SUDDIKSHANA KANNADA NEWS/DAVANAGERE/DATE:07_10_2025
ದಾವಣಗೆರೆ: ಅಡಿಕೆ ಧಾರಣೆಯು ಭರ್ಜರಿ ಏರಿಕೆ ದಾಖಲಿಸಿದೆ. 2025ರ ಈ ವರ್ಷದಲ್ಲಿ ಅತ್ಯಧಿಕ ಧಾರಣೆ ಇದ್ದು, ಅಡಿಕೆ ಬೆಳೆಗಾರರಿಗೆ ಖುಷಿ ತಂದಿದೆ. ಕಳೆದೊಂದು ತಿಂಗಳಿನಿಂದಲೂ ಏರುಮುಖದಲ್ಲಿ ಸಾಗುತ್ತಿರುವ ಅಡಿಕೆ ಧಾರಣೆಯು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ, ರೈತರು ಕಾದು ಅಡಿಕೆ ಮಾರುಕಟ್ಟೆಗೆ ಅಡಿಕೆ ಬಿಡಲು ಚಿಂತನೆ ನಡೆಸುತ್ತಿದ್ದಾರೆ. ಮತ್ತೆ ಕೆಲ ರೈತರು ಸಿಕ್ಕಷ್ಟೇ ಸಿಗಲಿ, ಅಡಿಕೆ ಕೊಡೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
READ ALSO THIS STORY: “ಎಲ್. ಬಸವರಾಜ್ ಕಿಡ್ನಾಪ್ ಮಾಡಿ ಜೈಲಿಗೆ ಹೋಗಿದ್ದ ವ್ಯಕ್ತಿಯಿಂದ ವೋಟ್ ಚೋರಿ ಆರೋಪ ಹಾಸ್ಯಾಸ್ಪದ”: ಯಶವಂತರಾವ್ ಜಾಧವ್ ಗುಡುಗು!
ಅಡಿಕೆ ಧಾರಣೆಯು ಈ ವರ್ಷ ಹೆಚ್ಚು ದಾಖಲಿಸಿದ್ದು, ಮತ್ತೆ ಏರುಮುಖದಲ್ಲಿ ಸಾಗುತ್ತದೆ ಎಂಬ ಮಾತಿದ್ದರೂ ಕಾಯುವ ನಿರ್ಧಾರ ತೆಗೆದುಕೊಳ್ಳುವಲ್ಲಿ ರೈತರು ಗೊಂದಲಕ್ಕೀಡಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ, ದಾವಣಗೆರೆ, ಮಾಯಕೊಂಡ, ಹೊನ್ನಾಳಿ, ಹರಿಹರ ಭಾಗದಲ್ಲಿ ಹೆಚ್ಚಾಗಿ ಅಡಿಕೆ ಬೆಳೆಯಲಾಗುತ್ತದೆ. ಚನ್ನಗಿರಿ ಅತಿ ದೊಡ್ಡ ಮಾರುಕಟ್ಟೆ. ವಾರ ಕಳೆದಂತೆ ಅಡಿಕೆ ಧಾರಣೆಯಲ್ಲಿ ಹೆಚ್ಚಳವಾಗುತ್ತಿದ್ದು, ಅಡಿಕೆ ಬೆಳೆಗಾರರು ಕೈತುಂಬಾ ಲಾಭ ಸಿಗುವ ಸಂಭ್ರಮದಲ್ಲಿದ್ದಾರೆ.
ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ಬೆಟ್ಟೆ ಅಡಿಕೆಯು ಪ್ರತಿ ಕ್ವಿಂಟಲ್ ಗೆ 65,009 ರೂಪಾಯಿ ದಾಖಲಿಸಿದ್ದರೆ, ಕನಿಷ್ಠ ಬೆಲೆ 60,021 ರೂಪಾಯಿ ಇದೆ. ಸರಾಸರಿ ಬೆಲೆಯು 63,653 ಇದ್ದು ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಅಡಿಕೆ ಮಾರುಕಟ್ಟೆ ವಿಶ್ಲೇಷಕರು.
ಇನ್ನು ಒಣ ಅಡಿಕೆ ಇಷ್ಟು ಧಾರಣೆ ಇದ್ದರೆ ಹಸಿ ಅಡಿಕೆಗೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಒಂದು ಕ್ವಿಂಟಲ್ ಹಸಿ ಅಡಿಕೆಯು 7,700 ರೂಪಾಯಿಂದ 7,900 ರೂಪಾಯಿಯವರೆಗೆ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಇದು ಸಹ ಈ ವರ್ಷ ದಾಖಲೆಯಾಗಿದೆ.
ಅಡಿಕೆ ಧಾರಣೆ ಇಳಿಮುಖ:
ಅಡಿಕೆ ಧಾರಣೆಯು ಒಂದೆಡೆ ಹೆಚ್ಚಳವಾಗುತ್ತಿದ್ದರೆ ಮತ್ತೊಂದೆಡೆ ಅಡಿಕೆ ಬೆಳೆ ಇಳುವರಿ ಕುಂಠಿತವಾಗಿದೆ. ಈ ವರ್ಷ ಭಾರೀ ಮಳೆಯಾಗಿದ್ದು, ತೋಟದಲ್ಲಿ ನೀರು ನಿಂತು ಅಡಿಕೆ ಫಸಲು ಕಡಿಮೆ ಬಂದಿದೆ. ಒಣ ಅಡಿಕೆ ತೂಕದಲ್ಲಿ ಕಡಿಮೆ ಆಗಿದ್ದರೆ, ಮರಗಳಲ್ಲಿನ ಅಡಿಕೆ ಕೆಳಗೆ ಬಿದ್ದಿವೆ. ಇದು ರೈತರಿಗೆ ಆಘಾತ ತಂದಿದೆ.
ಈಗಾಗಲೇ ಕೊಯ್ಲು ಭರದಿಂದ ಸಾಗುತ್ತಿದೆ. ಅಡಿಕೆ ತೋಟಗಳಲ್ಲಿ ಅಡಿಕೆ ಇಳಿಸುವ ಕೆಲಸ ನಡೆಯುತ್ತಿದೆ. ಧಾರಣೆ ಹೆಚ್ಚಾಗಿರುವುದರಿಂದ ರೈತರ ಕೈಯಲ್ಲಿ ಕೈ ತುಂಬಾ ಹಣ ಸಿಗುತ್ತದೆ. ಹಸಿ ಅಡಿಕೆಗೆ ಡಿಮ್ಯಾಂಡ್ ಇರುವ ಕಾರಣದಿಂದಲೂ ರೈತರು ಆದಷ್ಟು ಬೇಗ ಅಡಿಕೆ ಕೊಡುತ್ತಿದ್ದಾರೆ.
ಈ ವರ್ಷದ ಆರಂಭದಲ್ಲಿ 52 ಸಾವಿರ ರೂಪಾಯಿಗೂ ಕಡಿಮೆಯಿದ್ದ ಅಡಿಕೆ ಧಾರಣೆಯು ಹತ್ತು ತಿಂಗಳಲ್ಲಿ ಬರೋಬ್ಬರಿ 13 ಸಾವಿರ ರೂಪಾಯಿ ಹೆಚ್ಚಳವಾಗಿದೆ.