ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Apmc: ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆದಿರುವುದು ರೈತರಿಗೆ ಮರಣಶಾಸನವಿದ್ದಂತೆ: ಸತೀಶ್ ಕೊಳೇನಹಳ್ಳಿ

On: June 17, 2023 12:07 PM
Follow Us:
Apmc Sathish kolenahalli
---Advertisement---

SUDDIKSHANA KANNADA NEWS/ DAVANAGERE/ DATE:17-06-2023

ದಾವಣಗೆರೆ: ರೈತರ ಹಿತ ದೃಷ್ಟಿಯಿಂದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಜಾರಿಗೊಳಿಸಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಏಕಾಏಕಿ ಹಿಂಪಡೆದಿರುವುದು ಸರಿಯಲ್ಲ. ಕಾಂಗ್ರೆಸ್ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತರಿಗೆ ಮರಣ ಶಾಸನವಾಗಲಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್ ಕೊಳೇನಹಳ್ಳಿ ಆತಂಕ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಎಪಿಎಂಸಿಗಳಿಂದ ಮಾರುಕಟ್ಟೆ ಶುಲ್ಕದ ರೂಪದಲ್ಲಿ ರಾಜ್ಯ ಸರ್ಕಾರಕ್ಕೆ ಬರುತ್ತಿದ್ದ ಆದಾಯ 2018-19ರಲ್ಲಿ ರೂ. 570 ಕೋಟಿ, 2019-20ರಲ್ಲಿ ರೂ. 620 ಕೋಟಿ, 2020-21ರಲ್ಲಿ ರೂ. 300 ಕೋಟಿ, 2021-22ರಲ್ಲಿ ರೂ. 200 ಕೋಟಿ ಮತ್ತು 2022-23ರಲ್ಲಿ ರೂ. 194 ಕೋಟಿ ಕಡಿಮೆಯಾಗುತ್ತಿದೆ ಎಂದಿದ್ದಾರೆ. ಎಪಿಎಂಸಿ ಪ್ರಾಂಗಣಕ್ಕೆ ಬರುವ ರೈತರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ವರ್ತಕರು ಮತ್ತು ಹಮಾಲರ ಲಕ್ಷಾಂತರ ಕುಟುಂಬಗಳು ಬೀದಿಗೆ ಬಿದ್ದಿವೆ. ಆದ್ದರಿಂದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ. ಇವರ ಮಾತಿನಲ್ಲಿ ಸರ್ಕಾರಕ್ಕೆ ರೈತರ ಹಿತಾಸಕ್ತಿ ಗಿಂತ ಎಪಿಎಂಸಿ ಯಿಂದ ಬರುವ ಆದಾಯ ಮತ್ತು ವರ್ತಕರ-ಹಮಾಲರ ಹಿತಾಸಕ್ತಿ ಮುಖ್ಯವಾಗಿದೆ ಎಂದು ಆರೋಪಿಸಿದರು.

ಈ ಸುದ್ದಿಯನ್ನೂ ಓದಿ: 

Parliamentary: ಲೋಕಸಭೆಗೆ ಟಿಕೆಟ್ ಕೊಟ್ಟರೆ ಸ್ಪರ್ಧೆ, ನಾನು ಅಸಮರ್ಥನಲ್ಲ: ಎಸ್ಎಸ್ ಆಶೀರ್ವಾದ ನನ್ಮೇಲಿರಲಿ ಎಂದ ಸಂಸದ ಜಿ. ಎಂ. ಸಿದ್ದೇಶ್ವರ

