SUDDIKSHANA KANNADA NEWS/ DAVANAGERE/ DATE:28-06-2024
ದಾವಣಗೆರೆ: ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಏಳು ಮಹಿಳೆಯರು ಸೇರಿದಂತೆ 13 ಮಂದಿ ದುರ್ಮರಣಕ್ಕೀಡಾದ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ಕ್ರಾಸ್ ಬಳಿಯ ಪೂನಾ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳ್ಳಂಬೆಳಿಗ್ಗೆ ನಾಲ್ಕು ಗಂಟೆ ನಡೆದಿದೆ.
ಮೃತರೆಲ್ಲರೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಪರಶುರಾಮ್ (45), ಭಾಗ್ಯ (40), ವಿಶಾಲಾಕ್ಷಿ (40), ಸುಭದ್ರಾ ಬಾಯಿ(60), ಮಂಜುಳಾ ಬಾಯಿ (62), ಮಾನಸ (24), ರೂಪ (24), ಅರ್ಪಿತಾ, ನಾಗೇಶ್ (50) ಪುಣ್ಯ (50), ಆದರ್ಶ (23) ಮೃತಪಟ್ಟವರು ಎಂದು ಗೊತ್ತಾಗಿದೆ.
ಹಾವೇರಿಯಲ್ಲಿ ನಸುಕಿನ ಜಾವ ಸಂಭವಿಸಿದ ಭೀಕರ ಅಪಘಾತಕ್ಕೆ ಒಂದೇ ಗ್ರಾಮದವರು ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರೂ ಸ್ತಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಮೃತರೆಲ್ಲರೂ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ ವಾಸಿಗಳು ಎಂದು ಮಾಹಿತಿ ನೀಡಿದ್ದಾರೆ.
ಸವದತ್ತಿ ಯಲ್ಲಮ್ಮ, ಚಿಂಚೊಳ್ಳಿ ದೇವಿಯ ದರ್ಶನಕ್ಕೆ ತೆರಳಿದ್ದ 15 ಮಂದಿ ಪೈಕಿ 13 ಮಂದಿ ಮೃತಪಟ್ಟಿದ್ದು, ಅಜ್ಜಿ ಹಾಗೂ ಮೊಮ್ಮಗನಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ 13 ಮಂದಿಯು ಸಾವು ಕಂಡಿದ್ದಾರೆ. ನಿದ್ರೆಯ ಮಂಪರಿನಲ್ಲಿ ಚಾಲಕ ನಿಂತಿದ್ದ ಲಾರಿಗೆ ಟ್ರ್ಯಾಕ್ಸ್ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಡಿಕ್ಕಿಯಾದ ರಭಸಕ್ಕೆ ಟ್ರ್ಯಾಕ್ಸ್ ಸಂಪೂರ್ಣ ನುಜ್ಜು ಗುಜ್ಜಾಗಿದೆ. ಮೃತದೇಹಗಳನ್ನು ವಾಹನದಿಂದ ಹೊರ ತೆಗೆಯುವ ಕೆಲಸ ನಡೆದಿದೆ.
ಚಿಂಚೊಳ್ಳಿ ಮಾಯಮ್ಮ ದರ್ಶನಕ್ಕೆ ಒಂದೇ ಕುಟುಂಬದವರು ಎನ್ನಲಾದ ಇವರೆಲ್ಲರೂ ಟಿಟಿ ವಾಹನ ಮಾಡಿಕೊಂಡು ಹೋಗಿದ್ದರು. ದೇವಿಯ ದರ್ಶನ ಮುಗಿಸಿ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮಕ್ಕೆ ವಾಪಸ್ ಬರುವಾಗ ಈ ಘಟನೆ ನಡೆದಿದೆ. ಅಪಘಾತದಲ್ಲಿ ಒಂದೇ ಗ್ರಾಮದವರು ಸಾವನ್ನಪ್ಪುತ್ತಿದ್ದ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಗ್ರಾಮದಲ್ಲಿ ಮೌನ ಆವರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸುದ್ದಿ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಸ್ಥರು ದೌಡಾಯಿಸುತ್ತಿದ್ದಾರೆ.