SUDDIKSHANA KANNADA NEWS/ DAVANAGERE/DATE:11_08_2025
ದಾವಣಗೆರೆ: ಸರ್ಕಾರಿ ಬಸ್ಸೇ ಕಾಣದ ಊರಿಗೆ ಶಾಸಕ ಕೆ.ಎಸ್.ಬಸವಂತಪ್ಪ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿ ಸಂಚಾರಕ್ಕೆ ಚಾಲನೆ ನೀಡುವ ಮೂಲಕ ಗ್ರಾಮಸ್ಥರ ಕೃತಜ್ಞತೆಗೆ ಪಾತ್ರರಾದರು.
READ ALSO THIS STORY: BIG BREAKING: ರಾಹುಲ್ ಗಾಂಧಿ ಆರೋಪದ ‘ಮತ ಕಳ್ಳತನ’ ವಿರುದ್ಧ ಮಾತನಾಡಿದ್ದ ಸಚಿವ ಕೆ. ಎನ್. ರಾಜಣ್ಣ ತಲೆದಂಡ: ರಾಜೀನಾಮೆ ಅಂಗೀಕರಿಸಿದ ಸಿಎಂ!
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ವಿಠಲಪುರ ಗ್ರಾಮಕ್ಕೆ ರಾಜ್ಯ ರಸ್ತೆ ಸಾರಿಗೆ ಬಸ್ ಸೌಲಭ್ಯ ಇರಲಿಲ್ಲ. ಕಳೆದ 40 ವರ್ಷಗಳಿಂದ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ಗ್ರಾಮಸ್ಥರ ಬೇಡಿಕೆ ಇತ್ತು. ಹಿಂದಿನ ಜನಪ್ರತಿನಿಧಿಗಳು ಗ್ರಾಮಸ್ಥರ ಕೂಗಿಗೆ ಸ್ಪಂದಿಸಿರಲಿಲ್ಲ. ಆದರೆ ಶಾಸಕ ಕೆ.ಎಸ್.ಬಸವಂತಪ್ಪ ಈ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿ ಇಂದು ಬಸ್ ಸಂಚಾರಕ್ಕೆ ಚಾಲನೆ ನೀಡಿ ಗ್ರಾಮಸ್ಥರೊಂದಿಗೆ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಎಸ್.ಬಸವಂತಪ್ಪ, ಸುಮಾರು ೪೦ಕ್ಕೂ ಹೆಚ್ಚು ವರ್ಷಗಳಿಂದ ಈ ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯ ಇಲ್ಲದೆ ಪರಿತಪಿಸುತ್ತಿದ್ದರು. ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಬಸ್ ಸಂಚಾರಕ್ಕೆ ಬೇಡಿಕೆ ಇಟ್ಟಿದ್ದರು. ಈಗ ಗ್ರಾಮಸ್ಥರ ೪೦ ವರ್ಷಗಳ ಕನಸನ್ನು ನನಸು ಮಾಡಿದ್ದೇನೆ. ಅದೇ ರೀತಿ ರಸ್ತೆ ಅಭಿವೃದ್ಧಿ, ಮೂಲಸೌಲಭ್ಯ ಕಲ್ಪಿಸಲು ಹೆಚ್ಚಿನ ಗಮನ ನೀಡುತ್ತೇನೆ ಎಂದರು.
ಬಸ್ ಸೌಲಭ್ಯವಿಲ್ಲದೆ ನಗರ ಪ್ರದೇಶಕ್ಕೆ ಕೆಲಸ, ಕಾರ್ಯ ಮುಗಿಸಿಕೊಂಡು ಹೋಗಿ ಬರಲು ಹಾಗೂ ವಿದ್ಯಾರ್ಥಿಗಳು, ಮಹಿಳೆಯರು, ವಯೋವೃದ್ಧರು, ರೋಗಿಗಳು ನಗರ ಪ್ರದೇಶಗಳಿಗೆ ಹೋಗಲು ಭಾರೀ ಸಮಸ್ಯೆ ಆಗಿತ್ತು. ಅಲ್ಲದೇ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಶಕ್ತಿ ಯೋಜನೆಯಿಂದ ಈ ಭಾಗದ ಮಹಿಳೆಯರು ವಂಚಿತರಾಗಿದ್ದರು. ಈಗ ಬಸ್ ಸಂಚಾರ ಆರಂಭವಾಗಿರುವುದರಿಂದ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಬಾಡ-ವಿಠಲಪುರ-ಒಂಟಿಹಾಳು ಹೊಸ ಮಾರ್ಗವಾಗಿ ಮಾಯಕೊಂಡಕ್ಕೆ ಪ್ರತಿನಿತ್ಯ ಬಸ್ ಸಂಚಾರ ಮಾಡಲಿದೆ. ಇದರ ಜೊತೆಗೆ ಲೋಕಿಕೆರೆ-ಗಿರಿಯಾಪುರ, ದಾವಣಗೆರೆ-ಕ್ಯಾಸೆಟೆಹಳ್ಳಿ ಹೊಸ ಮಾರ್ಗಗಳಿಗೂ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಇದೇ ರೀತಿ ಕ್ಷೇತ್ರದ ವ್ಯಾಪ್ತಿಯ ಹೊಸ ಮಾರ್ಗಗಳಲ್ಲಿ ಸರ್ಕಾರಿ ಬಸ್ ಸೌಲಭ್ಯವಿಲ್ಲದ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಡಿಟಿಒ ಫಕೃದ್ಧೀನ್, ಸಿಡಿಎಂ ಕುಮಾರ್, ಬಾಡ ರುದ್ರಸ್ವಾಮಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹಾರುದ್ರಪ್ಪ, ಗ್ರಾಪಂ ಸದಸ್ಯರಾದ ರಾಜಪ್ಪ, ಅಣಬೇರು ರಾಜಪ್ಪ, ಎಂ.ಡಿ.ಸುರೇಶ್, ಬಾಡ ಸೈಫುಲ್ಲ, ದಿನೇಶ್, ಕುಮಾರಣ್ಣ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.