SUDDIKSHANA KANNADA NEWS/ DAVANAGERE/ DATE:17-02-2024
ದಾವಣಗೆರೆ (Davanagere): ದಾಖಲೆಯ 15ನೇ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು ಸಿದ್ದರಾಮೋತ್ಸವ ಮೂಲಕ ಜನಪ್ರಿಯತೆ ಉತ್ತುಂಗಕ್ಕೆ ಏರಿಸಿದ್ದ ದಾವಣಗೆರೆ ಮರೆತು ಬಿಟ್ಟರಾ ಎಂಬ ಅನುಮಾನ ಕಾಡುತ್ತಿದೆ.
ರಾಜ್ಯ ರಾಜಕಾರಣದಲ್ಲಿ ಸಿದ್ದರಾಮೋತ್ಸವ ಬಿರುಗಾಳಿ, ಸುಂಟರಗಾಳಿ ಎಬ್ಬಿಸಿತ್ತು. ಅಂದು ಸೇರಿದ್ದ ಜನಸ್ತೋಮ ಕಂಡು ಎಐಸಿಸಿ ಅಧಿನಾಯಕ ರಾಹುಲ್ ಗಾಂಧಿ ಮಾತ್ರವಲ್ಲ, ಬಿಜೆಪಿಯವರೂ ಸಹ ನಿಬ್ಬೆರಗಾಗಿದ್ದರು. ರಾಜಕೀಯವಾಗಿ ವಿರೋಧಿಸಿದ್ದರೂ, ಜನಸ್ತೋಮ ಹರಿದು ಬಂದಿದ್ದು ನೋಡಿ ಹೌಹಾರಿದ್ದರು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ದಂಗಾಗಿದ್ದರು. ಓರ್ವ ನಾಯಕನ ಜನುಮದಿನಕ್ಕೆ ಹರಿದು ಬಂದ ಜನಸಾಗರ ಅಷ್ಟಿತ್ತು.
ಸಿದ್ದರಾಮಯ್ಯ ಅವರ 75 ನೇ ಜನುಮದಿನದ ಅಮೃತಮಹೋತ್ಸವಕ್ಕೆ ಲಕ್ಷ ಲಕ್ಷಗಟ್ಟಲೇ ಜನರು ಬಂದಿದ್ದರು. ನಾಡಿನ ಮೂಲೆ ಮೂಲೆಗಳಿಂದ ಸಮಾರೋಪಾದಿಯಲ್ಲಿ ಹರಿದು ಬಂದಿತ್ತು ಜನಸಾಗರ.
ಬೂಸ್ಟ್ ನೀಡಿದ್ದ ಅಮೃತ ಮಹೋತ್ಸವ
ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಸೇರಿದ್ದ ಜನಸ್ತೋಮ ಕಾಂಗ್ರೆಸ್ ಗೆ ಬೂಸ್ಟ್ ಕೊಟ್ಟಿದ್ದಂತೂ ಸುಳ್ಳಲ್ಲ. ಈ ಜನಪ್ರಿಯತೆ ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಅಂದು ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯರ ಹೆಸರು ಹೇಳುತ್ತಿದ್ದಂತೆ ಜನರ ಹರ್ಷೋದ್ಘಾರ, ಸಿದ್ದರಾಮಯ್ಯರ ಪರ ಜೈಕಾರ ಮಾರ್ದನಿಸಿತ್ತು.
ಈ ಸುದ್ದಿಯನ್ನೂ ಓದಿ: EXCLUSIVE STORY: ಟಿಕ್… ಟಿಕ್.. ಬಿಜೆಪಿ ಟಿಕೆಟ್… ಕುತೂಹಲ ಕೆರಳಿಸಿದೆ ಸ್ಪರ್ಧೆ ಮಾಡಲು ಯಾರಿಗೆ ಸಿಗಲಿದೆ ಹೈಕಮಾಂಡ್ ನ ಗ್ರೀನ್ ಸಿಗ್ನಲ್…?
ಸ್ವತಃ ರಾಹುಲ್ ಗಾಂಧಿಯವರೇ ಸಿದ್ದರಾಮಯ್ಯರ ಜನಪ್ರಿಯತೆ ನೋಡಿ ಬೆಕ್ಕಸಬೆರಗಾಗಿದ್ದರು.
