SUDDIKSHANA KANNADA NEWS/ DAVANAGERE/ DATE:13-12-2024
ದಾವಣಗೆರೆ: ದಾವಣಗೆರೆ ಜಿಎಂ ವಿವಿಯಲ್ಲಿ ಹಮ್ಮಿಕೊಂಡಿದ್ದ ಓಪನ್ ಡೇ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಂಡಿತು.
ಜಿಎಂಯು ವಿದ್ಯಾರ್ಥಿಗಳ ಆವಿಷ್ಕಾರಗಳ ಪ್ರತಿಭೆ ಅನಾವರಣ:
ಕಾಡುಗಳ ರಕ್ಷಣೆ, ಗಡಿ ಭಾಗಗಳ ಭದ್ರತೆ, ಆರೋಗ್ಯ, ಕೃಷಿ ಉಪಯೋಗಿ ಸೇರಿದಂತೆ ಸಮಾಜಮುಖಿಯಾದ ಹೊಸ ಹೊಸ ಆವಿಷ್ಕಾರಗಳ ಪ್ರತಿಭೆಗಳು ಜಿಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿವಿಧ ಯೋಜನೆಗಳ ಪ್ರದರ್ಶನದಲ್ಲಿ ಅನಾವರಣಗೊಂಡವು. ಇವು ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳ ಗಮನ ಸೆಳೆದು, ಮಾರ್ಗದರ್ಶನ ಮತ್ತು ಪ್ರೇರಣೆ ನೀಡಿದವು.
ಸ್ವಾಯತ್ತ ಅಗ್ನಿಶಾಮಕ ರೋಬೋಟ್:
ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಎನ್. ಐಶ್ವರ್ಯ, ಪಿ.ಹೆಚ್. ಚಂದನಾ, ಅಮೀನ್ ವುದ್ದಿನ್ ಷಾ, ಕೆ.ಎಸ್. ಪ್ರಪಂಚ್ ಸೇರಿ ತಯಾರಿಸಿದ್ದ ಸ್ವಾಯತ್ತ ಅಗ್ನಿಶಾಮಕ ರೋಬೋಟ್ ಬೆಂಕಿಯನ್ನು ಪತ್ತೆ ಮಾಡಿ ನಂದಿಸುತ್ತದೆ. ಕೈಗಾರಿಕಾ, ವಾಣಿಜ್ಯ ಮತ್ತು ದೂರದ ಪರಿಸರಗಳಲ್ಲಿ ಇದನ್ನು ಬಳಸಬಹುದು.
ಆಂಟಿ-ಪೋಚಿಂಗ್ ಟ್ರೀ ಮಾನಿಟರಿಂಗ್ ಸಿಸ್ಟಮ್:
ಈ ವಿಧಾನವನ್ನು ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಜಿ.ಬಿ. ಹಿಂದು, ಡಿ. ಜಯಂತ್, ಎಂ. ಲಕ್ಷ್ಮೀ, ಮಹಮ್ಮದ್ ಸೂಫಿಯಾನ್ ಸೇರಿ ಕಾಡುಗಳಲ್ಲಿನ ಜೀವವೈವಿಧ್ಯ ಮತ್ತು
ಪರಿಸರದಲ್ಲಿನ ಮರಗಳ ಹಾಗೂ ತೋಟಗಳ ರಕ್ಷಣಾ ಕಾರ್ಯಕ್ಕಾಗಿ ಸಿದ್ದಪಡಿಸಿದ ಈ ತಂತ್ರಜ್ಞಾನವು ಅಕ್ರಮ ಪತ್ತೆ ಮಾಡಲು ಜಿಪಿಎಸ್ ಮತ್ತು ಲಿ-ಐಯಾನ್ ಬ್ಯಾಟರಿ ಚಟುವಟಿಕೆಗಳನ್ನು ಒಳಗೊಂಡಿದೆ. ಈ ತಂತ್ರಜ್ಞಾನವನ್ನು ಮರಗಳಿಗೆ ಅಳವಡಿಸಿದರೆ ಅಕ್ರಮ ಮರ ಕಡಿಯುವ ಬಗ್ಗೆ ಸೂಚನೆ ನೀಡುವುದು, ಇನ್ನೂ ತೋಟಗಳಿಗೆ ಅಳವಡಿಸಿದರೆ ಪ್ರಾಣಿಗಳು ಬಂದಾಗ ಸೂಚನೆ ನೀಡುವುದು.