ಎಪಿಎಂಸಿ ಪ್ರಾಂಗಣದಲ್ಲಿ ಮಾರಾಟ ಮಾಡಲು ಬರುವ ರೈತರಿಗೆ ಆಗುತ್ತಿದ್ದ ಅನ್ಯಾಯ, ಅಕ್ರಮ, ಶೋಷಣೆ ತಪ್ಪಿಸುವ ಉದ್ದೇಶದಿಂದ ರೈತ ಎಲ್ಲಿ ಬೇಕಾದರೂ ಯಾರಿಗೆ ಬೇಕಾದರೂ ಮಾರಾಟ ಮಾಡುವ ಅವಕಾಶ ಕೊಡಲಾಗಿತ್ತು. ಇದರಿಂದ ರೈತರು ತಾವು ಬೆಳೆದ ಉತ್ಪನ್ನಗಳನ್ನು ಹೊಲದಲ್ಲಿ ಅಥವಾ ತಮ್ಮ ಮನೆ ಅಂಗಳದಲ್ಲಿ ದಾಸ್ತಾನು ಮಾಡಿ, ಮಾರಾಟ ಮಾಡುತ್ತಿದ್ದರು. ರೈತರು ತಮ್ಮ ಹೊಲದ ಬಳಿ ಅಥವಾ ತಮ್ಮ ಮನೆ ಅಂಗಳದಲ್ಲಿ ದಾಸ್ತಾನು ಮಾಡಿದ ರಾಶಿ ಧಾನ್ಯಕ್ಕೆ ಉತ್ತಮ ಬೆಲೆ ಸಿಗದಿದ್ದರೆ ಮಾರಾಟ ಮಾಡಲು ನಿರಾಕರಿಸಿ, ಸ್ವಲ್ಪ ದಿನಗಳವರೆಗೆ ಕಾಯುತ್ತಾರೆ. ಎಪಿಎಂಸಿಗೆ ತಂದರೆ ಚೀಲಕ್ಕೆ ತುಂಬಿ ವಾಹನಕ್ಕೆ ಏರುವ ಹಮಾಲಿ ಖರ್ಚು ಮತ್ತು ಸಾಗಾಣಿಕೆ ಮಾಡುವ ಖರ್ಚು ರೈತನಿಗೆ ತಗಲುತ್ತದೆ. ಅಂದು ಎಪಿಎಂಸಿಯಲ್ಲಿ ಉತ್ತಮ ಬೆಲೆ ಸಿಗದಿದ್ದರೆ ಅಲ್ಲಿ ದಾಸ್ತಾನು ಮಾಡುವ ಅನುಕೂಲತೆ ಇರುವುದಿಲ್ಲ, ಸುರಕ್ಷತೆ ಖಾತ್ರಿ ಇರುವುದಿಲ್ಲ ಮತ್ತು ಲೋಡ್ ಮಾಡಿಕೊಂಡು ಹಿಂದುರುಗಿ ತೆಗೆದುಕೊಂಡು ಹೋಗಲು ಆಗದೆ, ದಲಾಲರು ಖರೀದಿದಾರರು ನಿರ್ಧರಿಸಿದ ಬೆಲೆಗೆ ಮಾರಾಟ ಮಾಡಿ ಹೋಗುವ ಅಸಹಾಯಕ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಎಪಿಎಂಸಿ ಸಚಿವ ಶಿವಾನಂದ ಪಾಟೀಲ ರವರು ಹೊಲದಲ್ಲಿಯೇ ಎಲ್ಲಾ ಬಾಚಿಕೊಂಡು ಹೋಗುತ್ತಾರೆ ಎಂದು ಹೇಳಿದ್ದಾರೆ. ಇದು ಸರ್ಕಾರಕ್ಕೆ ರೈತರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ ಎಂಬುದನ್ನು ತೋರಿಸುತ್ತದೆ. ಇವರಿಗೆ ರೈತರ ಸಬಲೀಕರಣ ಮತ್ತು ಸಂರಕ್ಷಣೆ ಮಾಡುವ ಉದ್ದೇಶ ಇಲ್ಲ. ಬೆಲೆ ಖಾತ್ರಿ ಮತ್ತು ಕೃಷಿ ಸೇವೆ ಒದಗಿಸುವ ಬದ್ಧತೆ ಇಲ್ಲ ಎಂದು ಕಿಡಿಕಾರಿದರು.

ದಾವಣಗೆರೆ ತಾಲ್ಲೂಕಿನಲ್ಲಿ ಪ್ರಸ್ತುತ ಹಂಗಾಮಿನಲ್ಲಿ ಸುಮಾರು 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, 109250 ಮೆಟ್ರಿಕ್ ಟನ್ ಭತ್ತದ ಉತ್ಪಾದನೆಯಾಗಿದೆ. ಇದರಲ್ಲಿ ಮೊನ್ನೆಯವರೆಗೆ ಕೇವಲ 8803 ಮೆಟ್ರಿಕ್ ಟನ್ ಭತ್ತ ದಾವಣಗೆರೆ ಎಪಿಎಂಸಿಯಲ್ಲಿ ಮಾರಾಟವಾಗಿದೆ. ತಾಲ್ಲೂಕಿನ ಭತ್ತದ ಒಟ್ಟು ಉತ್ಪಾದನೆಯಲ್ಲಿ ಕೇವಲ ಶೇಕಡ 8% ರಷ್ಟು ಮಾತ್ರ ಎಪಿಎಂಸಿಯಲ್ಲಿ ಮಾರಾಟವಾಗಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರಾದ ಪಿ. ನಾಗೇಶ್ವರ ರಾವ್, ಜೀವನ್ ಪ್ರಕಾಶ್, ಹೆಚ್. ಜಿ. ಗಣೇಶಪ್ಪ ಕುಂದುವಾಡ, ಹೆಚ್. ಹಾಲಪ್ಪ ಹೂವಿನಮಡು ಮತ್ತಿತರರು ಹಾಜರಿದ್ದರು.

Apmc News, Apmc Suddi, Apmc in Davanagere, Apmc Ex President Pressmeet,

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment