ನವದೆಹಲಿ: ಕೇವಲ 5 ವರ್ಷ ವಯಸ್ಸಿನಲ್ಲೇ ಗಣಿತ, ಕಪ್ಪು ರಂಧ್ರಗಳು (Black holes) ಹಾಗೂ ಮಾನವ ತಳೀಯ ಶಾಸ್ತ್ರದ (Human genetics) ಬಗ್ಗೆ ಅದ್ಭುತ ಜ್ಞಾನ ಹೊಂದಿರುವ ಭಾರತೀಯ ಮೂಲದ ಅರ್ಜುನ್ ಪ್ರಜಾಪತಿ ಎಂಬ ಪುಟಾಣಿ ಜಗತ್ತಿನ ಗಮನ ಸೆಳೆದಿದ್ದಾನೆ.
4ನೇ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಹೈ-ಐಕ್ಯೂ ಸಂಸ್ಥೆಗಳಾದ ‘ಮೆನ್ಸಾ’ (Mensa) ಹಾಗೂ ‘ಇಂಟರ್‌ಟೆಲ್’ (Intertel) ಸದಸ್ಯತ್ವ ಪಡೆದಿರುವ ಈತನ ಐಕ್ಯೂ ಸ್ಕೋರ್ 141 ಆಗಿದೆ.
ಸ್ಟ್ಯಾನ್‌ಫೋರ್ಡ್-ಬಿನೆಟ್ (Stanford–Binet) ಪರೀಕ್ಷೆಯ ಪ್ರಕಾರ ಅರ್ಜುನ್ ಅವರ ತಾರ್ಕಿಕ ಹಾಗೂ ನೆನಪಿನ ಶಕ್ತಿಯು ಅತ್ಯಂತ ಉನ್ನತ ಮಟ್ಟದಲ್ಲಿದೆ. ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಹಾಗೂ ಒಂಟಾರಿಯೊ ಪ್ರೀಮಿಯರ್ ಡೌಗ್ ಫೋರ್ಡ್ ಈ ಬಾಲಕನ ಜ್ಞಾನದ ಹಸಿವನ್ನು ಮೆಚ್ಚಿ ಅಭಿನಂದನಾ ಪತ್ರ ಕಳುಹಿಸಿದ್ದಾರೆ. ವೈದ್ಯ ಡಾ. ವಿಶಾಲ್ ವಿ ಪ್ರಜಾಪತಿ ಹಾಗೂ ವಕೀಲೆ ಮಹಿತಾ ದಂಪತಿಯ ಮಗನಾಗಿರುವ ಅರ್ಜುನ್, ಕೇವಲ 18 ತಿಂಗಳ ಮಗುವಾಗಿದ್ದಾಗನಿಂದಲೇ ಪುಸ್ತಕಗಳನ್ನು ಓದಲು ಪ್ರಾರಂಭಿಸಿ, ಇದುವರೆಗೆ 3,000ಕ್ಕೂ ಹೆಚ್ಚು ಪುಸ್ತಕಗಳನ್ನು ಅಭ್ಯಾಸ ಮಾಡಿದ್ದಾನೆ.
ಅಸಾಧಾರಣ ಬುದ್ಧಿಮತ್ತೆ (IQ 141): 4 ವರ್ಷ 10 ತಿಂಗಳಿದ್ದಾಗ ನಡೆಸಿದ ಪರೀಕ್ಷೆಯಲ್ಲಿ ಅರ್ಜುನ್ 141 ಐಕ್ಯೂ ಸ್ಕೋರ್ ಪಡೆದು ಗಿಫ್ಟೆಡ್ ವಿಭಾಗಕ್ಕೆ ಸೇರಿದ್ದಾನೆ.
3,000ಕ್ಕೂ ಹೆಚ್ಚು ಪುಸ್ತಕಗಳ ಅಧ್ಯಯನ: ಖಗೋಳಶಾಸ್ತ್ರ, ಮಾನವ ದೇಹಶಾಸ್ತ್ರ, ಮೈಕ್ರೋಬಯಾಲಜಿ, ಗಣಿತ ಹಾಗೂ ಇತಿಹಾಸಕ್ಕೆ ಸಂಬಂಧಿಸಿದ ಸಾವಿರಾರು ಪುಸ್ತಕಗಳನ್ನು ಓದಿ ಮುಗಿಸಿದ್ದಾನೆ.
ಪೋಷಕರ ಅದ್ಭುತ ಮಾರ್ಗದರ್ಶನ: “ಬಲವಂತವಲ್ಲ, ಪ್ರೋತ್ಸಾಹ” (Fostering, Not Forcing) ಎಂಬ ತತ್ವದಡಿ ಪೋಷಕರು ಮಗನಿಗೆ ಯಾವುದೇ ಮಾನಸಿಕ ಒತ್ತಡ ಹೇರದೆ ಆತನ ಕುತೂಹಲಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡುತ್ತಿದ್ದಾರೆ.
ಅರ್ಜುನ್ ಕೇವಲ ಪುಸ್ತಕದ ಬದನೆಕಾಯಿಯಾಗದೆ, ತಾನು ಕಲಿತ ವಿಜ್ಞಾನವನ್ನು ದೈನಂದಿನ ಜೀವನಕ್ಕೆ ಅನ್ವಯಿಸಿಕೊಳ್ಳುವ ಚಾಣಾಕ್ಷತೆ ಹೊಂದಿದ್ದಾನೆ. ಗಾಯಗೊಂಡಾಗ ಎಕ್ಸ್-ರೇ ಪರೀಕ್ಷೆಯ ಅಗತ್ಯವನ್ನು ತಾನೇ ವೈದ್ಯರಲ್ಲಿ ಕೇಳುವಷ್ಟು ಪ್ರಬುದ್ಧತೆ ಹೊಂದಿರುವ ಈ ಬಾಲಕನಿಗೆ ಮುಂದಿನ ದಿನಗಳಲ್ಲಿ ತನಗೆ ಇಷ್ಟವಾದ ಕ್ಷೇತ್ರದಲ್ಲಿ ಬೆಳೆಯಲು ಪೋಷಕರು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ.





Leave a comment