SUDDIKSHANA KANNADA NEWS/ DAVANAGERE/ DATE:13-01-2024
ದಾವಣಗೆರೆ: ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಯಾರೇ ಆಯ್ಕೆಯಾದರೂ ಸಂಪೂರ್ಣ ಸಹಕಾರ ನೀಡುತ್ತೇವೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಜಯಭೇರಿ ಬಾರಿಸಬೇಕು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಕೇಂದ್ರದ ವರಿಷ್ಠರಿಗೆ ಮುಜುಗರ ತರುವ ಕೆಲಸ ಮಾಡಲ್ಲ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷರು ಹಾಗೂ ವರಿಷ್ಠರು ಜಿಲ್ಲಾಧ್ಯಕ್ಷರ ನೇಮಕವನ್ನು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಮಾಡುತ್ತಾರೆ.ನನ್ನ ಅಭಿಪ್ರಾಯ ಕೇಳಿದ್ದಾರೆ. ಹಾಗಾಗಿ ನಾನು ಹೇಳಿದ್ದೇನೆ. ಎಲ್ಲರೂ ಪಕ್ಷಕ್ಕೆ ದುಡಿದವರು. ಇಲ್ಲಿ ಯಾವ ಗುಂಪು ಇಲ್ಲ. ಸಮರ್ಥರನ್ನು ಆಯ್ಕೆ ಮಾಡಬೇಕು ಎಂಬುದು ನಮ್ಮ ಬೇಡಿಕೆ ಎಂದು ತಿಳಿಸಿದರು.
ಸಂಘರ್ಷದಿಂದ ಯಾವ ಕೆಲಸ ಮಾಡಲುಸಾ ಧ್ಯವಿಲ್ಲ. ಸಂಘಟನೆಯಿಂದ ಸಾಮರಸ್ಯ ಇದೆ. ಸಂಘರ್ಷ ಬೇಕು, ಆದರೆ ಎಲ್ಲಾ ಸಮಯದಲ್ಲಿ ಇರಬಾರದು. ಪಕ್ಷ ಕಟ್ಟುವ ಉದ್ದೇಶದಿಂದ ಸಾಮರಸ್ಯ ಬೇಕಿದೆ. ಲೋಕಸಭಾ ಚುನಾವಣೆ ಗೆಲ್ಲಬೇಕಿದೆ. ಪಕ್ಷ ಯಾರಿಗೇ ಜಿಲ್ಲಾಧ್ಯಕ್ಷ ಸ್ಥಾನ ನೀಡಿದರೂ ನಮ್ಮ ಬೆಂಬಲ ಇದೆ ಎಂದು ಹೇಳಿದರು.
ಶಿವಮೊಗ್ಗದಲ್ಲಿ ನಡೆದ ಯುವನಿಧಿ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಅಕ್ಕಪಕ್ಕದ ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿದೆ ಬಿಸಿಲಿನಲ್ಲಿ ವಿದ್ಯಾರ್ಥಿಗಳು ಬಳಲಿದ್ದಾರೆ ಜೊತೆಗೆ ವಿದ್ಯಾರ್ಥಿಗಳಿಗೆ ಉಪಹಾರವನ್ನೂ ಸರಿಯಾಗಿ ನೀಡಿಲ್ಲ. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಅವರು ಐದನೇ ಭರವಸೆ ಲೋಕಾರ್ಪಣೆ ಮಾಡಿದ್ದಾರೆ. ಆದರೆ ಈ ಗ್ಯಾರಂಟಿಯ ಭರವಸೆಗಳು ಲೋಕಸಭಾ ಚುನಾವಣೆವರೆಗೆ ಮಾತ್ರ ಎಂದರು.
ಸರ್ಕಾರಿ ಆದೇಶವಿಲ್ಲದಿದ್ದರೂ ಕೂಡ ಎಂ.ಎ., ಎಂಎಸ್ಸಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರೆ ಅವರು ಸಹ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಸರ್ಕಾರಿ ಆದೇಶಿರುವುದು ಪದವಿ ಕೋರ್ಸ್ ಮುಗಿದು ಆರುತಿಂಗಳು ಸರ್ಕಾರಿ ಕೆಲಸ ಸಿಗದಿದ್ದರೆ ಅಂತವರಿಗೆ ಯುವ ನಿಧಿಕೊಡುವುದಾಗಿ ಹೇಳಿದ್ದಾರೆ. ನಿರುದ್ಯೋಗಿ ಯುವ ಸಮೂಹಕ್ಕೆ ಯುವನಿಧಿ ಅನ್ವಯವಾಗುತ್ತದೆ ಎನ್ನುತ್ತಾರೆ. ಆದರೆ ಕಾಲೇಜು ಓದುವ ಮಕ್ಕಳನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ನಾವು ಗ್ಯಾರಂಟಿ ಯೋಜನೆಯ ವಿರುದ್ದ ಇಲ್ಲ ಆದರೆ ಕಾಲೇಜಿನಲ್ಲಿ ಓದುವ ಮಕ್ಕಳನ್ನು 1 ಸಾವಿರಕ್ಕೂ ಹೆಚ್ಚು ಬಸ್ ಗಳಲ್ಲಿ ಕರೆದುಕೊಂಡು ಹೋಗಿದ್ದಾರೆ. ಯೂನಿಫಾರಂ ಹಾಕಿದ್ದ ವಿದ್ಯಾರ್ಥಿಗಳೇ ಕಾರ್ಯಕ್ರಮದಲ್ಲಿ ಇದ್ದಾರೆ. ಈ ಬಗ್ಗೆ ಡಿಸಿಗೆ ಕೇಳಿದರೆ ಸ್ಪಷ್ಟ ಉತ್ತರ ಇಲ್ಲ. ಡಿಸಿ ಸರ್ಕಾರಿ ಏಜೆಂಟರಾಗಿ ಕೆಲಸ ಮಾಡಿದ್ದಾರೆಂದರು.