ಈ ಕಾರ್ಯಕ್ರಮದ ಯಶಸ್ಸು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರಲ್ಲಿ ಹೊಸ ಸಂಚಲನ ಮೂಡಿಸಿದ್ದರೆ, ಬಿಜೆಪಿಗರಿಗೆ ನಡುಕ ತರಿಸಿತ್ತು.
ಜನವೋ ಜನ… ಹರಿದು ಬಂದಿತ್ತು ಜನಸಾಗರ
ನಾಡಿನ ಮೂಲೆ ಮೂಲೆಯಿಂದ ಬಂದಿದ್ದರು. ಎಲ್ಲಿ ನೋಡಿದರೂ ಜನಸಾಗರವೇ ಕಾಣುತಿತ್ತು. ಹತ್ತು ಕಿಲೋಮೀಟರ್ ಗೂ ಅಧಿಕ ಜನರು ಸೇರಿದ್ದರೆಂದರೆ ಯಾವ ಪರಿ ಜನ ಸೇರಿದ್ದರು ಎಂಬುದು ಗೊತ್ತಾಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಇಲ್ಲಿಂದಲೇ ಮತ್ತೆ ಉತ್ಸಾಹ, ಚೈತನ್ಯ ತಂದಿದ್ದು ಎಂದರೆ ಸುಳ್ಳಲ್ಲ.
ಇಷ್ಟೊಂದು ಜನಪ್ರಿಯತೆ ತಂದುಕೊಟ್ಟ ದಾವಣಗೆರೆಗೆ ಸಿಎಂ ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್ ನಲ್ಲಿ ಬಂಪರ್ ಘೋಷಣೆ ಮಾಡುತ್ತಾರೆ ಎಂಬುದು ಹುಸಿಯಾಗಿದೆ. ಎರಡರಿಂದ ಮೂರು ಕಾರ್ಯಕ್ರಮಗಳನ್ನಷ್ಟೇ ನೀಡಲಾಗಿದೆ. ಇದು ಜನರಲ್ಲಿ ಬೇಸರ ತರಿಸಿದೆ. ಸಿದ್ದರಾಮೋತ್ಸವದ ಮೂಲಕ ನಾಡಿಗೆ ಹೊಸ ಸಂದೇಶ ಕೊಟ್ಟ ನೆಲಕ್ಕೆ ಕೊಡುಗೆ ಕೊಡದ ಸಿದ್ದರಾಮಯ್ಯರ ಕ್ರಮಕ್ಕೆ ನಿರಾಸೆ ವ್ಯಕ್ತವಾಗಿದೆ.
ಅದೃಷ್ಟದ ನೆಲ ಮರೆತರಾ ಸಿದ್ದರಾಮಯ್ಯ…?
ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆ. ರಾಜಕಾರಣದ ಇತಿಹಾಸದಲ್ಲಿ ಎಲ್ಲಾ ಪಕ್ಷಗಳಿಗೂ ಅದೃಷ್ಟದ ನೆಲ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಹಲವು ಪಕ್ಷಗಳ ನಂಬಿರುವುದು ಹಳೆಯ ವಿಚಾರ. ಆದ್ರೆ ಮತ್ತೊಮ್ಮೆ
ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗುವಂತೆ ಮಾಡುವಲ್ಲಿ ಈ ಕಾರ್ಯಕ್ರಮದ ಯಶಸ್ಸಿನ ಪಾಲೂ ಇತ್ತು. ಸಿಎಂ ಗಾದಿಗೇರಲು ಸಿದ್ದರಾಮಯ್ಯರಿಗೆ ಕಾರಣವಾಗಿದ್ದೇ ಸಿದ್ದರಾಮೋತ್ಸವ ಅಂದ್ರೆ
ತಪ್ಪಾಗಲ್ಲ. ಯಾಕೆಂದರೆ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯರ ಜನಶಕ್ತಿಗೆ ಬೆಕ್ಕಸ ಬೆರಗಾಗಿದ್ದರು.
