ದಾವಣಗೆರೆ: 50 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯಕ್ತ ಪೊಲೀಸರ ಬಲೆಗೆ ಕೆಟಿಜೆ ನಗರ ಎಎಸ್ ಐ ಬಿದ್ದಿದ್ದಾರೆ.
ಎಎಸ್ ಐ ಈರಣ್ಣ ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಅಧಿಕಾರಿ.
ಘಟನೆ ಹಿನ್ನೆಲೆ ಏನು?
ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮಣಿಕಂಠ ಆಚಾರ್ಯ ಅವರು ಲೋಕಾಯುಕ್ತ ಪೊಲೀಸರಿಗೆ ಗಣಕೀಕೃತ ದೂರು ನೀಡಿದ್ದರು.
ಮಣಿಕಂಠ ಆಚಾರ್ಯ ಮತ್ತು ಅವರ ತಾಯಿಯಾದ ಭಾಗಮ್ಮ ಆಚಾರ್ಯ ಮತ್ತು ಪತ್ನಿಯಾದ ಅರ್ಚನ ಆಚಾರ್ಯ ಅವರ ವಿರುದ್ಧ ಕೆ.ಟಿ.ಜೆ.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ದೂರುದಾರನ ತಾಯಿ ಮತ್ತು ಪತ್ನಿಯ ಹೆಸರನ್ನು ಚಾರ್ಜಶೀಟ್ ನಿಂದ ಕೈಬಿಡಲು ಕೆ.ಟಿ.ಜೆ. ನಗರ ಪೊಲೀಸ್ ಠಾಣೆಯ ಎ.ಎಸ್.ಐ. ಈರಣ್ಣ 1,00,000 ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಈ ದಿನ ಮುಂಗಡವಾಗಿ 50.000 ರೂ. ನೀಡುವಂತೆ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಪಿಯಾದಿಯವರಿಗೆ ಲಂಚದ ಹಣವನ್ನು ಕೊಟ್ಟು ಕೆಲಸ ಮಾಡಿಸಿಕೊಳ್ಳಲು ಇಷ್ಟವಿಲ್ಲದೇ ಇದ್ದ ಕಾರಣ ಲಂಚದ ಹಣಕ್ಕೆ ಬೇಡಿಕೆ ಇಟ್ಟ ಕೆಟಿಜೆ ನಗರ ಠಾಣೆಯ ಎ.ಎಸ್.ಐ. ಈರಣ್ಣ ರವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಗಣಕೀಕೃತ ದೂರಿನ ಮೇರೆಗೆ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆ ಮೊಕದ್ದಮೆ ಸಂ: 13/2024 ಕಲಂ: 7(a) ಪಿಸಿ ಆಕ್ಟ್-1988 (ತಿದ್ದುಪಡಿ ಕಾಯ್ದೆ-2018) ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಆರೋಪಿತರು ಪಿರ್ಯಾದಿಯವರಿಂದ 50,000 ರೂ ಲಂಚದ ಹಣವನ್ನು ಸ್ವೀಕರಿಸಿದ್ದು ಟ್ರ್ಯಾಪ್ ಕಾರ್ಯಾಚರಣೆ ಯಶಸ್ವಿಯಾಗಿರುತ್ತದೆ.ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎಂ.ಎಸ್.ಕೌಲಾಪೂರೆ ಮಾರ್ಗದರ್ಶನದಲ್ಲಿ, ಶ್ರೀಮತಿ ಉಪಾಧೀಕ್ಷಕಿ ಕಲಾವತಿ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಮಧುಸೂದನ್ ಸಿ., ಪ್ರಭು ಬಸೂರು, ಸರಳ.ಪಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಟ್ರ್ಯಾಪ್ ಯಶಸ್ವಿಯಾಗಿರುತ್ತದೆ.
ಆರೋಪಿತರಾದ ಎ.ಎಸ್.ಐ. ಈರಣ್ಣ ರವರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಳ್ಳಲಾಗಿದೆ.