ಬೆಂಗಳೂರು: ಜೂನ್ ಮೊದಲ ವಾರದಲ್ಲಿ ಕರ್ನಾಟಕದಲ್ಲಿ ವಿಧಾನ ಪರಿಷತ್ತು ಚುನಾವಣೆ ಹಾಗೂ ಲೋಕಸಭಾ ಚುನಾವಣೆ ಫಲಿತಾಂಶ ಹಿನ್ನೆಲೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ನಡುವೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರೋಬ್ಬರಿ 5 ದಿನ ಮದ್ಯ ಮಾರಾಟ ಸಂಪೂರ್ಣ ನಿಷೇಧವಿರಲಿದೆ.
ಜೂನ್ 1 ರಿಂದ 6 ನಡುವೆ ಜೂನ್ 5 ರಂದು ಮಾತ್ರ ಎಂದಿನಂತೆ ಮದ್ಯ ಮಾರಾಟ ನಡೆಯಲಿದೆ. ಜೂನ್ 3 ರಂದು ರಾಜ್ಯದಲ್ಲಿ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರಗಳ ವಿಧಾನಪರಿಷತ್ತು ಚುನಾವಣೆ ನಡೆಯುತ್ತಿದೆ. ಈ ಹಿನ್ನೆಲೆ ಆಯಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 48 ಗಂಟೆಗಳ ಮುನ್ನ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಹೀಗಾಗಿ, ಜೂನ್ 1 ರಂದು ಸಂಜೆ 4 ಗಂಟೆಯಿಂದ ಮದ್ಯ ಮಾರಾಟ ಬಂದ್ ಆಗಲಿದೆ.
ಲೋಕಸಭಾ ಚುನಾವಣೆ 2024 ಮತ ಎಣಿಕೆ ಜೂನ್ 4 ರಂದು ನಡೆಯಲಿದೆ. ಈ ನಿಷೇಧ ಮುಗಿಯುತ್ತಿದ್ದಂತೆ ಜೂನ್ 3 ಮಧ್ಯ ರಾತ್ರಿ 12 ಗಂಟೆಯಿಂದ ನಿಷೇಧಾಜ್ಞೆ ಜಾರಿಯಾಗಿ ಜೂನ್ 4 ರಾತ್ರಿ 12 ಗಂಟೆಯವರೆಗೂ ಮದ್ಯ ಮಾರಾಟ ಸ್ಥಗಿತವಾಗಲಿದೆ. ಜೂನ್ 5 ರಂದು ಸಾಮಾನ್ಯ ದಿನವಾಗಿದ್ದು ಆ ದಿನ ಎಂದಿನಂತೆ ಮದ್ಯ ಮಾರಾಟ ನಡೆಯಲಿದೆ.
ಮತ್ತೆ ಜೂನ್ 6 ರಂದು ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆ ಮತ ಎಣಿಕೆ ನಡೆಯಲಿದೆ. ಆ ದಿನವೂ ಬೆಂಗಳೂರು ಸೇರಿದಂತೆ ಮತ ಎಣಿಕೆ ನಡೆಯು ಜಿಲ್ಲೆಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಆಯಾ ಜಿಲ್ಲೆಗಳಲ್ಲಿ ಜೂನ್ ಮೊದಲ ವಾರ 5 ದಿನ ಎಲ್ಲಾ ವಿಧದ ಮದ್ಯ ಸಾಗಣೆ, ಶೇಖರಣೆ ಮತ್ತು ಎಲ್ಲಾ ರೀತಿಯ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಹೋಟೆಲ್ ಮುಂತಾದವುಗಳಲ್ಲಿ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಆದೇಶ ಹೊರಡಿಸಿದ್ದಾರೆ.