SUDDIKSHANA KANNADA NEWS/ DAVANAGERE/ DATE:10-10-2024
ದಾವಣಗೆರೆ: ಅಡಿಕೆ ಬೆಳೆಗಾರರು ಈ ಬಾರಿ ಖುಷಿಯಲ್ಲಿದ್ದಾರೆ. ಖೇಣಿ ಕೊಟ್ಟು ಹಣ ಪಡೆದು ಖುಷಿ ಖುಷಿಯಾಗಿ ಇರಬಹುದು ಎಂದುಕೊಂಡಿರುತ್ತಾರೆ. ಆದ್ರೆ, ಕಳ್ಳರು, ಖದೀಮರು, ದರೋಡೆಕೋರರು ಇದನ್ನೇ ಹೊಂಚು ಹಾಕಿ ಕುಳಿತಿರುತ್ತಾರೆ. ಅಡಿಕೆ ಖೇಣಿ ಕೊಟ್ಟು ಇಲ್ಲವೇ, ಮಾರುಕಟ್ಟೆಗೆ ಅಡಿಕೆ ಬಿಟ್ಟು ಹಣ ವಾಪಸ್ ತರುವಾಗ ಎಚ್ಚರದಿಂದಿರಿ.
ಏನಿದು ಘಟನೆ…?
ಚನ್ನಗಿರಿ ತಾಲೂಕಿನ ಜೋಳದಾಳ್ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಡಿಕೆ ವ್ಯಾಪಾರಿ ಅಡ್ಡಗಟ್ಟಿ 17 ಲಕ್ಷ ರೂಪಾಯಿಗೂ ಅಧಿಕ ನಗದು ದೋಚಿ ದರೋಡೆ ತಂಡ ಪರಾರಿಯಾಗಿತ್ತು. ಈ ಪ್ರಕರಣ ಸಂಬಂಧ ಚನ್ನಗಿರಿ ಪೊಲೀಸರು
ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 7,37,920 ನಗದು ಹಣ, 2 ಕಾರು, 2 ಬೈಕ್‌ಗಳು, 9 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಚನ್ನಗಿರಿ ಮಹ್ಮತ್ ಇನಾಯತ್ (21), ಉಮ್ಮರ್ ಫಾರೂಕ್ (20), ಷಬುದ್ದೀನ್ ಖಾಜಿ ಅಲಿಯಾಸ್ ಶಾಹಿದ್ ಖಾಜಿ (24 , ಸಲ್ಮಾನ್ ಅಹಮದ್ ಖಾನ್ (25), ತುಮಕೂರು ಜಿಲ್ಲೆಯ ಖುರಂ ಖಾನ್(25), ಮೈಸೂರಿನ ಸೈಯದ್ ಸೈಫುಲ್ಲಾ ಅಲಿಯಾಸ್ ಸೈಪು (24), ಖಾಷಿಪ್ ಅಹಮದ್ (25) ಬಂಧಿತ ಆರೋಪಿಗಳು.
ಸೆಪ್ಟಂಬರ್ 30ರಂದು ಚನ್ನಗಿರಿ ಟೌನ್ ನಿವಾಸಿಯಾಗಿದ್ದ ಮಹ್ಮದ್ ಇನಾಯುತುಲ್ಲಾ (21) ಅಡಿಕೆ ವ್ಯಾಪಾರಿಯು ಜೋಳದಾಳ ಮತ್ತು ಕಲ್ಲಾಪುರ ಗ್ರಾಮಗಳಲ್ಲಿ 35 ಚೀಲ ಅಡಿಕೆ ಇದೆ ವ್ಯಾಪಾರ ಮಾಡಿಸಿಕೊಡುತ್ತೇನೆ ಎಂದು ಬುಳಾಪುರದ
ಅಶೋಕ ಎಂಬಾತನಿಗೆ ತಿಳಿಸಿದ್ದ. ಅಡಿಕೆ ವ್ಯಾಪಾರ ಮಾಡುತ್ತಿದ್ದರಿಂದ ಅಶೋಕ್ ಇದಕ್ಕೆ ಒಪ್ಪಿದ್ದರು. ಭದ್ರಾವತಿಯಲ್ಲಿ ಅಡಿಕೆ ಮಾರಾಟ ಮಾಡಿ ಬಂದ ಹಣ ಒಟ್ಟು 17,24,000 ನಗದು ತೆಗೆದುಕೊಂಡು ತನ್ನ ಕೆ.ಎ-13, ಸಿ-6260 ನೇ ಬೊಲೇರೋ