ಹೃದಯ ಮೇಲ್ವಿಚಾರಣಾ ಯೋಜನೆ:
ಹೃದಯದ ಸಮಸ್ಯೆಯುಳ್ಳವರು ಈ ಯಂತ್ರೋಪಕರಣವನ್ನು ಅಳವಡಿಸಿಕೊಂಡರೆ ತುರ್ತು ಸಮಯದಲ್ಲಿ ಅವರಿರುವ ಸ್ಥಳ, ಗುರುತಿಸುವಿಕೆ, ಮೇಲ್ವಿಚಾರಣೆಗೆ ಪ್ರತಿಕ್ರಿಯಿಸುವ ವ್ಯವಸ್ಥೆಯನ್ನು ಒಳಗೊಂಡಿದೆ. ಜಿಪಿಎಸ್ ಮತ್ತು ಜಿಎಸ್ಎಂ ಮಾಡ್ಯೂಲ್ ಮತ್ತು ರೋಬೋಟಿಕ್ ನಿಯಂತ್ರಣ ವ್ಯವಸ್ಥೆ ಸೇರಿವೆ. ಇದನ್ನು ರೋಬೋಟಿಕ್ಸ್ ಮತ್ತು ಆಟೋಮೇಷನ್ ವಿಭಾಗದ ಮೂರನೇ ವರ್ಷದ ವಿದ್ಯಾರ್ಥಿಗಳಾದ ಹೆಚ್.ವಿ. ಶ್ರೇಯಸ್, ಎಂ. ವಿಕಾಸ್, ಪಿ.ಎಚ್. ಪ್ರಜ್ವಲ್ ಸಿದ್ದಪಡಿಸಿದ್ದಾರೆ.
ಆಪತ್ಬಾಂಧವ ರೋಬೋಟ್ ಕಾರು:
ರೋಬೋಟಿಕ್ಸ್ ಮತ್ತು ಆಟೋಮೇಷನ್ ವಿಭಾಗದ ವಿದ್ಯಾರ್ಥಿಗಳಾದ ಜೆ.ಎನ್. ನಿತಿನ್, ಬಿ.ಎ. ಪ್ರಜ್ವಲ್, ಎಸ್. ಮನಿಷ್ ಸೇರಿ ತಯಾರಿಸಿರುವ 4 ಇನ್ 1 ರೋಬೋಟ್ ಕಾರು ಯೋಜನೆಯು ಆಪತ್ಬಾಂಧವದಂತೆ. ಇದು ಕಾರಿನ ಹಿಂದೆ ಮತ್ತು ಮುಂದೆ ಚಲನೆಯ ವೇಳೆ ಯಾವುದೇ ಅಡಚಣೆಗಳು ಇದ್ದರೆ ತಪ್ಪಿಸುವುದು, ಹಾಗೇನಾದ್ರೂ ಚಾಲಕ ನಿದ್ದೆಗೆ ಜಾರಿದರೆ ಅಥವಾ ಪ್ರಜ್ಞೆ ಇಲ್ಲದೆ ಇದ್ದರೆ ಸುರಕ್ಷಿತವಾಗಿ ಚಲಿಸುವಂತಹ ವಿಧಾನವು ಈ ರೋಬೋ ಕಾರಿನ ವೈಶಿಷ್ಟವಾಗಿದೆ.
