ಬೆಂಗಳೂರು: ಜಿ ಆರ್ ಫಾರ್ಮ್ ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ಮೂವರು ಪೋಲಿಸ್ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಆದೇಶ ನೀಡಿದ್ದಾರೆ. ಹೆಬ್ಬಗೋಡಿ ಪೋಲೀಸ್ ಠಾಣೆಯ ಎಸ್ ಬಿ ಗಿರೀಶ್, ಎಎಸ್ಐ ನಾರಾಯಣ ಸ್ವಾಮಿ ಮತ್ತು ಬೀಟ್ ಕಾನ್ಸ್‌ಟೇಬಲ್ ದೇವರಾಜು ಅಮಾನತು ಆದ ಅಧಿಕಾರಿಗಳಾಗಿದ್ದಾರೆ.
ರೇವ್ ಪಾರ್ಟಿ ನಡೆದರೂ ಸಂಬಂಧಪಟ್ಟ ಪೋಲೀಸರ ಗಮಕ್ಕಿರಲಿಲ್ಲ, ಪಾರ್ಟಿಯಲ್ಲಿ ನೂರಾರು ಮಂದಿ ಡ್ರಗ್ಸ್ ಲೋಕದಲ್ಲಿ ಮಿಂದೆದ್ದಿದ್ದರು. ಈ ಬಗ್ಗೆ ಸಿಸಿಬಿ ಪೋಲೀಸರಿಗೆ ಸಿಕ್ಕ ಮಾಹಿತಿ ಸ್ಥಳೀಯ ಪೊಲೀಸರಿಗೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಎರಡು ದಿನ ಪಾರ್ಟಿ ನಡೆದಿರೂ ಸ್ಥಳೀಯ ಪೊಲೀಸರಿಗೆ ಮಾಹಿತಿ ಇರದ ಹಿನ್ನಲೆಯಲ್ಲಿ ಸಿಬ್ಬಂದಿ ಮೇಲೆ ಎಸ್ಪಿ ಶಿಸ್ತು ಕ್ರಮ ಕೈಗೊಂಡಿದ್ದಾರೆ. ಇನ್ನು ವಿಪರ್ಯಾಸವೆಂದರೆ ಪಾರ್ಟಿ ನಡೆದ ದಿನ ಹೆಬ್ಬಗೋಡಿ ಇನ್ಸ್‌ಪೆಕ್ಟರ್ ನಾರಾಯಣ್ಣ ರೆಡ್ಡಿ ಮತ್ತು ಡಿವೈಎಸ್ಪಿ ಮೋಹನ್ ಕುಮಾರ್ ನೈಟ್ ರೌಂಡ್ ಇದ್ದರೂ ಈ ಬಗ್ಗೆ ಮಾಹಿತಿ ಪಡೆದಿರಲಿಲ್ಲ.
ಇದರಿಂದಾಗಿ ಡಿವೈಎಸ್ಪಿ ಹಾಗೂ ಇನ್ಸ್‌ಪೆಕ್ಟರ್ ಗೂ ಎಸ್ಪಿ ಚಾರ್ಜ್ ಮೆಮೋ ನೀಡಿದ್ದಾರೆ. ಎರಡು ದಿನ ಪಾರ್ಟಿ ನಡೆದರೂ ನಿಮ್ಮ ಗಮನಕ್ಕೆ ಯಾಕೆ ಬಂದಿಲ್ಲ. ಇದಕ್ಕೆ ಕಾರಣ ನೀಡಿ ಎಂದು ಎಸ್ಪಿ ಚಾರ್ಜ್ ಮೆಮೋ ನೀಡಿದ್ದಾರೆ. ಇನ್ನು ಮೂಲಗಳ ಮಾಹಿತಿ ಪ್ರಕಾರ, ರೇವ್ ಪಾರ್ಟಿ ಆಯೋಜಕರು ಪಾರ್ಟಿ ಪರ್ಮಿಷನ್‌ಗಾಗಿ ಪರಪ್ಪನ ಅಗ್ರಹಾರ ಪೊಲೀಸರನ್ನು ಸಂಪರ್ಕ ಮಾಡಿ ಬರ್ತ್‌ಡೇ ಪಾರ್ಟಿ ಅಂತ ಪರ್ಮಿಷನ್ ಕೇಳಿದ್ದಾರೆ. ಬರ್ತಡೇ ಪಾರ್ಟಿ ತಾನೆ ಅಂತ ಪರಪ್ಪನ ಅಗ್ರಹಾರ ಪೊಲೀಸ್ರು ಸ್ಪಾಟ್ ವೆರಿಫಿಕೇಷನ್ ಮಾಡದೆ ಬಾಯಿ ಮಾತಲ್ಲೇ ಪಾರ್ಟಿ ಮಾಡಿಕೊಳ್ಳಿ ಅಂತ ಹೇಳಿ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.