SUDDIKSHANA KANNADA NEWS/ DAVANAGERE/ DATE:17-08-2023
ದಾವಣಗೆರೆ: ಆತ ತನ್ನ ಆಂಬ್ಯುಲೆನ್ಸ್ (Ambulance) ಮೂಲಕ ಸಾವಿರಾರು ಜನರ ಪ್ರಾಣ ರಕ್ಷಿಸಿದ್ದರು. ಎಷ್ಟೋ ಮಂದಿ ತನ್ನ ಉಸಿರು ನಿಂತಿತು ಎಂದುಕೊಂಡವರ ಜೀವ ಉಳಿಸಿದ ಜೀವರಕ್ಷಕ. ಹಗಲು ರಾತ್ರಿ ಎನ್ನದೇ ಎಂಥ ಸನ್ನಿವೇಶವಾದರೂ ಸರಿ ತನ್ನ ಆಂಬ್ಯುಲೆನ್ಸ್ (Ambulance)ನಲ್ಲಿ ಕರೆದೊಯ್ಯುತ್ತಿದ್ದರು. ದಾವಣಗೆರೆ ನಗರ ಜನತೆಗೆ ಉಚಿತ ಸೇವೆ ನೀಡುತ್ತಿದ್ದ ಮಾನವತಾವಾದಿ. ಜಾತಿ, ಮತ, ಧರ್ಮ ನೋಡಿದವರಲ್ಲ. ಎಲ್ಲರ ಪಾಲಿನ ಆಪದ್ಭಾಂಧವ ಅಂತಾನೇ ಖ್ಯಾತಿ ಗಳಿಸಿದ್ದರು. ಮನೆಯಲ್ಲಿ ಕಿತ್ತು ತಿನ್ನುವ ಬಡತನದ ನಡುವೆ ಬಡವರಿಗೆ ಸೇವೆ ನೀಡಬೇಕೆಂಬ ಮಹಾದಾಸೆಯಂತೆ ಆಂಬ್ಯುಲೆನ್ಸ್ ಮೂಲಕ ಸಮಾಜ ಸೇವೆ ಮಾಡುತ್ತಿದ್ದ ಇವ್ರ ಸಾವು ನಿಜಕ್ಕೂ ದುರಂತ. ಈ ಸ್ಟೋರಿ ಓದಿದವರ ಕಣ್ಣಲ್ಲಿ ನೀರು ಜಿನುಗುವುದು ಖಚಿತ.
ಹೌದು. ದಾವಣಗೆರೆಯ ಬಿಸ್ಮಿಲ್ಲಾ ಲೇ ಔಟ್ ಪಕ್ಕದ ಶಾಸ್ತ್ರಿ ಲೇಔಟ್ ನ ಅಲಿಕಾ ಶಾಲೆಯ ಸಮೀಪ ವಾಸವಾಗಿದ್ದ ಹಸೇನ್ ಸಾವು ನಿಜಕ್ಕೂ ದೇವರ ಇಷ್ಟೊಂದು ಕ್ರೂರಿಯೇ ಎನಿಸದಿರದು. ಯಾಕೆಂದರೆ ಹಸೇನ್ ಎಂದರೆ ಎಷ್ಟೋ ಮಂದಿಗೆ
ಗೊತ್ತಾಗುವುದೇ ಇಲ್ಲ. ಹಸೇನ್ ಆಂಬ್ಯುಲೆನ್ಸ್ (Ambulance) ಎಂದರೆ ಪ್ರತಿಯೊಬ್ಬರಿಗೂ ಚಿರಪರಿಚಿತ. ಅಷ್ಟೊಂದು ಸೇವೆಗೆ ಹೆಸರುವಾಸಿಯಾಗಿದ್ದರು. ಎಲ್ಲಾ ಧರ್ಮದವರಿಗೂ ಸಹಾಯ ಮಾಡಿದ್ದರು. ರೋಗಿಗಳ ಪಾಲಿಗೆ ಆಪದ್ಭಾಂಧವ ಅಂತಾನೇ
ಕರೆಯುತ್ತಿದ್ದರು.

ಸಾವು ಹೇಗಾಯ್ತು…?