ಕಸದಿಂದ ಕರೆಂಟ್:
ಸುಡುವ ತ್ಯಾಜ್ಯ ವಸ್ತುಗಳಿಂದ ಉತ್ಪತ್ತಿಯಾಗುವ ಶಾಖವನ್ನು ಸೌರ ಫಲಕಗಳು ಹೀರಿಕೊಳ್ಳುತ್ತವೆ, ಅವುಗಳು ಉಷ್ಣ ಸಂಗ್ರಾಹಕಗಳನ್ನು ಹೊಂದಿವೆ. ಸೌರ ನಿಯಂತ್ರಕವು ನಂತರ ಸೆರೆಹಿಡಿಯಲಾದ ಉಷ್ಣ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ, ಅದನ್ನು ಬ್ಯಾಟರಿಯಲ್ಲಿ ಸಂಗ್ರಹಿಸಿಕೊಂಡು ಆ ಮೂಲಕ ವಿದ್ಯುತ್ತನ್ನು ಬಳಸುವಂತಹ ಹೊಸದಾದ ತ್ಯಾಜ್ಯ ನಿರ್ವಹಣೆಯಿಂದ ನೇರ ವಿದ್ಯುತ್ ಉತ್ಪಾದನೆ ಯೋಜನೆಯನ್ನು ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಎಸ್.ಕೆ. ಸೃಜನ್, ಸಿ.ಎಸ್. ರವಿ, ಎಸ್.ಹೆಚ್. ದರ್ಶನ್, ವಿ. ಪ್ರಜ್ವಲ್ ಸೇರಿ ಸಿದ್ದಪಡಿಸಿದ್ದಾರೆ.
ಪೋರ್ಟಬಲ್ ಸೌರ-ಚಾಲಿತ ನೀರು:
ಪೋರ್ಟಬಲ್ ಸೌರ-ಚಾಲಿತ ನೀರು ಯೋಜನೆಯು ಗ್ರಾಮೀಣಕ್ಕಾಗಿ ಶುದ್ಧೀಕರಣ ನೀರಿನ ವ್ಯವಸ್ಥೆಯನ್ನು ಒಳಗೊಂಡಿದೆ. ಶುದ್ಧ ಕುಡಿಯುವ ನೀರನ್ನು ಒದಗಿಸುವುದು ಮತ್ತು ಸುಧಾರಿತ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಪಿ. ರಾಕೇಶ, ಸಿ. ಸಚಿನ್, ಪಿ.ಜೆ. ಶಶಾಂಕ್, ಬಿ.ವಿ. ವಿದ್ಯಾಶ್ರೀ ಸೇರಿ ಸಿದ್ದಪಡಿಸಿರುವ ಯೋಜನೆ ಇದಾಗಿದೆ.
ಇವಿಷ್ಟೇ ಅಲ್ಲದೇ, ಮನೆ, ಕೈಗಾರಿಕೆಗಳು, ಆರೋಗ್ಯ ಕೇಂದ್ರಗಳು ಸೇರಿದಂತೆ ಅವಶ್ಯಕ ಪ್ರದೇಶಗಳಲ್ಲಿ ಮಾನವನ ಸೇವೆ ಬದಲಿಗೆ ಈಗಿನ ತಾಂತ್ರಿಕ ಯುಗಕ್ಕೆ ತಕ್ಕಂತೆ ರೋಬೋಗಳ ಮೂಲಕ ಸೇವಾ ಕಾರ್ಯವನ್ನು ಪಡೆಯಬಹುದಾಗಿರುವಂತಹ ಸ್ಮಾರ್ಟ್ ಸರ್ವಿಸ್ ರೋಬೋವನ್ನು ರೋಬೋಟಿಕ್ಸ್ ಮತ್ತು ಆಟೋಮೇಷನ್ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ್ದರು. ಗಡಿ ಭಾಗದಲ್ಲಿ ಅಕ್ರಮ ಪ್ರವೇಶದ ಬಗ್ಗೆ ಸೂಚನೆ ನೀಡುವ ರೋಬೋಟ್, ಕಾಲೇಜು ವಿದ್ಯಾರ್ಥಿಯ ಗುರುತಿಸುವಿಕೆ ಮತ್ತು ಕಾಲೇಜು ವಿದ್ಯಾರ್ಥಿ ಅಲ್ಲದವರನ್ನು ತಡೆಗಟ್ಟುವಿಕೆಗೆ ಗುರುತಿನ ಕಾರ್ಡ್ ನಲ್ಲಿ ತಂತ್ರಜ್ಞಾನದ ಮೂಲಕ ಕಂಡುಹಿಡಿವ ಹೊಸ ಉಪಾಯದ ಯೋಜನೆ, ಬ್ಯಾಟರಿ ಮತ್ತು ಸೋಲಾರ್ ಹಸಿರು ಕತ್ತರಿಸುವ ಯಂತ್ರೋಪಕರಣ ಸೇರಿದಂತೆ ವಿವಿಧ ಹೊಸ ಯೋಜನೆಗಳು ಗಮನ ಸೆಳೆದವು.