ಓಂ ಕಾಳನ್ನು ಅಡುಗೆಗೆ ಸಾಮಾನ್ಯವಾಗಿ ಉಪಯೋಗಿಸುತ್ತಲೇ ಇರುತ್ತೇವೆ. ಆದರೆ, ಈ ಓಂ ಕಾಳನ್ನು ಸೇವಿಸುವುದರಿಂದ ಹತ್ತು ಹಲವು ಆರೋಗ್ಯಕಾರಿ ಲಾಭಗಳಿದೆ. ಸಾಕಷ್ಟು ಮಂದಿ ಹೊಟ್ಟೆ, ಕರುಳು ಹಾಗೂ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಅಂಗಾಂಗಗಳಲ್ಲಿ ಹುಣ್ಣುಗಳಿಂದ ಬಳಲುತ್ತಿರುತ್ತಾರೆ, ಈ ಹುಣ್ಣುಗಳಿಂದ ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿರುತ್ತಾರೆ, ಇದಕ್ಕಾಗಿ ಹಲವು ಔಷಧಗಳ ಮೊರೆ ಹೋಗಿರುತ್ತಾರೆ. ಆದರೆ, ಓಂ ಕಾಳುಗಳು ಇಂತಹ ಹುಣ್ಣುಗಳನ್ನು ವಾಸಿಮಾಡಲು ಪರಿಣಾಮಕಾರಿಯಾಗಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.
ಓಂ ಕಾಳುಗಳು ಅಸಿಡಿಟಿ, ಗ್ಯಾಸ್ ಸಮಸ್ಯೆ, ಜೀರ್ಣಕ್ರಿಯೆಯ ವಿಳಂಬವಾಗುವ ತೊಂದರೆಗಳನ್ನು ಸರಿಪಡಿಸುತ್ತದೆ. ಜೀರ್ಣಕ್ರಿಯೆಯ ತೊಂದರೆಗಳನ್ನು ಸರಿಮಾಡಿಕೊಳ್ಳಲು ಅರ್ಧ ಚಮಚದಷ್ಟು ಓಂಕಾಳು ಗಳನ್ನು ಜಗಿದು ತಿನ್ನಬಹುದು ಅಥವಾ ನೀರಿನೊಂದಿಗೆ ಬೆರೆಸಿ ಕುಡಿಯಬಹುದು.
ಕಾಳುಗಳು ತೈವನ್ ಎಂಬ ಅಂಶವನ್ನು ಒಳಗೊಂಡಿದೆ. ಈ ಅಂಶವು ಕೀಟಾಣುಗಳ ಹಾಗೂ ಶಿಲಿಂಧ್ರಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ. ಹಲವಾರು ಚರ್ಮ ಸಮಸ್ಯೆಗಳು ಶಿಲಿಂಧ್ರದ ಮುಖಾಂತರ ನಿಮಗೆ ಬರಬಹುದು. ಇಂತಹ ಸಮಸ್ಯೆಗಳಿಗೆ ಕೇವಲ ನಿಮಿಷಗಳಲ್ಲಿ ಓಂಕಾಳು ಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು.
ಕೆಲವು ಓಂ ಕಾಳುಗಳನ್ನು ತೆಗೆದುಕೊಂಡು ಕುಟ್ಟಿ ಪುಡಿ ಮಾಡಿ ಅವುಗಳನ್ನು ನಿಮ್ಮ ಚರ್ಮ ಸಮಸ್ಯೆ ಇರುವ ಜಾಗಕ್ಕೆ ನೇರವಾಗಿ ಹಚ್ಚಬಹುದು. ನಿಮ್ಮ ಮೊಡವೆ ಅಥವಾ ಕಲೆಗಳು ತಮ್ಮ ಬಣ್ಣವನ್ನು ಕಳೆದುಕೊಳ್ಳಬೇಕು ಎಂದಿದ್ದರೆ ಓಂ ಕಾಳುಗಳ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್ ನಂತೆ ತಯಾರಿಸಿ. ಇದನ್ನು ಮೊಡವೆಗಳು ಇರುವ ಜಾಗಕ್ಕೆ ಹಚ್ಚಿ 15 ನಿಮಿಷದ ವರೆಗೆ ಹಾಗೆ ಬಿಟ್ಟು ನಂತರ ತೊಳೆದುಕೊಳ್ಳಿ.