ಬೆಂಗಳೂರು: ಎಲ್ಲೆಲ್ಲೂ ಹೊಸವರ್ಷ ಸಂಭ್ರಮ ಮನೆ ಮಾಡಿರುವ ಹೊತ್ತಲ್ಲೇ ಬೆಂಗಳೂರಿನಲ್ಲಿ ಅಗ್ನಿ ದುರಂತ ಸಂಭವಿಸಿದೆ. ಬುಧವಾರ ರಾತ್ರಿ ಇನ್ನೇನು ಬೈಕ್ ಶೋರೂಮ್ ಬಾಗಿಲು ಮುಚ್ಚಿ ಹೋಗಬೇಕು ಅನ್ನುವಾಗ ಅಗ್ನಿ ನರ್ತನ ಶುರುವಾಗಿತ್ತು. ನೋಡ ನೋಡುತ್ತಲೇ ಬೆಂಕಿಯ ಜ್ವಾಲೆಯ ಆರ್ಭಟಕ್ಕೆ ಕ್ಷಣಾರ್ಧದಲ್ಲಿ ಲಕ್ಷಾಂತರ ಮೌಲ್ಯದ ಬೈಕ್ಗಳು ಆಹುತಿಯಾಗಿವೆ.
ಮಹದೇವಪುರ ಬಿ. ನಾರಾಯಣಪುರದ ಟ್ರಯಂಫ್ ಬೈಕ್ ಶೋರೂಮ್ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಇದರ ಪರಿಣಾಮ ಲಕ್ಷಾಂತರ ಮೌಲ್ಯದ 50ಕ್ಕೂ ಹೆಚ್ಚು ಬೈಕ್ಗಳು ಸುಟ್ಟು ಕರಕಲಾಗಿವೆ. ಇನ್ನು ಶೋರೂಮ್ ಒಳಗಿದ್ದ ಸಿಬ್ಬಂದಿ ಬೆಂಕಿ ಕಾಣಿಸಿಕೊಳ್ತಿದ್ದಂತೆ ಹೊರ ಓಡಿ ಬಂದಿದ್ರು. ಬಳಿಕ ಬೆಂಕಿ ನಂದಿಸಿದ್ದಾರೆ. ಶೋರೂಂ ಹಿಂಬದಿಯಲ್ಲಿರುವ ಸರ್ವೀಸ್ ಸೆಂಟರ್ನಲ್ಲೂ ಅಗ್ನಿ ಅವಘಡದಿಂದ ನಷ್ಟವಾಗಿದೆ.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು ಈ ದುರಂತ ಸಂಭವಿಸಿದೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಒಟ್ಟಾರೆ ಹೊಸ ವರ್ಷದಂದೇ ಅಗ್ನಿ ಅವಘಡ ಸಂಭವಿಸಿ ಶಾಕ್ ಕೊಟ್ಟಿದೆ. ಆದ್ರೆ ಯಾವುದೇ ಪ್ರಾಣಹಾನಿಯಾಗಿಲ್ಲ ಅನ್ನೋದೇ ನಿಟ್ಟುಸಿರು ಬಿಡುವಂತೆ ಮಾಡಿದೆ.