ದಾವಣಗೆರೆ ಜಿಲ್ಲಾಸ್ಪತ್ರೆಯಿಂದ ರೋಗಿಯೊಬ್ಬರನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಯನಪೋಯಾ ಆಸ್ಪತ್ರೆಗೆ ರೋಗಿಯೊಬ್ಬರನ್ನು ತನ್ನ ಆಂಬ್ಯುಲೆನ್ಸ್ (Ambulance) ಮೂಲಕ ಕರೆದುಕೊಂಡು ಹೋಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ವಾಪಸ್ ದಾವಣಗೆರೆಗೆ ಬರುತ್ತಿದ್ದರು. ಅಲ್ಲಿಂದ ನಾಲ್ಕು ಕಿಲೋಮೀಟರ್ ದೂರ ಕ್ರಮಿಸುತ್ತಲೇ ಇದ್ದಕ್ಕಿದ್ದ ಹಾಗೆ ಹಸೇನ್ ಆಂಬ್ಯುಲೆನ್ಸ್ (Ambulance) ಅವರಿಗೆ ವಾಂತಿ ಆಯಿತು.
ಈ ಸುದ್ದಿಯನ್ನೂ ಓದಿ:
Davanagere: ದಾವಣಗೆರೆ ಜಿಲ್ಲೆ ಬರಪೀಡಿತ ಘೋಷಣೆ? ಒಂದು ವಾರದ ಬಳಿಕ ಗೊತ್ತಾಗುತ್ತೆ…!
ಕೂಡಲೇ ಪಕ್ಕಕ್ಕೆ ಆಂಬ್ಯುಲೆನ್ಸ್ (Ambulance) ನಿಲ್ಲಿಸಿದರು. ಬಳಿಕ ಜೊತೆಗೆ ತೆರಳಿದ್ದವರು ವಾಹನ ಚಾಲನೆ ಮಾಡಲು ಮುಂದಾದರು. ವಾಂತಿ ಹೆಚ್ಚಾಗುತ್ತಲೇ ಆಸ್ಪತ್ರೆಗೆ ಹಸೇನ್ ಆಂಬ್ಯುಲೆನ್ಸ್ (Ambulance) ಅವರನ್ನು ಸೇರಿಸಲಾಯಿತು. ಎದೆನೋವು ಕಾಣಿಸಿಕೊಂಡಿತು. ಈ ವೇಳೆ ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ್ದಾರೆ. ಬೇರೆಯೊಬ್ಬ ರೋಗಿಯ ಜೀವ ಉಳಿಸಿದ ಜೀವರಕ್ಷಕ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಓದಿದ್ದು ಎಸ್ಎಸ್ಎಲ್ ಸಿ:
ಹಸೇನ್ ಆಂಬ್ಯುಲೆನ್ಸ್ (Ambulance) ಅವರು ಓದಿದ್ದು ಎಸ್ ಎಸ್ ಎಲ್ ಸಿ. ತಂದೆ ಹೆಸರು ಬಕ್ಷೀಸ್ ಸಾಬ್. ಹೂವಿನ ವ್ಯಾಪಾರ ಮಾಡಿಕೊಂಡು ಸಂಸಾರ ನೀಗಿಸುತ್ತಿದ್ದರು. ತುಂಬು ಕುಟುಂಬ. ಸಹೋದರ, ಸಹೋದರಿಯರು, ತಾಯಿ ಸೇರಿದಂತೆ ದೊಡ್ಡ ಬಳಗ ಹೊಂದಿದ್ದ ಹಸೇನ್ ಅವರಿಗೆ ಮೂವರು ಮಕ್ಕಳು. ಪತ್ನಿ, ಮಕ್ಕಳು ಸೇರಿದಂತೆ ಅಪಾರ ಬಂಧುಬಳಗ, ಸ್ನೇಹಿತರನ್ನು ಅಗಲಿದ್ದಾರೆ.
