SUDDIKSHANA KANNADA NEWS/ DAVANAGERE/ DATE:17-03-2025
ದಾವಣಗೆರೆ: ನಗರದ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿದ್ದ ಪ್ರಕರಣದ ಮೊದಲ ಆರೋಪಿಯನ್ನು ಪೊಲೀಸರು ಬಂಧಿಸಿ, 3.15 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಘಟನೆ ಹಿನ್ನೆಲೆ:
ಕಳೆದ ಫೆಬ್ರವರಿ 28ರಂದು ಮಧ್ಯಾಹ್ನ ಸಮಯದಲ್ಲಿ ಸುಮಿತ್ರ ಅವರು ವಿದ್ಯಾ ನಗರ ಠಾಣೆಗೆ ಹಾಜರಾಗಿ ದೂರು ನೀಡಿದ್ದರು,
ತಾನು ಹಾಗು ತನ್ನ ಗಂಡ ವಿದ್ಯಾ ನಗರ 3 ನೇ ಕ್ರಾಸ್ ರಸ್ತೆಯಲ್ಲಿ ವಾಸವಾಗಿದ್ದೇವೆ. ಫೆಬ್ರವರಿ 14ರಂದು ಬೆಳಿಗ್ಗೆ 6ಗಂಟೆಗೆ ನಮ್ಮ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದೆವು. ಮಾರನೇ ದಿನ ಬೆಳಿಗ್ಗೆ 11 ಗಂಟೆಗೆ ಬಂದು ನೋಡಿದಾಗ ಯಾರೋ ಕಳ್ಳರು ನಮ್ಮ ಮನೆಯ ಕಿಟಕಿ ಸರಳುಗಳನ್ನು ಯಾವುದೋ ಆಯುಧದಿಂದ ಕಟ್ ಮಾಡಿ ಮನೆಯಲ್ಲಿ ಇಟ್ಟಿದ್ದ 170 ಗ್ರಾಂ ತೂಕದ ಬಂಗಾರದ ಆಭರಣ ಹಾಗೂ 50 ಸಾವಿರ ರೂ ನಗದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ದಾಖಲಿಸಿದ್ದರು.
ಪ್ರಕರಣದಲ್ಲಿ 2 ನೇ ಆರೋಪಿತನನ್ನು ಮಾರ್ಚ್ 2ರಂದು ಈಗಾಗಲೇ ಹರಿಹರ ನಗರ ಪೊಲೀಸ್ ಠಾಣೆಯವರು ಪತ್ತೆಮಾಡಿ 123 ಗ್ರಾಂ ಆಭರಣಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣದ ಮೊದಲನೇ ಆರೋಪಿತನನ್ನು ಪತ್ತೆ ಮಾಡಲು ವಿದ್ಯಾನಗರ ಠಾಣೆ ನಿರೀಕ್ಷಕಿ ಶಿಲ್ಪಾ ವೈ. ಎಸ್., ಪಿಎಸ್ಐ ವಿಶ್ವನಾಥ, ಜಿ ಎನ್. ನಾಗರಾಜ ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡವು ವಿದ್ಯಾನಗರ ಪೊಲೀಸ್ ಠಾಣೆಯ ಮನೆ ಕಳ್ಳತನ ಪ್ರಕರಣದ ಮೊದಲನೇ ಆರೋಪಿ ರಾಣೇಬೆನ್ನೂರಿನ ಹಡಗಲಿ ಗ್ರಾಮದ ಪ್ರವೀಣ (29)ನನ್ನು ಬಂಧಿಸಿದ್ದು, ಆರೋಪಿತನಿಂದ ಈ ಪ್ರಕರಣದಲ್ಲಿ ಕಳ್ಳತನ ಮಾಡಿದ್ದ 2,25,000 ರೂ ಬೆಲೆಯ 37 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗು 90,000 ರೂ ಬೆಲೆಯ ಎರಡು ಬೈಕ್ ಗಳನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿತನ ಹಿನ್ನೆಲೆ:
ತೀರ್ಥಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ಸರಗಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಆಗಸ್ಟ್ 2024 ರಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದು, ನಂತರ ದಾವಣಗೆರೆ ನಗರದಲ್ಲಿ ಕಳ್ಳತನ ಮಾಡಿದ್ದ. ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಾದ ಶಂಕರ್ ಜಾದವ್, ಆನಂದ ಎಂ, ಚಂದ್ರಪ್ಪ, ಬೋಜಪ್ಪ, ಕೊಟ್ರೇಶ, ಆಕಾಶ, ರವಿ ಕುಮಾರ ಹಾಗು ಜಿಲ್ಲಾ ಪೋಲೀಸ್ ಕಛೇರಿಯ ರಾಮಚಂದ್ರ ಜಾಧವ, ಶಿವಕುಮಾರ ಹಾಗೂ ರಮೇಶ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.