- SUDDIKSHANA KANNADA NEWS| DAVANAGERE| DATE:28-04-2023
ದಾವಣಗೆರೆ (DAVANAGERE): ಹರಿಹರದ ಗಾಂಧಿ ಮೈದಾನದಲ್ಲಿ ಬಿಜೆಪಿ (BJP) ಬಹಿರಂಗ ಸಭೆ ಆಯೋಜಿಸಲಾಗಿತ್ತು. ವೇದಿಕೆ ಮೇಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ (AMITH SHA) ಭಾಷಣ ಮಾಡಲು ಶುರು ಮಾಡುವ ಮುನ್ನ ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿ ಎಂದು ಮನವಿ ಮಾಡಿದರು. ಆದ್ರೆ, ಈ ವೇಳೆ ಹೇಳಿಕೊಳ್ಳುವಂತ ಸ್ಪಂದನೆ ಬರಲಿಲ್ಲ.
ಆಗ ಹರಿಹರವಾಲಾಗಳ ಆವಾಜ್ ಗೆ ಏನಾಗಿದೆ. ಜೋರ್ಸೆ ಬೋಲೋ, ಭಾರತ್ ಮಾತಾಕೀ ಜೈ ಎಂದು ಮನವಿ ಮಾಡಿದರು. ಡಬಲ್ ಎಂಜಿನ್ ಸರ್ಕಾರ ಬೇಕೋ ಬೇಡ್ವಾ ಎಂದು ನೆರೆದಿದ್ದ ಸಾವಿರಾರು ಕಾರ್ಯಕರ್ತರನ್ನು ಪ್ರಶ್ನಿಸಿದರು. ಆಮೇಲೆ ಮೂರ್ನಾಲ್ಕು ಬಾರಿ ಭಾರತ್ ಮಾತಾಕೀ ಜೈ ಎಂಬ ಘೋಷಣೆ ಹಾಕಿದ ಅಮಿತ್ ಶಾಗೆ ಸ್ಪಂದನೆ ವ್ಯಕ್ತವಾಯಿತು.
ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಮಿತ್ ಶಾ ಕಾಂಗ್ರೆಸ್ ಗೆದ್ದರೆ ಅಭಿವೃದ್ಧಿಯಾಗಲ್ಲ. ಭ್ರಷ್ಟಾಚಾರ ತಾಂಡವಾವಾಡುತ್ತದೆ. ತುಷ್ಟೀಕರಣ, ಬೋಗಸ್ ಭರವಸೆ, ಆಲ್ ಟೈಂ ಭ್ರಷ್ಟಾಚಾರ ಶುರುವಾಗುತ್ತೆ ಎಂದು ಗುಡುಗಿದರು.
ಮೋದಿ ವಿರುದ್ಧ ಖರ್ಗೆ ಟೀಕೆಗೆ ಕೇಂದ್ರ ಗೃಹ ಸಚಿವ ಗರಂ:
ಪ್ರಧಾನಿ ನರೇಂದ್ರ ಮೋದಿ ವಿಶ್ವ ಮೆಚ್ಚಿದ ನಾಯಕ. ಜನಪ್ರಿಯತೆ ಸಹಿಸದೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಮೋದಿ ವಿಷ ಸರ್ಪ ಇದ್ದಂತೆ ಎಂಬ ಕೀಳುಮಟ್ಟದ ಆರೋಪ ಮಾಡಿದ್ದಾರೆ. ಇದು ಕಾಂಗ್ರೆಸ್ ಗೆ ಶೋಭೆ ತರುವಂಥದ್ದಲ್ಲ. ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಆರೋಪ ಮಾಡಲು ವಿಷಯಗಳಿಲ್ಲ. ಹಾಗಾಗಿ ಇಂಥ ಟೀಕೆ ಮಾಡಲಾಗುತ್ತಿದೆ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಕಾರ್ಡ್ ಬೋಗಸ್. ಇದಕ್ಕೆ ಮೌಲ್ಯವೇ ಇಲ್ಲ. ಯಾವುದೇ ಕಾರಣಕ್ಕೂ ಸುಳ್ಳು ಭರವಸೆ ನಂಬಬೇಡಿ ಎಂದು ಹೇಳಿದರು.