ಇಬ್ಬರು ಅಣ್ಣಂದಿರು, ಮೂವರು ತಂಗಿಯರು, ಇಬ್ಬರು ಅಕ್ಕ, ಸಹೋದರ ಸಹ ಇದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಯಾರೇ ಎಷ್ಟೊತ್ತಿಗೆ ಕರೆದರೂ ಆಸ್ಪತ್ರೆಗೆ ಕರೆದಕೊಂಡು ಹೋಗಲು ಆಂಬ್ಯುಲೆನ್ಸ್ ರೆಡಿ ಇರುತಿತ್ತು. ಅದೇ ರೀತಿಯಲ್ಲಿ ದಾವಣಗೆರೆಯಲ್ಲಿ ಯಾವ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಣ ಪಡೆಯುತ್ತಿರಲಿಲ್ಲ. ಒಂದು ವೇಳೆ ರೋಗಿಯ ಸಂಬಂಧಿಕರು ಕೊಟ್ಟರೆ ಮಾತ್ರ ಪಡೆಯುತ್ತಿದ್ದರು. ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಉಚಿತ ಸೇವೆ ನೀಡಿರುವುದೇ
ಹೆಚ್ಚು.
ಬೆಂಗಳೂರು, ಮಂಗಳೂರು, ಉಡುಪಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಗೆ ಹೋಗುವುದಿದ್ದರೆ ಮಾತ್ರ ಹಣ ಪಡೆಯುತ್ತಿದ್ದರು. ಇಷ್ಟೇ ಬೇಕೆಂದು ಎಂದಿಗೂ ಬೇಡಿಕೆ ಇಟ್ಟವರಲ್ಲ. ಹಾಗಾಗಿ, ಹಸೇನ್ ಆಂಬ್ಯುಲೆನ್ಸ್ ಅಂತಾನೇ ಅವರನ್ನು ಎಲ್ಲರೂ
ಪ್ರೀತಿಯಿಂದ ಕರೆಯುತ್ತಿದ್ದರು.
ಇನ್ನು ಆಂಬ್ಯುಲೆನ್ಸ್ ಖರೀದಿಸಲು ಅಷ್ಟೊಂದು ಹಣ ಇರಲಿಲ್ಲ. ತಂಜುಮಿನ್ ಮುಸ್ಲಿಂ ಫಂಡ್ ಅಸೋಸಿಯೇಷನ್ ನ ದಾದಾಪೀರ್ ಸೇಠ್ ಅವರು ತನ್ನ ತಂದೆ ಹೆಸರಿನಲ್ಲಿ ಆಂಬ್ಯುಲೆನ್ಸ್ ಉಡುಗೊರೆಯಾಗಿ ನೀಡಿದ್ದರು. ಇದರಲ್ಲಿಯೇ ಸಮಾಜ
ಸೇವೆ ಮಾಡುತ್ತಾ ಎಲ್ಲರ ಚಿರಪರಿಚಿತರಾಗಿದ್ದರು.
ಬಾಲ್ಯದ ಆಸೆ:
ಎಸ್ ಎಸ್ಎಲ್ ಸಿ ಓದುತ್ತಿರುವಾಗಲೇ ಸಮಾಜ ಸೇವೆ ಮಾಡಬೇಕು, ಬಡವರಿಗೆ ನೆರವಾಗಬೇಕು, ಕೈಯಲ್ಲಾದಷ್ಟು ಸಹಾಯ ಮಾಡಬೇಕು ಎಂಬ ಅದಮ್ಯ ಬಯಕೆ ಹೊಂದಿದ್ದರು. ಅದರಂತೆ ಕೆಲಸ ಮಾಡಿದರು, ಜನರ ಕಷ್ಟಕ್ಕೆ ಸ್ಪಂದಿಸಿದರು, ಹಗಲು ರಾತ್ರಿ ಎನ್ನದೇ ಸೇವೆ ಮಾಡಿದರು.
ಹೃದಯವಂತನ ಹೃದಯ ಬಡಿತ ನಿಲ್ಲಿಸಿದ ಭಗವಂತ:
ಕೊರೊನಾದಂಥ ಸಂಕಷ್ಟದ ವೇಳೆಯಲ್ಲಿ ಎಷ್ಟೋ ರೋಗಿಗಳನ್ನು ರಾತ್ರೋರಾತ್ರಿ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದರು. ಬೆಳಿಗ್ಗೆಯೂ ಸಹ ಊಟ, ನಿದ್ದೆಯಿಲ್ಲದೇ ಜನರ ಜೀವ ಉಳಿಸುವ ಕೆಲಸ ಮಾಡಿದರು. ಎಲ್ಲರಿಂದಲೂ ಪ್ರಶಂಸೆ ಪಡೆದು, ಆಶೀರ್ವಾದ ಪಡೆದಿದ್ದ ಹಸೇನ್ ಆಂಬ್ಯುಲೆನ್ಸ್ (Ambulance) ಸಾವು ನಿಜಕ್ಕೂ ಘೋರ ದುರಂತ ಎಂದರೆ ತಪ್ಪಾಗಲಾರದು.
