SUDDIKSHANA KANNADA NEWS/ DAVANAGERE/DATE:08_08_2025
ದಾವಣಗೆರೆ: ಹೊಂಡಾ ಆಕ್ಟೀವಾಗೆ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ದಾವಣಗೆರೆ ಆರ್ ಟಿ ಒ ಕಚೇರಿ ಅಧೀಕ್ಷಕರು ಮೃತಪಟ್ಟ ದಾರುಣ ಘಟನೆ ದಾವಣಗೆರೆ ನಗರದ ರಿಂಗ್ ರಸ್ತೆಯ ಎಜು ಏಷ್ಯಾ ಸ್ಕೂಲ್ ಸಮೀಪ ಸಂಭವಿಸಿದೆ.
ಈ ಸುದ್ದಿಯನ್ನೂ ಓದಿ: ದೈಹಿಕ ಸಂಪರ್ಕದ ಬಳಿಕ ಮಹಿಳೆ, ಮಕ್ಕಳ ಕೊಂದ: ದರೋಡೆಯಂತೆ ಬಿಂಬಿಸಿದ್ದ ಹಂತಕ ಸಿಕ್ಕಿಬಿದ್ದಿದ್ದು ಹೇಗೆ?
ಪಿ. ತಿಪ್ಪೇಶಪ್ಪ ಮೃತಪಟ್ಟ ಆರ್ ಟಿ ಒ ಕಚೇರಿ ಅಧೀಕ್ಷಕರು. ಮೃತರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು, ಸಂಬಂಧಿಕರು, ಸ್ನೇಹಿತರು ಸೇರಿದಂತೆ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪದ ಗ್ರಾಮದವರಾದ ತಿಪ್ಪೇಶಪ್ಪ ಅವರು ಕಳೆದ ಮೂರು ವರ್ಷಗಳ ಹಿಂದೆ ದಾವಣಗೆರೆ ವರ್ಗಾವಣೆ ಆಗಿ ಬಂದಿದ್ದರು. ಜೆ. ಹೆಚ್. ಪಟೇಲ್ ಬಡಾವಣೆಯಲ್ಲಿ ವಾಸವಿದ್ದ ಅವರು ಕಚೇರಿಗೆ ನಿತ್ಯವೂ ಬೈಕ್ ನಲ್ಲಿ ಬರುತ್ತಿದ್ದರು. ಆದ್ರೆ, ಇಂದು ಕಚೇರಿಗೆ ಹೋಗುತ್ತಿದ್ದಾಗ ರಿಂಗ್ ರಸ್ತೆಯ ಎಜು ಏಷ್ಯಾ ಸ್ಕೂಲ್ ಸಮೀಪ ದಾವಣಗೆರೆ ಕಡೆಯಿಂದ ರಾಣೇಬೆನ್ನೂರಿಗೆ ಹೋಗುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಹೊಂಡಾ ಆಕ್ಟೀವಾಗೆ ಡಿಕ್ಕಿ ಹೊಡೆದಿದೆ.
ತಿಪ್ಪೇಶಪ್ಪ ಅವರು ಹೆಲ್ಮೆಟ್ ಧರಿಸಿದ್ದರೂ ತಲೆಗೆ ಹೊಡೆತ ಬಿದ್ದಿದೆ. ಬಸ್ ನ ಚಕ್ರವು ತಿಪ್ಪೇಶಪ್ಪರ ತಲೆಗೆ ಅಪ್ಪಳಿಸಿದ್ದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಜಮಾಯಿಸಿದ ಜನರು:
ಇನ್ನು ಅಪಘಾತ ಸಂಭವಿಸುತ್ತಿದ್ದಂತೆ ಜನರು ಜಮಾಯಿಸಿದರು. ಹತ್ತಿರ ಹೋಗಿ ನೋಡಿದಾಗ ತಿಪ್ಪೇಶಪ್ಪ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ತಿಪ್ಪೇಶಪ್ಪ ಅವರು ಆರ್ ಟಿ ಒ ಕಚೇರಿಯಲ್ಲಿ ಉತ್ತಮ ಕೆಲಸ ಮಾಡುವ ಮೂಲಕ
ಎಲ್ಲರ ಪ್ರೀತಿಗೆ ಪಾತ್ರವಾಗಿದ್ದರು. ಸೌಮ್ಯ ಸ್ವಭಾವದವರಾದ ತಿಪ್ಪೇಶಪ್ಪ ಅವರ ಕಾರ್ಯವೈಖರಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಜನರು ಹಿಡಿಶಾಪ ಹಾಕಿದರು. ಕೆ ಎಸ್ ಆರ್ ಟಿ ಸಿ ಬಸ್
ಚಾಲಕನನ್ನು ತರಾಟೆಗೆ ತೆಗೆದುಕೊಂಡರು.