ಮುಂಬೈ: ಮೂರನೇ ಬಾರಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈದ ಘಟನೆ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯ ಗಂಗಾಖೇಡ್ ನಾಕಾ ಎಂಬ ಗ್ರಾಮದಲ್ಲಿ ನಡೆದಿದೆ.
ಹತ್ಯೆಯಾದ ಮಹಿಳೆಯನ್ನು ಮೈನಾ ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಕುಂಡ್ಲಿಕ್ ಉತ್ತಮ್ ಕಾಳೆ (32) ಎಂದು ಗುರುತಿಸಲಾಗಿದೆ. ಆರೋಪಿಯು ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ ಎಂದು ಆಕೆಗೆ ನಿಂದಿಸುತ್ತಿದ್ದ. ಈ ವಿಷಯವಾಗಿ ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎಂದು ಮೈನಾ ಅವರ ಸಹೋದರಿ ಆರೋಪಿಸಿದ್ದಾರೆ.
ಗುರುವಾರ ರಾತ್ರಿ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಪತ್ನಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ವೇಳೆ ಆಕೆ ಕಿರುಚುತ್ತಾ ಮನೆಯಿಂದ ಹೊರಗೆ ಓಡಿಹೋಗಿದ್ದಾಳೆ. ಜನರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ತೀವ್ರವಾಗಿ ಗಾಯಗೊಂಡಿದ್ದ ಆಕೆ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾಳೆ.