SUDDIKSHANA KANNADA NEWS/ DAVANAGERE/DATE:03_08_2025
ದಾವಣಗೆರೆ: ನಕಲಿ ಗೋಲ್ಡ್ ನಾಣ್ಯ ನೀಡಿ ಹಣ ಪಡೆದು ವಂಚನೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆ ಹಿನ್ನೆಲೆ:
ಕಳೆದ ಸುಮಾರು ಒಂದೂವರೆ ವರ್ಷದ ಹಿಂದೆ ದೂರುದಾರ ತುಮಕೂರಿನ ಚಿಂಪುಗಾನಹಳ್ಳಿಯ ರಂಗನಾಥ ಅವರು ಗೊರವನಹಳ್ಳಿ, ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ ಸುರೇಶ ಹುಬ್ಬಳ್ಳಿಯವನು ಎಂದು ಹೆಸರು ಹೇಳಿ ಓರ್ವ ವ್ಯಕ್ತಿ ಪರಿಚಯವಾಗಿದ್ದ. ಸುಮಾರು 7 ದಿನಗಳ ಹಿಂದೆ ಪರಿಚಯವಾದ ವ್ಯಕ್ತಿ ಸುರೇಶನು ರಂಗನಾಥನಿಗೆ ಕರೆ ಮಾಡಿ ನನ್ನ ಹಳೆ ಮನೆ ಕೆಡವಿ ಫೌಂಡೇಶನ್ ತೆಗೆಯುವಾಗ ಅಲ್ಲಿ ನನಗೆ ಬಂಗಾರದ ನಾಣ್ಯಗಳು ಸಿಕ್ಕಿವೆ. ನನಗೆ ಹಣದ ಅವಶ್ಯಕತೆ ಇದೆ. ನೀನು ಯಾರಿಗೂ ಹೇಳದೇ ಇದ್ದರೆ ನಿನಗೆ ನಾನು ಕೊಡುತ್ತೇನೆ, ನಿನಗೆ ಸ್ಯಾಂಪಲ್ ಕೊಡುತ್ತೇನೆ. ನೀನು ಬೇಕಾದರೆ ಚೆಕ್ ಮಾಡಿಸು ಅಂತಾ ಹೇಳಿ ಸಂತೆಬೆನ್ನೂರಿಗೆ ಬರಲು ಹೇಳಿದ್ದಾನೆ.
ಈ ಸುದ್ದಿಯನ್ನೂ ಓದಿ: Dharmasthalaದಲ್ಲಿ ಹುಡುಗಿ ಶವ ನೋಡಿದ್ದೇನೆ: ಎಸ್ಐಟಿ ಮುಂದೆ ಇನ್ನೂ ಬರುತ್ತಾರೆ ಜನರು, ಸ್ಫೋಟಕ ಮಾಹಿತಿ!
ಅದರಂತೆ ಜುಲೈ 23ರಂದು ಸಂತೆಬೆನ್ನೂರಿಗೆ ರಂಗನಾಥನು ಬಂದಿದ್ದಾನೆ. ಅಲ್ಲಿ ಸುರೇಶನು ಆತನ ಬಳಿ ಇದ್ದ ಒಂದು ನಾಣ್ಯ ಕೊಟ್ಟಿದ್ದಾನೆ. ಇದು ಬಂಗಾರದ ನಾಣ್ಯ ಎಲ್ಲಿಯಾದರೂ ಹೋಗಿ ಚೆಕ್ ಮಾಡಿಸು ಎಂದಿದ್ದಾನೆ. ಅವನಿಂದ ಕಾಯಿನ್ ಪಡೆದುತುಮಕೂರಿಗೆ ಹೋಗಿ ಅಲ್ಲಿ ಚೆಕ್ ಮಾಡಿಸಿದ ರಂಗನಾಥನಿಗೆ ಅದು ಅಸಲಿ ಬಂಗಾರದ ನಾಣ್ಯವೆಂದು ಗೊತ್ತಾಗಿದೆ.
ಸುರೇಶ ಒಂದು ಕೆಜಿಗೆ ರೂ. 20 ಲಕ್ಷ ಎಂದಿದ್ದು, ರಂಗನಾಥನಿಂದ 5 ಲಕ್ಷ ರೂಪಾಯಿ ಪಡೆದು ಕಾಲು ಕೆಜಿ ಬಂಗಾರ ಕೊಡುವುದಾಗಿ ಹೇಳಿದ್ದಾನೆ. ಸುರೇಶನು 29ರಂದು ದಾವಣಗೆರೆಯ ಕುರ್ಕಿಗೆ ಬರುವಂತೆ ಹೇಳಿದ್ದಾನೆ. ಕುರ್ಕಿ ಗ್ರಾಮಕ್ಕೆ
ರಂಗನಾಥ ಹೋದಾಗ ಸುರೇಶ ಒಂದು ಬಿಳಿ ಬಟ್ಟೆಯಲ್ಲಿ ಕಟ್ಟಿದ್ದ ಒಂದು ಗಂಟು ತೋರಿಸಿ ಇದರಲ್ಲಿ. ಅರ್ದ ಕೆಜಿ ಬಂಗಾರದ ನಾಣ್ಯಗಳಿವೆ ಇದರಲ್ಲಿ ಭಾಗ ಮಾಡಿಕೊಡುತ್ತೇನೆ. ರಸ್ತೆಯಲ್ಲಿ ಬೇಡ ಹಣ ಕೊಡು ಅಂತಾ ಹೇಳಿ ಆತನಿಂದ 5 ಲಕ್ಷ ರೂ ಹಣ ಪಡೆದಿದ್ದಾನೆ.
ಬಳಿಕ ರಸ್ತೆಯಲ್ಲಿ ಬೇಡ ಒಳಗೆ ಹೋಗೋಣ ಬನ್ನಿ ಅಂತೇಳಿ ಹೈವೇ ಪಕ್ಕದ ಜಮೀನಿಗೆ ಹೋಗುವ ಮಣ್ಣಿನ ರಸ್ತೆಗೆ ಕರೆದುಕೊಂಡು ಹೋಗಿದ್ದ ಸುರೇಶನು ಜೋರಾಗಿ ಕೂಗಿಕೊಂಡಿದ್ದಾನೆ, ಆಗ ರಸ್ತೆಯ ಪಕ್ಕದ ಜಮೀನುಗಳಲ್ಲಿದ್ದ ನಾಲ್ವರಿಂದ ಐದು ಮಂದಿ ಕಲ್ಲು ಹಿಡಿದುಕೊಂಡು ಬಂದಿದ್ದಾರೆ. ಆಗ ರಂಗನಾಥನು ಹೆದರಿಕೊಂಡು ಅಲ್ಲಿಂದ ಓಡಿಕೊಂಡು ಹೈವೇ ಮೂಲಕ ಕುರ್ಕಿ ಗ್ರಾಮಕ್ಕೆ ಬಂದಿದ್ದಾರೆ. ಆಗ ಆರೋಪಿ ಸುರೇಶ ವಂಚನೆ ಮಾಡಿದ್ದು ಗೊತ್ತಾಗಿ ಹದಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿತರ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಹಾಗೂ ಜಿ. ಮಂಜುನಾಥ, ಹಾಗೂ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ಬಸವರಾಜ್ ಬಿ. ಎಸ್. ಹಾಗೂ ಮಾಯಕೊಂಡ ವೃತ್ತ ಸಿಪಿಐ ರಾಘವೇಂದ್ರ ಕೆ. ಎನ್. ಮಾರ್ಗದರ್ಶನದಲ್ಲಿ ಹದಡಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಶೈಲ ಪಟ್ಟಣ ಶೆಟ್ಟಿ ನೇತೃತ್ವದಲ್ಲಿ ಪಿ.ಎಸ್.ಐ ಶಕುಂತಲಾ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಚರಣೆ ನಡೆಸಿ, ಸುರೇಶ ಎಂದು ಹೇಳಿಕೊಂಡು ವಂಚನೆ ಮಾಡಿದ್ದ ಚನ್ನಗಿರಿ ತಾಲೂಕಿನ ಚಿಕ್ಕಬ್ಬಿಗೆರೆ ಗ್ರಾಮದ ಮಂಜುನಾಥ (48)ನನ್ನು ಬಂಧಿಸಿದೆ.
ವಂಚನೆ ಮಾಡಿದ್ದ 5,00,000 ರೂ ಹಣ ವಶಪಡಿಸಿಕೊಳ್ಳಲಾಗಿರುತ್ತದೆ. ಈ ಪ್ರಕರಣದಲ್ಲಿನ ಉಳಿದ ಆರೋಪಿತರ ಪತ್ತೆ ಕಾರ್ಯ ಮುಂದುವರೆದಿರುತ್ತದೆ.
ಪ್ರಕರಣದಲ್ಲಿ ಆರೋಪಿ ಪತ್ತೆ ಮಾಡಿ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಸಿಬ್ಬಂದಿಗಳಾದ ರವಿ, ಪ್ರಕಾಶ್, ಮಾರುತಿ, ಶ್ರೀನಿವಾಸ, ನೀಲಪ್ಪ, ಕರಿಬಸಪ್ಪ, ಮಂಜಪ್ಪ, ಸುರೇಶ, ಅಮೃತ್, ಅರುಣಕುಮಾರ, ಸಂತೋಷಕುಮಾರ, ಚನ್ನಬಸಪ್ಪ, ಲಕ್ಷ್ಮಿದೇವಿ, ಮೇಘ, ಹಾಗೂ ಅಶೋಕ, ಜಗದೀಶ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.