ರಾಜ್ಯದ ಇತಿಹಾಸದಲ್ಲಿ ನಾಯಕನೊಬ್ಬನ ಹುಟ್ಟುಹಬ್ಬ ಆಚರಣೆಗೆ ಸಿಕ್ಕ ಸ್ಪಂದನೆ, ಸೇರಿದ ಜನಸ್ತೋಮ ಇದಕ್ಕೆ ಸಾಕ್ಷಿ. ಮಾಜಿ ಸಿಎಂ ಬಂಗಾರಪ್ಪ ಅವರು ಕೆಸಿಪಿ ಪಕ್ಷ ಕಟ್ಟಿದ್ದಾಗ ಸೇರಿದ್ದ ಜನಸ್ತೋಮ ಕಂಡು ಹೌಹಾರಿದ್ದ ಜನರು ಸಿದ್ದರಾಮೋತ್ಸವದ ಯಶಸ್ಸು ಅಷ್ಟೇ ಇತಿಹಾಸ ಸೃಷ್ಟಿಸಿತ್ತು. ದಾವಣಗೆರೆಯಲ್ಲಿ ಸಿದ್ದರಾಮಯ್ಯರ 75 ನೇ ವರ್ಷದ ಅಮೃತ ಮಹೋತ್ಸವ ನಡೆಯಿತು. ಈ ಮಹೋತ್ಸವದಲ್ಲಿ ರಾಜ್ಯದ ನಾನಾ ಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸಿದ್ದರು. ಜನಸಾಗರ ಕಂಡು ಸ್ವತಃ ಕಾಂಗ್ರೆಸ್ ಅಧಿನಾಯಕ
ರಾಹುಲ್ ಗಾಂಧಿ ಅಚ್ಚರಿಪಟ್ಟಿದ್ದರು. ಮಳೆ ನಡುವೆಯೂ ಜನರು ಬಂದಿದ್ದು ಸಂಘಟಕರ ನಿರೀಕ್ಷೆಗೂ ಹೆಚ್ಚಿನದ್ದಾಗಿತ್ತು.
ನವಚೈತನ್ಯ, ಉತ್ಸಾಹ ತಂದುಕೊಟ್ಟಿದ್ದು ಸಿದ್ದರಾಮೋತ್ಸವ
ಕಾಂಗ್ರೆಸ್ ಗೆ ನವಚೈತನ್ಯ ತಂದುಕೊಟ್ಟಿದ್ದೇ ಸಿದ್ದರಾಮೋತ್ಸವ ಎಂದರೆ ತಪ್ಪಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಆದರೂ ವಿರೋಧ ಪಕ್ಷದ ನಾಯಕನ ಹುಟ್ಟುಹಬ್ಬಕ್ಕೆ ಜನರು ಸೇರಿದ್ದ ಪರಿ ಅಧಿಕಾರದಲ್ಲಿದ್ದ ನಾಯಕರ ಹುಬ್ಬೇರುವಂತೆ ಮಾಡಿತ್ತು. ಹತ್ತಕ್ಕೂ ಹೆಚ್ಚು ಕಿಲೋಮೀಟರ್ ವರೆಗೆ ಜನವೋ ಜನ. ರಾಹುಲ್ ಗಾಂಧಿ, ಶಾಮನೂರು ಶಿವಶಂಕರಪ್ಪ, ಎಸ್. ಎಸ್. ಮಲ್ಲಿಕಾರ್ಜುನ್, ವೀರಪ್ಪ ಮೊಯ್ಲಿ ಸೇರಿದಂತೆ ಹಲವು ನಾಯಕರು ಸಮಾವೇಶ ಸ್ಥಳಕ್ಕೆ ಬರಲು ಹರಸಾಹಸವೇ ಪಡಬೇಕಾಯಿತು. ಸಿದ್ದರಾಮಯ್ಯರು ಕಾರಿನಲ್ಲಿ ಕುಳಿತು ವೇದಿಕೆಯತ್ತ ಸಾಗುವವರೆಗೆ ಜನರು ಎರಡೂ ಬದಿಯಲ್ಲಿ ನಿಂತು ಹರ್ಷೋದ್ಘಾರ ಮುಗಿಲು ಮುಟ್ಟುವಂತೆ ಕೂಗು ಹಾಕಿದ್ದರು.
ವೇದಿಕೆಯಲ್ಲಿ ಮಾತನಾಡಿದ್ದ ಪ್ರತಿಯೊಬ್ಬ ರಾಜ್ಯ ಕಾಂಗ್ರೆಸ್ ನಾಯಕರು ನಾವು ಇಷ್ಟೊಂದು ಜನರನ್ನು ನೋಡಿರಲಿಲ್ಲ, ಕಂಡಿರಲಿಲ್ಲ. ವೇದಿಕೆಗೆ ಬರಲು ಇಷ್ಟೊಂದು ಕಷ್ಟ ಪಟ್ಟಿರಲಿಲ್ಲ. ಅಷ್ಟರ ಮಟ್ಟಿಗೆ ಸಿದ್ದರಾಮಯ್ಯರ ಜನಪ್ರಿಯತೆ, ಶಕ್ತಿ, ವಿರಾಟ್ ರೂಪ ಅನಾವರಣಗೊಂಡಿದ್ದು ದಾವಣಗೆರೆ ನೆಲದಲ್ಲಿ ಎಂಬುದು ವಿಶೇಷ.
ರಾಹುಲ್ ಗಾಂಧಿ ಭಾಷಣ ಮಾಡುವಾಗ ನಾನು ಯಾವಾಗಲೂ ಯಾರ ಹುಟ್ಟುಹಬ್ಬಕ್ಕೆ ಹೋಗಲ್ಲ. ಸಿದ್ದರಾಮಯ್ಯರ ಬಗ್ಗೆ ನನಗೆ ವಿಶೇಷ ಪ್ರೀತಿ ಇದೆ. ಆ ಕಾರಣಕ್ಕೆ ಬಂದಿದ್ದೇನೆ. ಇಷ್ಟೊಂದು ಸಂಖ್ಯೆಯಲ್ಲಿ ಸೇರಿರುವ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದರು. ಮಾತ್ರವಲ್ಲ, ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರ ನಡುವಿನ ಕಂದಕ ಸರಿಮಾಡುವ ಪ್ರಯತ್ನ ಮಾಡಿದ್ದರು. ಇಬ್ಬರು ತಬ್ಬಿಕೊಂಡು ಒಗ್ಗಟ್ಟಿನ ಸಂದೇಶ ರಾಜ್ಯದ ಕಾಂಗ್ರೆಸ್ ಗೆ ರವಾನಿಸಿದ್ದರು. ಆಗಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಸಿಎಂ ಮಾತು ಕೇಳಿ ಬಂದಿತ್ತು.
ಹೆಸರು ಹೇಳುತ್ತಿದ್ದಂತೆ ಮುಗಿಲುಮುಟ್ಟಿತ್ತು ಸಿದ್ದು ಪರ ಜೈಕಾರ…!
ಇನ್ನು ಡಿ. ಕೆ. ಶಿವಕುಮಾರ್ ಭಾಷಣ ಆರಂಭಿಸುತ್ತಿದ್ದಂತೆ ಜನರು ಅಷ್ಟೇನೂ ಕೂಗು ಹಾಕಲಿಲ್ಲ. ಯಾವಾಗ ಸಿದ್ದರಾಮಯ್ಯರ ಹೆಸರು ಹೇಳಿದರೋ ಆಗ ಮುಗಿಲು ಮುಟ್ಟುವಂತೆ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯರ ಅಭಿಮಾನಿಗಳು ಹುಚ್ಚೆದ್ದು ಕುಣಿದರು, ಘೋಷಣೆ ಹಾಕಿದರು. ಸಿದ್ದರಾಮಯ್ಯರ ಪರ ಜೈಕಾರಕ್ಕೆ ವೇದಿಕೆಯಲ್ಲಿದ್ದ ನಾಯಕರೆಲ್ಲರೂ ಬೆರಗಾಗಿದ್ದರು. ಆಗ ರಾಹುಲ್ ಗಾಂಧಿ ಅವರು ಜನರತ್ತ ಮತ್ತೆ ಮತ್ತೆ ನೋಡತೊಡಗಿದರು. ಎಲ್ಲಿ ನೋಡಿದರೂ ಜನರ ಶಿಳ್ಳೆ, ಚಪ್ಪಾಳೆಯದ್ದೇ ಸದ್ದಾಗಿತ್ತು. ಸಿದ್ದರಾಮಯ್ಯರ ಮೇಲೆ ತೋರಿದ ಪ್ರೀತಿಗೆ ಮೂಕವಿಸ್ಮಿತರನ್ನಾಗಿಸಿತ್ತು.
