ಗುವಾಹಾಟಿ: ಮೊದಲ ಪತ್ನಿಗೆ ಕಾನೂನಾತ್ಮಕವಾಗಿ ವಿಚ್ಛೇದನ (ಡಿವೋರ್ಸ್) ನೀಡದೆ, ಅವರನ್ನು ತೊರೆದು ಎರಡನೇ ಮದುವೆಯಾಗುವ ಸರ್ಕಾರಿ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಸ್ಸಾಂ ಸರ್ಕಾರ ಮುಂದಾಗಿದೆ. ಇಂತಹ ಪ್ರಕರಣಗಳಲ್ಲಿ ನೌಕರನ ಒಟ್ಟು ವೇತನದಲ್ಲಿ ಶೇಕಡಾ 20 ರಷ್ಟನ್ನು ಕಡಿತಗೊಳಿಸಿ, ಅದನ್ನು ನೇರವಾಗಿ ಮೊದಲ ಪತ್ನಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ತಿಳಿಸಿದ್ದಾರೆ.
ಸಂತ್ರಸ್ತ ಮೊದಲ ಪತ್ನಿಯು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ ತಕ್ಷಣ ಈ ನಿಯಮ ಜಾರಿಗೆ ಬರಲಿದೆ. ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದ್ದರೂ, ಪತ್ನಿಗೆ ಆರ್ಥಿಕ ಸಂಕಷ್ಟ ಎದುರಾಗಬಾರದು ಎಂಬ ಉದ್ದೇಶದಿಂದ ಈ ಮಧ್ಯಂತರ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ.
ಬಹುಪತ್ನಿತ್ವಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಸ್ಸಾಂ ಸರ್ಕಾರ ಈಗಾಗಲೇ ಕಠಿಣ ಕಾನೂನುಗಳನ್ನು ಜಾರಿಗೆ ತಂದಿದ್ದು, ಸರ್ಕಾರಿ ಸೇವಾ ನಿಯಮಗಳನ್ನೂ ಬಿಗಿಗೊಳಿಸಿದೆ. ಮುಂಬರುವ ದಿನಗಳಲ್ಲಿ ಖಾಸಗಿ ವಲಯದ ನೌಕರರಿಗೂ ಈ ನಿಯಮವನ್ನು ವಿಸ್ತರಿಸುವ ಕುರಿತು ಶಾಸನಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.





Leave a comment