ಕಾಂಗ್ರೆಸ್ ನ ಐದು ಭರವಸೆಗಳು ಬೋಗಸ್ ಆಗಿವೆ. ಗೃಹಲಕ್ಷ್ಮೀ ಫ್ಲಾಪ್ ಆಗಿದೆ. ಅರ್ಹ ಬಡ ಮಹಿಳೆಯರಿಗೆ ತಲುಪಿಲ್ಲ. ಶಕ್ತಿ ಯೋಜನೆಗೆ ಬಸ್ ಇಲ್ಲ. ಗ್ರಾಮೀಣ ಭಾಗದಲ್ಲಿ ಬಸ್ ಇಲ್ಲ. ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಸಿಗುತ್ತಿಲ್ಲ. ಅನ್ನ ಭಾಗ್ಯವೂ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಕೇಂದ್ರ ಸರ್ಕಾರ ನೀಡಿದ ಅಕ್ಕಿಯನ್ನೇ ನೀಡಿದ್ದಾರೆ. ಗೃಹಜ್ಯೋತಿ ಬಿಲ್ ಹೆಚ್ಚಾಗಿದೆ. ಗ್ಯಾರಂಟಿ ಯೋಜನೆ ನಿರ್ವಹಿಸಲು ಸರ್ಕಾರದ ಹಣ ಪೋಲು ಮಾಡಲಾಗುತ್ತಿದೆ. ಕೆಪಿಸಿಸಿ ಯಿಂದ ಹಣ ಕೊಡಿ ಬೇಕಿದ್ದರೆ. ಸರ್ಕಾರದ ಹಣ ಏಕೆ ಕೊಡುತ್ತೀರಾ
ಎಂದು ಹರಿಹಾಯ್ದರು.
ಈಗ ರಾಮನ ಜಪ ಪ್ರಾರಂಭ ಮಾಡಿದ್ದಾರೆ. ರಾಮನ ಬಗ್ಗೆ ಜನ್ಮ ಪ್ರಮಾಣ ಪತ್ರ ಕೇಳಿದರು, ಕರ ಸೇವಕರ ಬಂಧಿಸಿದ್ದ ಕಾಂಗ್ರೆಸ್ ನವರು ಈಗ ಶ್ರೀರಾಮ ಮಂದಿರದ ಉದ್ಘಾಟನೆಗೆ ನಮ್ಮನ್ನು ಕರೆದಿಲ್ಲ ಎನ್ನುತ್ತಾರೆ. ಆದರೆ ಎಲ್ಲಾ ರಾಷ್ಟ್ರೀಯ ನಾಯಕರನ್ನು ಕರೆಯಲಾಗಿದೆ. ಇದು ಬಿಜೆಪಿ ಕಾರ್ಯಕ್ರಮ ಅಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಟ್ರಸ್ಟ್ ಅಡಿ ಮಂದಿರ ನಿರ್ಮಾಣ ಮಾಡಲಾಗಿದೆ. ಪರಿವಾರದ ಶ್ರಮ, ಭಕ್ತರ ಸಹಕಾರದಿಂದ ಮಂದಿರ ನಿರ್ಮಾಣವಾಗಿದೆ. ಪ್ರತಿಯೊಂದಕ್ಕೂ ಲೆಕ್ಕ ಪತ್ರದ ಆಡಿಟ್ ಇದೆ ಎಂದರು.
ಸಿಎಂ ತಮ್ಮ ಹೆಸರಿನಲ್ಲೇ ರಾಮನ ಹೆಸರು ಇಟ್ಟುಕೊಂಡಿದ್ದಾರೆ. ಅಲ್ಪಸಂಖ್ಯಾತರ ತುಷ್ಠೀಕರಣ ಮಾಡುತ್ತಾರೆ. ಶ್ರೀರಾಮನ ಶಾಪಕ್ಕೆ ಗುರಿಯಾಗಲಿದ್ದಾರೆ. ರೈತರ ಶಾಪ, ಹಿಂದೂಗಳ ಶಾಪದಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಶತಸಿದ್ದ ಎಂದರು.
ಗೋಷ್ಠಿಯಲ್ಲಿ ಆರೈಕೆ ಆಸ್ಪತ್ರೆಯ ಮುಖ್ಯಸ್ಥ ಡಾ. ಟಿ. ಜಿ. ರವಿಕುಮಾರ್, ಕೆ. ಪಿ. ಕಲ್ಲಿಂಗಪ್ಪ, ಶಿವಪ್ರಕಾಶ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್, ರಾಜು ವೀರಣ್ಣ, ಪ್ರವೀಣ್ ಜಾಧವ್, ದಯಾನಂದ್, ಜಯರುದ್ರೇಶ್,ಮೋಹನ್,ಅಣಜಿ ಬಸವರಾಜ್ ಉಪಸ್ಥಿತರಿದ್ದರು.