ಪಿಕ್ ಅಪ್ ಗೂಡ್ಸ್ ವಾಹನದಲ್ಲಿ ತನ್ನ ಹಮಾಲರೊಂದಿಗೆ ಬರುತ್ತಿದ್ದರು. ಚನ್ನಗಿರಿಯ ಅಜ್ಜಿಹಳ್ಳಿ ಸರ್ಕಲ್‌ಗೆ ಬಂದು ಅಲ್ಲಿಂದ ಮಹ್ಮದ್ ಇನಾಯತುಲ್ಲಾನ ಜೊತೆಗೆ ಜೋಳದಾಳ್ ಕಡೆಗೆ ಹೋಗುತ್ತಿರುವಾಗ ಭದ್ರಾವತಿ ಕಡೆಗೆ ಹೋಗುವ
ಜೋಳದಾಳ ಅರಣ್ಯ ಪ್ರದೇಶದ ರಸ್ತೆಯಲ್ಲಿ ಅಶೋಕ್ ರಿಗೆ ಮಹ್ಮದ್ ಇನಾಯತ್ ಮೂತ್ರ ವಿಸರ್ಜನೆ ಮಾಡಬೇಕು, ಗಾಡಿಯನ್ನು ನಿಲ್ಲಿಸು ಎಂದು ಹೇಳಿದ್ದಾನೆ.
ಆಗ ಅಶೋಕನು ವಾಹನವನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸುತ್ತಿದ್ದಂತೆ, ಹಿಂದಿನಿಂದ ಇನ್ನೋವಾ ಕಾರಿನಲ್ಲಿ ಬಂದ 7 ರಿಂದ 8 ದರೋಡೆಕೋರರು ಕೈಗಳಲ್ಲಿ ಚಾಕು ಹಿಡಿದುಕೊಂಡು ಅಶೋಕ ಮತ್ತು ಅವರ ಕಡೆಯವರಿಗೆ ಹೆದರಿಸಿ 17,24,000 ರೂ ನಗದು ಹಣ, ಮೊಬೈಲ್ ಮತ್ತು ಗೂಡ್ಸ್ ವಾಹನದ ಕೀಯನ್ನು ದರೋಡೆ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ಅಶೋಕ ಅವರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತದೆ.
ದುಷ್ಮನ್ ಬಗಲ್ ಮೇ ಹೈ:
ಈ ಪ್ರಕರಣದ ಕೃತ್ಯ ನಡೆದ ಸ್ಥಳಕ್ಕೆ ಎಸ್ಪಿ ಉಮಾಪ್ರಶಾಂತ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು. ಚನ್ನಗಿರಿ ಉಪ-ವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್ ನೇತೃತ್ವದಲ್ಲಿ ಚನ್ನಗಿರಿ ಠಾಣೆ ಪೊಲೀಸ್ ನಿರೀಕ್ಷಕರಾದ ಬಾಲಚಂದ್ರ ನಾಯ್ಕ್, ಪಿ.ಎಸ್.ಐಗಳಾದ ಸುರೇಶ್, ಜಗದೀಶ್, ಸಂಜೀವ್‌ಕುಮಾರ್, ಡಿಸಿಆರ್‌ಬಿ ಸಿಬ್ಬಂದಿಗಳಾದ ಮಜೀದ್ ಕೆ ಸಿ, ರಾಘವೇಂದ್ರ, ರಮೇಶ್ ನಾಯ್ಕ್, ಆಂಜನೇಯ, ಬಾಲಾಜಿ ಮತ್ತು ಚನ್ನಗಿರಿ ಠಾಣೆ ಸಿಬ್ಬಂದಿಗಳಾದ ಶಶಿಧರ್, ರಮೇಶ್, ರವಿ, ಚನ್ನಕೇಶವ, ಶ್ರೀನಿವಾಸ್, ಹರೀಶ್ ಕುಮಾರ್ ಮತ್ತು ರೇವಣಸಿದ್ದಪ್ಪ, ಸಂತೇಬೆನ್ನೂರು ಠಾಣೆ ಅವರು ನೇತೃತ್ವದ ತಂಡವನ್ನು ರಚಿಸಿ, ಸೂಕ್ತ ತನಿಖಾ ಸೂಚನೆ ಹಾಗೂ ನಿರ್ದೇಶನಗಳನ್ನು ನೀಡಿದ್ದರು.