ಸಿದ್ದರಾಮಯ್ಯರ ಭಾಷಣ ಕೇಳಿದ ಜನರು ಹುಚ್ಚೆದ್ದು ಕುಣಿದರು. ಆ ನಂತರ ಸಿದ್ದರಾಮಯ್ಯರು ಎಲ್ಲೇ ಹೋದರೂ ಸಿದ್ದರಾಮಯ್ಯ ಕೀ ಜೈ, ಸಿದ್ದರಾಮಯ್ಯ ಕೀ ಜೈ ಎಂಬ ಘೋಷಣೆಗಳು ಮುಗಿಲು ಮುಟ್ಟುತ್ತಿದ್ದವು. ಎಷ್ಟೋ ವೇದಿಕೆಯಲ್ಲಿ ಡಿ. ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯರ ಹೆಸರು ಹೇಳುತ್ತಿದ್ದಂತೆ ಜನರಿಂದ ವ್ಯಕ್ತವಾಗುತ್ತಿದ್ದ ಪರಿಗೆ ವೇದಿಕೆಯಲ್ಲಿ ನಾಯಕರಿಗೆ ಆಗಲೇ ಅರಿವಾಗಿತ್ತು.
ವೇದಿಕೆಗೆ ಬರಲು ಪರದಾಡಿದ್ದ ರಾಹುಲ್ ಗಾಂಧಿ
ಸಿದ್ದರಾಮೋತ್ಸವದ ಬಳಿಕ ರಾಹುಲ್ ಗಾಂಧಿ ಅವರು ಸಹ ಸಿದ್ದರಾಮಯ್ಯರ ಜನಶಕ್ತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ವೇದಿಕೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು ಸಮಸ್ಯೆಯಾಗಬಾರದು, ಎಲ್ಲರೂ ಒಟ್ಟಾಗಿದ್ದೇವೆ ಎಂಬ ಸಂದೇಶ ಸಾರುವ ಸಲುವಾಗಿ ಯಾರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂಬುದನ್ನೂ ಸಹ ಘೋಷಿಸಿದ್ದರು. ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ರ ನಾಯಕತ್ವದಲ್ಲಿ 2023ರ ವಿಧಾನಸಭೆ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ದು ಸಹ ದಾವಣಗೆರೆ ನೆಲದಲ್ಲಿಯೇ ಎಂಬುದು ವಿಶೇಷ.
ಸಿದ್ದರಾಮಯ್ಯರಿಗೆ ಅಷ್ಟೇ ಇಷ್ಟವಾದ ನೆಲವೆಂದರೆ ಬೆಣ್ಣೆನಗರಿ. ಜೆಡಿಎಸ್ ನಿಂದ ಹೊರ ಬಂದು ಅಹಿಂದ ಸಮಾವೇಶ ಮಾಡಿದಾಗ ದಾವಣಗೆರೆಯಲ್ಲಿ ಸಿಕ್ಕ ಅಭೂತಪೂರ್ವ ಸ್ಪಂದನೆ ಇಂದಿಗೂ ಮರೆತಿರಲಿಲ್ಲ. ಅದೇ ರೀತಿಯಲ್ಲಿ ಸಿದ್ದರಾಮೋತ್ಸವದ ಯಶಸ್ಸು, ಜನಸ್ಪಂದನೆ, ಜನಸ್ತೋಮವೂ ಇದಕ್ಕೆ ಸಾಕ್ಷಿ. ದಾವಣಗೆರೆ ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯ ಹೊರತುಪಡಿಸಿದರೆ ಹೆಚ್ಚು ಜನಸಂಖ್ಯೆ ಇರೋದು ಕುರುಬ ಸಮಾಜದ್ದು. ಹರಿಹರ, ದಾವಣಗೆರೆ, ಹೊನ್ನಾಳಿ ಸೇರಿದಂತೆ ಬೇರೆ ಬೇರೆ ತಾಲೂಕುಗಳಲ್ಲಿಯೂ ಈ ಸಮಾಜದ ಪಾರುಪತ್ಯ ಇದೆ. ಸಿದ್ದರಾಮಯ್ಯರು ಸಿಎಂ ಆಗುತ್ತಾರೆ ಎಂಬ ಕಾರಣಕ್ಕೆ ಸಮಾಜವು ಕಾಂಗ್ರೆಸ್ ಕೈ ಹಿಡಿದಿತ್ತು. ಜಿಲ್ಲೆಯಲ್ಲಿ ಆರು ಸ್ಥಾನಗಳು ಬರುವಲ್ಲಿ ಈ ಸಮಾಜದ ಬೆಂಬಲ ಅಲ್ಲಗಳೆಯುವಂತಿಲ್ಲ.