ದಾವಣಗೆರೆ ತಂಜುಮಿನ್ ಮುಸ್ಲಿಂ ಫಂಡ್ ಅಸೋಸಿಯೇಷನ್ ದಾದಾಪಿರ್ ಸೇಠ್ ತಂದೆ ಹೆಸರಿನಲ್ಲಿ ಕೊಡುಗೆಯಾಗಿ ನೀಡಿದ್ದಾರೆ. ಜನರ ಸೇವೆಯಾಗಿ ಗಿಫ್ಟ್ ಕೊಟ್ಟಿದ್ದಾರೆ. ಹಸನ್ ಅಂಬುಲೆನ್ಸ್ ಉಚಿತವಾಗಿ ಸೇವೆ ನೀಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದ್ದ ವಿಚಾರವೇ. ಕೆಲವರು ತನ್ನ ಕೈಯಲ್ಲಾದಷ್ಟು ಸಹಾಯ ಮಾಡಿದ್ದರು. ಸಮಾಜ ಸೇವೆಯೂ ಮಾಡಿ, ಕಷ್ಟಪಟ್ಟು ದುಡಿದ ಸ್ವಲ್ಪ ಹಣದಲ್ಲಿ ಕುಟುಂಬದ ನಿರ್ವಹಣೆ ಮಾಡುತ್ತಿದ್ದರು. ವೈಯಕ್ತಿಕವಾಗಿಯೂ ಕೈಯಲ್ಲಾದಷ್ಟು ಸಹಾಯ ಮಾಡುತ್ತಿದ್ದರು.
ಇನ್ನು ಹಸೇನ್ ಆಂಬ್ಯುಲೆನ್ಸ್ ಅವರ ನಿಧನಕ್ಕೆ ಸ್ನೇಹಿತರು, ಎಲ್ಲಾ ಸಮಾಜದವರು, ಧರ್ಮದವರು ಕಂಬಿನಿ ಮಿಡಿದಿದ್ದಾರೆ. ಹೃದಯವಂತನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಇನ್ನು ಹಸೇನ್ ಕುಟುಂಬದವರ ಆಕ್ರಂದನ, ನೋವು, ಕಣ್ಣೀರು ಮುಗಿಲು ಮುಟ್ಟಿದೆ.
ಹಳೆ ಪಿಬಿ ರಸ್ತೆಯಲ್ಲಿ ಅಂತ್ಯಕ್ರಿಯೆ:
ಆಸ್ಪತ್ರೆಯಿಂದ ಮೃತದೇಹ ತರಲು ಸಂಬಂಧಿಕರು, ಸ್ನೇಹಿತರು ಹೋಗಿದ್ದಾರೆ. ಮೃತದೇಹ ದಾವಣಗೆರೆಗೆ ಬರಲಿದ್ದು, ಆಗಸ್ಟ್ 18ರಂದು ನಗರದ ಪಿಬಿ ರಸ್ತೆಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಇದಕ್ಕೂ ಮುನ್ನ ಸ್ನೇಹಿತರು,ಸಂಬಂಧಿಕರ ದರ್ಶನಕ್ಕೆ ಪಾರ್ಥೀವ ಶರೀರ ಇಡಲಾಗುತ್ತದೆ. ಒಟ್ಟಿನಲ್ಲಿ ಸಮಾಜಕ್ಕೋಸ್ಕರ ಬದುಕಿ, ಸಾವಿರಾರು ಜನರ ಪ್ರಾಣ ಉಳಿಸಿ, ಕೊನೆಗೆ ರೋಗಿಯ ಪ್ರಾಣ ಉಳಿಸಲು ಹೋಗಿ ತನ್ನ ಪ್ರಾಣ ಚೆಲ್ಲಿದ ಹಸೇನ್ ಆಂಬ್ಯುಲೆನ್ಸ್ ಸಾವು ಯಾರೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ದೇವರಿಗೆ ಹಿಡಿಶಾಪ ಹಾಕದವರೇ ಇಲ್ಲ.