ನವದೆಹಲಿ/ಮಿಸ್ಸಿಸ್ಸಾಗಾ: ಕೆನಡಾದ ಮಿಸ್ಸಿಸ್ಸಾಗಾ ನಗರದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿರುವ ಆಂಧ್ರ ಮೂಲದ ಭಾರತೀಯ ಮೂಲದ ರಾಜಕಾರಣಿ ದೀಪಿಕಾ ದೆಮರ್ಲಾ, ವಿಶಿಷ್ಟ ಶೈಲಿಯಲ್ಲಿ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಪ್ರಸಿದ್ಧ ಹಿಂದಿ ಹಾಡಿನ ಧಾಟಿಗೆ ತಕ್ಕಂತೆ ರಾಜಕೀಯ ಸಾಹಿತ್ಯವನ್ನು ಜೋಡಿಸಿ, ಬಾಲಿವುಡ್ ಶೈಲಿಯಲ್ಲಿ ವೀಡಿಯೊ ಮೂಲಕ ಮತಯಾಚನೆ ಮಾಡುವ ಮೂಲಕ ಅವರು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ.
ಈ ವೀಡಿಯೊದಲ್ಲಿ ಅವರು ಪ್ರಸಿದ್ಧ ಕ್ಯಾ ಹುವಾ ತೇರಾ ವಾದಾ ಹಿಂದಿ ಹಾಡಿನ ರಾಗವನ್ನು ಬಳಸಿ, ತಾವು ಮೇಯರ್ ಆದರೆ ಆಸ್ತಿ ತೆರಿಗೆಯನ್ನು ಹೆಚ್ಚಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. “ಆ ಬಿಸಿಬಿಸಿ ಮೇಯರ್ ಚರ್ಚೆಯ ನಂತರ, ಇಲ್ಲಿ ನಿಮಗೊಂದು ಸಣ್ಣ ಮನರಂಜನೆ” ಎಂದು ಬರೆದು ತಮ್ಮ ಎಕ್ಸ್ (X) ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ತೆರಿಗೆ ವಿನಾಯಿತಿ ಭರವಸೆ: ಮೇಯರ್ ಆದ ಕೂಡಲೇ ಆಸ್ತಿ ತೆರಿಗೆಯನ್ನು ಯಾವುದೇ ಕಾರಣಕ್ಕೂ ಹೆಚ್ಚಿಸುವುದಿಲ್ಲ ಎಂಬ ಮಹತ್ವದ ಭರವಸೆ ನೀಡಲಾಗಿದೆ.
ರಾಜಕೀಯ ಹಿನ್ನೆಲೆ: ದೀಪಿಕಾ ದೆಮರ್ಲಾ ಅವರು 2018ರಲ್ಲಿ ಮಿಸ್ಸಿಸ್ಸಾಗಾ ನಗರದ ವಾರ್ಡ್ 7ರ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದು, ಒಂಟಾರಿಯೊ ಸರ್ಕಾರದ ಮಾಜಿ ಆರೋಗ್ಯ ಮತ್ತು ಹಿರಿಯ ನಾಗರಿಕರ ಸಚಿವೆಯಾಗಿ ಸೇವೆ ಸಲ್ಲಿಸಿದ್ದಾರೆ.
ಬಾಲಿವುಡ್ ಪ್ರಭಾವ: ಕಳೆದ ವರ್ಷ ನ್ಯೂಯಾರ್ಕ್ ಸಿಟಿ ಮೇಯರ್ ಚುನಾವಣೆಯಲ್ಲಿ ಜೋಹ್ರಾನ್ ಮಾಮ್ಲಾನಿ ಅವರು ಬಾಲಿವುಡ್ ಶೈಲಿಯ ವೀಡಿಯೊಗಳನ್ನು ಬಳಸಿದಂತೆ, ಈಗ ದೀಪಿಕಾ ಕೂಡ ಅದೇ ಶೈಲಿಯನ್ನು ಅನುಸರಿಸಿ ಯುವ ಮತದಾರರನ್ನು ಆಕರ್ಷಿಸುತ್ತಿದ್ದಾರೆ.
ರೋಟ್‌ಮನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್‌ನಿಂದ ಹಣಕಾಸಿನಲ್ಲಿ ಎಂಬಿಎ ಪದವಿ ಪಡೆದಿರುವ ದೀಪಿಕಾ ದೆಮರ್ಲಾ, ರಾಜಕೀಯಕ್ಕೆ ಬರುವ ಮುನ್ನ ಕಾರ್ಪೊರೇಟ್ ಬ್ಯಾಂಕಿಂಗ್ ಮತ್ತು ಸಣ್ಣ ವ್ಯಾಪಾರ ನಡೆಸುತ್ತಿದ್ದರು. ಕೆನಡಾ ರಾಜಕೀಯದಲ್ಲಿ ಭಾರತೀಯರ ಅದರಲ್ಲೂ ಆಂಧ್ರ ಮೂಲದವರ ಈ ನಾವೀನ್ಯತೆ ಭರಿತ ಪ್ರಚಾರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.





Leave a comment