ಈ ತಂಡವು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಸಂತೋಷ್ ಮತ್ತು ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಪ್ರಕರಣದಲ್ಲಿನ ಆರೋಪಿತರ ಪತ್ತೆಗೆ ತನಿಖೆ ಕೈಗೊಂಡಿದ್ದು ಈ ಕೃತ್ಯವನ್ನು ಪಿರ‍್ಯಾದಿಯ ಜೊತೆಯಲ್ಲಿರುವ ವ್ಯಕ್ತಿಯೇ ಮಾಡಿಸಿರುವ ಬಗ್ಗೆ ಅನುಮಾನವಿತ್ತು. ಪಿರ‍್ಯಾದಿಯ ಜೊತೆ ಅಡಿಕೆ ಕೊಡಿಸುತ್ತೇನೆಂದು ಹೇಳಿ ಮಧ್ಯವರ್ತಿಯಾಗಿ ಹೋಗಿದ್ದ ಮಹ್ಮದ್ ಇನಾಯತುಲ್ಲಾ ಇವರನ್ನು ವಿಚಾರಣೆ ನಡೆಸಿ, ವೈಜ್ಞಾನಿಕ ತನಿಖಾ ಕ್ರಮಗಳನ್ನು ಕೈಗೊಂಡಿದ್ದರಿಂದ
ಚನ್ನಗಿರಿ ಮಹ್ಮತ್ ಇನಾಯತ್ (21), ಉಮ್ಮರ್ ಫಾರೂಕ್ (20), ಷಬುದ್ದೀನ್ ಖಾಜಿ ಅಲಿಯಾಸ್ ಶಾಹಿದ್ ಖಾಜಿ (24) , ಮೈಸೂರಿನ ಒಂದು ತಂಡದ ಜೊತೆ ಸೇರಿ ಸೆಪ್ಬಂಬರ್ 28 ರಂದು ಅಡಿಕೆ ಕೊಡಿಸುವುದಾಗಿ ಹೇಳಿ ಪಿರ್ಯಾದಿಯನ್ನು ಕರೆದುಕೊಂಡು ಹೋಗುವಾಗ ಜೋಳದಾಳ್ ಅರಣ್ಯ ಪ್ರದೇಶದಲ್ಲಿ ದರೋಡೆ ಮಾಡುವುದರ ಬಗ್ಗೆ ಸಂಚು ರೂಪಿಸಿದ್ದ. ಅದರಂತೆ 30ರಂದು ಪಿರ‍್ಯಾದಿಗೆ ಅಡಿಕೆ ಕೊಡಿಸುವುದಾಗಿ ಹೇಳಿ, ವ್ಯಾಪಾರಕ್ಕೆಂದು ಪಿರ್ಯಾದಿಯು ಹಣವನ್ನು ತೆಗೆದುಕೊಂಡು ಹೋಗುವಾಗ ಈ ಡಕಾಯಿತಿ ನಡೆಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಕೂಡಲೇ ಮೈಸೂರಿಗೆ ಒಂದು ತಂಡ ಕಳಿಸಿ ಅಲ್ಲಿಯ ಆರೋಪಿತರುಗಳಾದ ಸಲ್ಮಾನ್ ಅಹಮದ್ ಖಾನ್ (25), ತುಮಕೂರು ಜಿಲ್ಲೆಯ ಖುರಂ ಖಾನ್(25), ಮೈಸೂರಿನ ಸೈಯದ್ ಸೈಫುಲ್ಲಾ ಅಲಿಯಾಸ್ ಸೈಪು (24), ಖಾಷಿಪ್ ಅಹಮದ್ (25) ಬಂಧಿಸಲಾಗಿದೆ.
ಆರೋಪಿತರು ದರೋಡೆ ಮಾಡಿದ ಹಣದಲ್ಲಿ 7,37,920 ರೂ ನಗದು ಹಣ ಹಾಗೂ ಈ ಕೃತ್ಯಕ್ಕೆ ಬಳಸಿದ 4 ವಾಹನಗಳು ಹಾಗೂ 9 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯ ವರದಿಯಾಗಿ ಕೇವಲ ಎರಡೇ ದಿನಗಳಲ್ಲಿ ಪ್ರಕರಣ ಭೇದಿಸಿ, ಆರೋಪಿತರನ್ನು ಪತ್ತೆ ಮಾಡಿ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ತಂಡದ ಅಧಿಕಾರಿ ಸಿಬ್ಬಂದಿಗಳನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಪ್ರಶಂಸಿಸಿ, ಬಹುಮಾನ ಘೋಷಿಸಿದ್ದಾರೆ.