SUDDIKSHANA KANNADA NEWS/ DAVANAGERE/ DATE:29-11-2024
ದಾವಣಗೆರೆ : ಜಿ.ಎಂ. ವಿಶ್ವವಿದ್ಯಾಲಯದ ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ನಗರದ ಜಿಎಂ ವಿಶ್ವವಿದ್ಯಾಲಯದ ಬಾಸ್ಕೆಟ್ ಬಾಲ್ ಆಟದ ಅಂಗಳದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ಜಿ. ಮಲ್ಲಿಕಾರ್ಜುನಪ್ಪ ಅವರ ಸ್ಮರಣಾರ್ಥಕವಾಗಿ ಜಿ. ಮಲ್ಲಿಕಾರ್ಜುನಪ್ಪ ಮೆಮೋರಿಯಲ್ ಕಪ್ ಶೀರ್ಷಿಕೆಡಿಯಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಎಲ್ಲ ಪದವಿ ವಿದ್ಯಾರ್ಥಿಗಳ ಪುರುಷ ಮತ್ತು ಮಹಿಳೆಯರ ಹೊನಲು ಬೆಳಕಿನ ಬಾಸ್ಕೆಟ್ ಬಾಲ್ ಪಂದ್ಯಾವಳಿಯು ವಿದ್ಯುಕ್ತವಾಗಿ ಶುಭಾರಂಭಗೊಂಡಿತು.
ಜಿಎಂ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್ ಅವರು ಬಾಸ್ಕೆಟ್ ಬಾಲ್ ಆಡುವ ಮೂಲಕ ಈ ಪಂದ್ಯಾವಳಿಗೆ ಚಾಲನೆ ನೀಡಿದರು. ಅಲ್ಲದೇ ಪಂದ್ಯಾವಳಿಯಲ್ಲಿ ಭಾಗವಹಿಸಲು ಆಗಮಿಸಿರುವ ತಂಡಗಳ ಪರಿಚಯ ಮಾಡಿಕೊಂಡು ಕ್ರೀಡಾ ಸ್ಫೂರ್ತಿ ನೀಡುತ್ತಾ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಭವ್ಯ ಭವಿಷ್ಯಕ್ಕೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡರಲ್ಲೂ ನಿಮ್ಮ ಭವಿಷ್ಯ ಅಡಗಿದೆ. ಪಠ್ಯದ ಮುಖೇನ ಜ್ಞಾನ ಪಡೆಯುವುದು ಒಂದು ಭಾಗವಾದರೆ ಇದರ ಜೊತೆಗೆ ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಕೊಂಡು ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಿ, ಅದರಲ್ಲೂ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ದಾವಣಗೆರೆಯ ಎಸ್ ಎಸ್ ಐ ಎಂ ಎಸ್, ವಿವಿಸಿಇ ಮೈಸೂರು ತಂಡಗಳ ನಡುವೆ ಮೊದಲ ಪಂದ್ಯದಾಟದ ಹಣಾಹಣಿ ನಡೆಯಿತು. ಎರಡೂ ತಂಡಗಳು ತಮ್ಮ ಗುರಿ ಜಯದ ಕಡೆ ಮುನ್ನುಗ್ಗಲು ಶತ ಪ್ರಯತ್ನ ನಡೆಸಿದರು.
ದಾವಣಗೆರೆ, ಹಾಸನ, ಮೈಸೂರು, ಧಾರವಾಡ, ಮಡಿಕೇರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ವೈದ್ಯಕೀಯ, ಇಂಜಿನಿಯರಿಂಗ್, ದಂತ ವೈದ್ಯಕೀಯ ಸೇರಿದಂತೆ ಎಲ್ಲ ಪದವಿ ಕಾಲೇಜುಗಳಿಂದ ಸುಮಾರು 30 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ. ಈಗಾಗಲೇ ಮೊದಲ ದಿನವೇ ಭಾಗವಹಿಸುವಿಕೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾಕಷ್ಟು ತಂಡಗಳು ಭಾಗವಹಿಸಿರುವುದೇ ಸಾಕ್ಷಿ. ಪಂದ್ಯಾವಳಿಯಲ್ಲಿ ಭಾಗವಹಿಸಲಿಚ್ಚಿಸುವ ಕ್ರೀಡಾಪಟುಗಳಿಗೂ ಸ್ಥಳದಲ್ಲೇ ನೊಂದಣಿಗೆ ಅವಕಾಶ ನೀಡಲಾಗಿದೆ.
ಈ ಸಂದರ್ಭದಲ್ಲಿ ಸಂಶೋಧನೆ ವಿಭಾಗದ ಡೀನ್ ಡಾ. ಕೆ.ಎನ್. ಭರತ್, ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಹೆಚ್.ಎಸ್. ಕಿರಣ್ ಕುಮಾರ್, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕರಾದ ಜಿ.ಬಿ. ಅಜಯ್ಯ ಸೇರಿದಂತೆ ವಿಭಾಗಗಳ ಮುಖ್ಯಸ್ಥರು, ಪ್ರಾಂಶುಪಾಲರು ಹಾಗೂ ನಿರ್ದೇಶಕರುಗಳು ಭಾಗವಹಿಸಿದ್ದರು.
ಕೊನೆಯ ದಿನವಾದ ನವೆಂಬರ್ 30ರಂದು ಸಂಜೆ 7 ಗಂಟೆಗೆ ಪಂದ್ಯಾವಳಿಯ ಸಮಾರೋಪ ಸಮಾರಂಭವಿದ್ದು, ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು ಅವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸುವರು. ಕುಲಸಚಿವರಾದ ಡಾ. ಬಿ.ಎಸ್. ಸುನಿಲ್ ಕುಮಾರ್, ಸಂಶೋಧನೆ ವಿಭಾಗದ ಡೀನ್ ಡಾ. ಕೆ.ಎನ್. ಭರತ್, ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಹೆಚ್.ಎಸ್. ಕಿರಣ್ ಕುಮಾರ್, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕರಾದ ಜಿ.ಬಿ. ಅಜಯ್ಯ ಸೇರಿದಂತೆ ವಿಭಾಗಗಳ ಮುಖ್ಯಸ್ಥರು, ಪ್ರಾಂಶುಪಾಲರು ಹಾಗೂ ನಿರ್ದೇಶಕರುಗಳು ಭಾಗವಹಿಸುವರು.
ವಿಜೇತರಾದ ಪುರುಷ ವಿಭಾಗಕ್ಕೆ ಮೊದಲ ಬಹುಮಾನವಾಗಿ 20,000 ನಗದು ಮತ್ತು ಆಕರ್ಷಕ ಟ್ರೋಫಿ ಹಾಗೂ ಎರಡನೇ ಬಹುಮಾನವಾಗಿ 10,000 ನಗದು, ಆಕರ್ಷಕ ಟ್ರೋಫಿ ನೀಡಲಾಗುತ್ತಿದೆ. ಮಹಿಳಾ ವಿಭಾಗಕ್ಕೆ ಮೊದಲ ಬಹುಮಾನವಾಗಿ 10,000 ನಗದು, ಆಕರ್ಷಕ ಟ್ರೋಫಿ ಹಾಗೂ ಎರಡನೇ ಬಹುಮಾನವಾಗಿ 7,500 ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುತ್ತಿದೆ.