿ ಬೇಧ ಮರೆತು ಎಲ್ಲರೂ ಜೊತೆಗೆ ಬಂದಿದ್ದೇವೆ. ಊರಿನ ಸಂಸ್ಕೃತಿ, ಒಗ್ಗಟ್ಟು, ನಮ್ಮಲ್ಲಿರುವ ಸಾಮರಸ್ಯ ಕಾಪಾಡಲು ದೇವಸ್ಥಾನ ಬೇಕೇ ಬೇಕು. ಅದೇ ರೀತಿ ಶಾಲೆಗಳೂ ಬೇಕು. ಬನ್ನಿಕೋಡು ಗ್ರಾಮದಲ್ಲಿ ಗ್ರಂಥಾಲಯ ನಿರ್ಮಾಣ ಆಗಬೇಕು. ಪುಸ್ತಕ, ಪೇಪರ್ ಓದುವ ಸಂಸ್ಕೃತಿ ಯುವಕರಲ್ಲಿ ಬರುವಂತಾಗಬೇಕು. ಈ ಗ್ರಾಮದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ನನ್ನ ಕಡೆಯಿಂದ 20 ಸಾವಿರ ಪುಸ್ತಕಗಳನ್ನು ನೀಡಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನೂ ನೀಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ಸಮಾಜ, ವೈಯಕ್ತಿಕ, ಕುಟುಂಬದ ಅಭಿವೃದ್ಧಿ ಆಗುವುದು ಶಿಕ್ಷಣದ ಜ್ಞಾನದಿಂದ ಹೊರತು ಇನ್ಯಾವುದರಿಂದ ಅಲ್ಲ. ನಾನು ಶಿಕ್ಷಣ ಕ್ಷೇತ್ರದಿಂದ ಬಂದಿದ್ದೇನೆ. ಸಾವಿರಾರು ಐಎಎಸ್, ಐಪಿಎಸ್ ಅಧಿಕಾರಿಗಳು ಪಾಸ್ ಆಗಿ ದೇಶದ ಮೂಲೆಮೂಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದ ಐಎಎಸ್ ಟಾಪರ್ ರಂಗಮಂಜು ನನ್ನ ಸಂಸ್ಥೆಯ ವಿದ್ಯಾರ್ಥಿ. ನನ್ನ ಹಾಗೂ ಸಂಸ್ಥೆ ಮಾರ್ಗದರ್ಶನದಲ್ಲಿ ಐಎಎಸ್ ಆಗಿದ್ದು ಸಂತಸ ತಂದಿದೆ ಎಂದು ಜಿ. ಬಿ. ವಿನಯ್ ಕುಮಾರ್ ಹೇಳಿದರು.
ಕಕ್ಕರಗೊಳ್ಳ ಗ್ರಾಮದಲ್ಲಿ ಹೊಸ ದೇವಸ್ಥಾನದ ಉದ್ಘಾಟನೆಗೆ ಹೋಗಿದ್ದೆ. ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳೂ ಬಂದಿದ್ದರು. ನಾನು ದೇವಸ್ಥಾನದ ನಿರ್ಮಾಣಕ್ಕೆ ದೇಣಿಗೆ ಕೊಟ್ಟಿದ್ದೇನೆ ಎಂದು ಹೇಳಿದೆ. ಆಗ ಶ್ರೀಗಳು, ಮುಂದಿನ ದಿನಗಳಲ್ಲಿ ಯಾರೇ ಬಂದು ದೇವಸ್ಥಾನಕ್ಕೆ ದೇಣಿಗೆ ನೀಡಿ ಎಂದು ಕೇಳಿದರೆ ನೀಡಬೇಡ ಎಂದು ಸಲಹೆ ನೀಡಿದರು. ಬನ್ನಿಕೋಡು ಗ್ರಾಮದಲ್ಲಿ ಸುಸಜ್ಜಿತ ದೇವಸ್ಥಾನ ನಿರ್ಮಾಣ ಆಗಬೇಕೆಂಬ ಕನಸು ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿಯೂ ಇತ್ತು. ಅದು ಇಂದು ನೆರವೇರಿದೆ. ಎಲ್ಲರಿಗೂ ಒಳಿತಾಗಲಿ ಎಂದು ಹೇಳಿದರು.
ಹೊನ್ನಾಳಿ ಹಿರೇಕಲ್ಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ, ರಾಮಘಟ್ಟದ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮವನ್ನು ಶಾಸಕ ಡಿ. ಜಿ. ಶಾಂತನಗೌಡರು ಉದ್ಘಾಟಿಸಿದರು. ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ, ಜಿ. ಪಂ. ಮಾಜಿ ಸದಸ್ಯರಾದ ಕೆ. ಹೆಚ್. ಗುರುಮೂರ್ತಿ, ಶೀಲಾ ಗದ್ದಿಗೇಶ್, ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಕೆ. ಹೆಚ್. ಷಣ್ಮುಖಪ್ಪ, ತಾ. ಪಂ. ಮಾಜಿ ಸದಸ್ಯರಾದ ಅಂಬುಜಾ ಮರುಳಸಿದ್ದಪ್ಪ, ರತ್ನಮ್ಮ ಮಲ್ಲಪ್ಪ, ಹೊನ್ನಾಳಿ ಎಪಿಎಂಸಿ ಮಾಜಿ ನಿರ್ದೇಶಕಿ ರೂಪಾ ಡಿ. ದೇವರಾಜ್, ಜಗದೀಶ್, ಮರುಳಸಿದ್ದಪ್ಪ, ಮೋಹನ್, ಸಿದ್ದೇಶ್, ಮಂಜು ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.