ಜನಪ್ರಿಯತೆ ಕೊಟ್ಟ ನೆಲಕ್ಕೆ ಸಿಗಲಿಲ್ಲ ಕೊಡುಗೆ…!
ಆದ್ರೆ, ಇಷ್ಟೊಂದು ಜನಪ್ರಿಯತೆ, ಪ್ರೀತಿ ಕೊಟ್ಟ ದಾವಣಗೆರೆ ನೆಲಕ್ಕೆ ಕೊಡುಗೆ ನೀಡದ ಸಿಎಂ ಸಿದ್ದರಾಮಯ್ಯರ ಕ್ರಮಕ್ಕೆ ಜಿಲ್ಲೆಯ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಹಣ ನೀಡಿದ್ದರೂ ದಾವಣಗೆರೆ ಜಿಲ್ಲೆಯು ಸಿದ್ದರಾಮೋತ್ಸವದ ಮೂಲಕ ಹೊಸ ಚೈತನ್ಯ, ಉತ್ಸಾಹ, ಶಕ್ತಿ ಕೊಟ್ಟ ನೆಲ ದಾವಣಗೆರೆಗೆ ಬಂಪರ್ ಕೊಡುಗೆ ಕೊಡಬಹುದಿತ್ತು.
ಎಸ್. ಎಸ್. ಮಲ್ಲಿಕಾರ್ಜುನ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವರೂ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಯೋಜನೆಗಳನ್ನು ನಿರೀಕ್ಷೆ ಮಾಡಲಾಗಿತ್ತು. ಆದ್ರೆ, ಹೆಚ್ಚಿನ ಯೋಜನೆಗಳು ಬಂದಿಲ್ಲ. ಮಲ್ಲಿಕಾರ್ಜುನ್ ಅವರು ಈ ಹಿಂದೆ ಸಚಿವರಾಗಿದ್ದಾಗ ಅಭಿವೃದ್ಧಿ ಕಾರ್ಯಗಳ ಮೂಲಕ ಅಭಿವೃದ್ಧಿಯ ಹರಿಕಾರ ಎನಿಸಿಕೊಂಡಿದ್ದರು. ಆದ್ರೆ, ಈಗ ಹೆಚ್ಚಿನ ಅನುದಾನ, ಯೋಜನೆಗಳು ಬಾರದ ಕಾರಣಕ್ಕೆ ಸಿದ್ದರಾಮಯ್ಯ ಅವರು ಸಿದ್ದರಾಮೋತ್ಸವದ ಜನಪ್ರಿಯತೆ ಮರೆತಂತೆ ಕಾಣುತ್ತಿದೆ ಎಂಬುದು ಜನರ ಅಭಿಪ್ರಾಯ ಆಗಿದೆ. ಮಂದಿನ ಬಜೆಟ್ ನಲ್ಲಾದರೂ ದಾವಣಗೆರೆ ಜಿಲ್ಲೆಗೆ ಬಂಪರ್ ಕೊಡುಗೆ ನೀಡಲಿ ಎಂಬುದು ಜನರ ಆಶಯವಾಗಿದೆ.