ಕಾಂಗ್ರೆಸ್ (CONGRESS) ಮತ್ತೆ ಅಧಿಕಾರಕ್ಕೆ ಬಂದರೆ ಆಲ್ ಟೈಂ ಭ್ರಷ್ಟಾಚಾರ ಮತ್ರೆ ಶುರುವಾಗುತ್ತದೆ. ತುಷ್ಟೀಕರಣದ ಗ್ಯಾರಂಟಿ. ಪರಿವಾರದ ಪಕ್ಷ ಕಾಂಗ್ರೆಸ್. ನಮ್ಮದು ಗಂಗಾ ನೀರಿನ ರೀತಿ ಗ್ಯಾರಂಟಿ. ಭ್ರಷ್ಟಾಚಾರ ಮುಕ್ತ ಮಾಡಲು ಕರ್ನಾಟಕದಲ್ಲಿ ಸ್ಟಷ್ಟ ಬಹುಮತ ನೀಡಿ ಬಿಜೆಪಿ ಗೆಲ್ಲಿಸಿ ಎಂದು ಕರೆ ನೀಡಿದರು.
ನೀವು ಹಾಕುವ ಒಂದೊಂದು ಮತವೂ ಮುಖ್ಯ. ಕಮಲಕ್ಕೆ ಮತ ಹಾಕುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಭ್ರಷ್ಟಾಚಾರದ ಹಣ ದೆಹಲಿಗೆ ಹೋಗುತಿತ್ತು. ಆದ್ರೆ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಅಭಿವೃದ್ಧಿ ಆಗಿದೆ. ಪಿಎಫ್ಐ ಬ್ಯಾನ್ ಮಾಡಿದ್ದು ನಾವು. ಈಗ ಕರ್ನಾಟಕ ಸುರಕ್ಷಿತವಾಗಿದೆ. ಕಾಂಗ್ರೆಸ್ ರೈತರಿಗೆ ಅಪಮಾನ ಮಾಡಿದೆ. ಗೊಬ್ಬರ, ಬಿತ್ತನೆ ಬೀಜ ನೀಡಿಲ್ಲ. ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರ ನೀಡಿದೆ ಎಂದು ಹೇಳಿದರು.
ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ಮುಸ್ಲಿಂರಿಗೆ ನೀಡಿದ್ದ ಶೇಕಡಾ 4ರಷ್ಟು ಮೀಸಲಾತಿ ರದ್ದುಪಡಿಸಿದೆ. ಮತ ಬ್ಯಾಂಕ್ ರಾಜಕಾರಣಕ್ಕೆ ಬ್ರೇಕ್ ಹಾಕಿದ್ದಾರೆ. ಈ ನಿರ್ಧಾರದಿಂದ ಡಾ. ಬಿ. ಆರ್. ಅಂಬೇಡ್ಕರ್ ಸಂವಿಧಾನದಂತೆ ಬಡವರು, ಬುಡಕಟ್ಟು ಸಮುದಾಯದವರೂ ಸೇರಿದಂತೆ ಧ್ವನಿ ಇಲ್ಲದವರಿಗೆ ಸಿಗುತ್ತದೆ. ಒಕ್ಕಲಿಗರು, ಲಿಂಗಾಯತರಿಗೆ ಮೀಸಲಾತಿ ನೀಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇವೆಲ್ಲವೂ ಸಿಗುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಶುರುವಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರೇಸ್ ನಲ್ಲಿ ಇದ್ಸಾರೆ. ನೀವು ಜಗಳ ಮಾಡಬೇಡಿ. ಬಿಜೆಪಿ ಅಧಿಕಾರಕ್ಕೆ ಬರಲಿದೆ, ನಮ್ಮ ಪಕ್ಷದವರೇ ಸಿಎಂ ಆಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಾಚೀನ ಹರಿಹರದಲ್ಲಿ ಶಂಕರ, ಹರ ಸಮಾಗಮವಾದ ಜಾಗ. ಹರಿಹರ ದೇವರಿಗೆ ನಮಸ್ಕರಿಸುತ್ತೇನೆ. ಉಕ್ಕಡಗಾತ್ರಿಯ ಕರಿಬಸವೇಶ್ವರ, ಪಂಚಮಸಾಲಿ ಪೀಠ, ಕನಕಗುರು, ವಾಲ್ಮೀಕಿ ಪೀಠಕ್ಕೂ ನಮಸ್ಕರಿಸುತ್ತೇನೆ ಎಂದ ಭಾಷಣದ ಆರಂಭದಲ್ಲಿ ಹೇಳಿದರು.
ಸಂಸದ ಜಿ. ಎಂ. ಸಿದ್ದೇಶ್ವರ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್, ಹರಿಹರ ಬಿಜೆಪಿ ಅಭ್ಯರ್ಥಿ ಬಿ. ಪಿ. ಹರೀಶ್, ಶಾಸಕ ಎಸ್. ಎ. ರವೀಂದ್ರನಾಥ್, ಚಂದ್ರಶೇಖರ್, ರಾಜೇಶ್, ಸುಧಾ ರುದ್ರೇಶ್ ಮತ್ತಿತರರು ಹಾಜರಿದ್ದರು.