SUDDIKSHANA KANNADA NEWS/ DAVANAGERE/ DATE:11-01-2024
ದಾವಣಗೆರೆ: ಅಡಿಕೆ ಧಾರಣೆಯು 50 ಸಾವಿರ ರೂಪಾಯಿ ಮುಟ್ಟಿದ್ದು, ರೈತರು ಖುಷಿಯಾಗಿದ್ದಾರೆ. 2024ರ ಹೊಸ ವರ್ಷದ ಆರಂಭವು ಅಡಿಕೆ ಬೆಳೆಗಾರರಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಕಳೆದ ವರ್ಷ ಅಡಿಕೆ ದರವು ಜುಲೈ ತಿಂಗಳಿನಲ್ಲಿ 57 ಸಾವಿರ ರೂಪಾಯಿ ದಾಟಿದ್ದು ಬಿಟ್ಟರೆ, ಮತ್ತೆ ಏರಿಕೆ ಆಗಿರಲಿಲ್ಲ. ಕೇವಲ ಒಂದೇ ತಿಂಗಳಿಗೆ 47 ಸಾವಿರ ರೂಪಾಯಿಗೆ ಕುಸಿದಿತ್ತು. ಸುಮಾರು 9ರಿಂದ 10 ಸಾವಿರ
ರೂಪಾಯಿ ಕಡಿಮೆಯಾಗಿತ್ತು. ಧಾರಣೆಯು ವರ್ಷಪೂರ್ತಿ ಹಾವು – ಏಣಿ ಆಟದಂತಿತ್ತು. ಆದ್ರೆ, ಈ ವರ್ಷ ಅಡಿಕೆ ಧಾರಣೆಯು ಸ್ಥಿರತೆ ಕಾಯ್ದುಕೊಂಡಿದ್ದು, ವರ್ಷದ ಆರಂಭದಲ್ಲಿಯೇ 50 ಸಾವಿರ ರೂಪಾಯಿ ಮುಟ್ಟಿದ್ದು, ಮತ್ತಷ್ಟು ಏರಿಕೆಯಾಗಬಹುದು ಎಂಬ ಆಶಾಭಾವನೆ ಹೊಂದಿದ್ದಾರೆ.
ಒಂದೇ ದಿನದಲ್ಲಿ ಅಡಿಕೆ ಧಾರಣೆಯು 500 ರೂಪಾಯಿ ಹೆಚ್ಚಾಗಿದೆ. ಕಳೆದ ಕೆಲ ದಿನಗಳಿಂದ 200 ರೂಪಾಯಿಯಿಂದ 300 ರೂಪಾಯಿ ಹೆಚ್ಚಾಗುತಿತ್ತು. ಸ್ವಲ್ಪ ಕಡಿಮೆಯಾಗುತಿತ್ತು. ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಅಡಿಕೆ ಧಾರಣೆ ಸ್ಥಿರತೆ ಕಾಯ್ದುಕೊಂಡಿತ್ತು.
ಕಳೆದ 20 ದಿನಗಳಿಂದ ಅಡಿಕೆ ಧಾರಣೆಯು ಏರು ಮುಖದಲ್ಲಿಯೇ ಸಾಗುತ್ತಿದೆ. ಎಲ್ಲೆಡೆ ಅಡಿಕೆ ಕೊಯ್ಲು ಬಹುತೇಕ ಮುಗಿದಿದ್ದು, ಮಾರುಕಟ್ಟೆಯಲ್ಲಿ ಅಡಿಕೆ ಬಿಡಬೇಕು ಎಂದುಕೊಂಡಿರುವ ರೈತರಿಗೆ ಸುವರ್ಣಾವಕಾಶ. ಮತ್ತೆ ಅಡಿಕೆ ಧಾರಣೆ ಏರಿಕೆ ಆಗುತ್ತೋ ಇಲ್ಲವೋ ಕಡಿಮೆ ಆಗುತ್ತೋ ಎಂಬ ಆತಂಕವೂ ಕಾಡಲಾರಂಭಿಸಿದೆ.
ಯಾಕೆಂದರೆ ಕಳೆದ ವರ್ಷದ ಜುಲೈ ತಿಂಗಳಿನಲ್ಲಿ 57 ಸಾವಿರ ರೂಪಾಯಿ ಮುಟ್ಟಿದ್ದರೂ ಹಲವು ರೈತರು ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಬಿಡಲು ಹೋಗಿರಲಿಲ್ಲ. ಮತ್ತಷ್ಟು ಏರಿಕೆಯಾಗುತ್ತದೆ ಎಂದುಕೊಂಡು
ಸುಮ್ಮನಾದರು. ಆ ನಂತರ 47 ಸಾವಿರ ರೂಪಾಯಿಗೆ ಕುಸಿದಿತ್ತು. ಆ ನಂತರ 50 ಸಾವಿರ ರೂಪಾಯಿ ಗಡಿ ಮುಟ್ಟಿರಲಿಲ್ಲ.
ಹೊಸ ವರ್ಷದ ಶುರುವಿನಿಂದಲೂ ಏರುಮುಖದಲ್ಲಿ ಸಾಗುತ್ತಿರುವ ಅಡಿಕೆ ಧಾರಣೆಯು 50 ಸಾವಿರ ರೂಪಾಯಿ ಮುಟ್ಟಿದೆ. ಮುಂಬರುವ ದಿನಗಳಲ್ಲಿ ಅಡಿಕೆ ಧಾರಣೆಯಲ್ಲಿ ಏರಿಕೆಯಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಅಡಿಕೆಯನ್ನು ಇನ್ನೂ ಕೆಲ ತಿಂಗಳು ದಾಸ್ತಾನು ಮಾಡಿ ಆ ನಂತರ ಮಾರುಕಟ್ಟೆಗೆ ಬಿಟ್ಟರೆ ಇನ್ನೂ ಒಳ್ಳೆಯ ದರ ಸಿಗಬಹುದು ಎಂಬ ಲೆಕ್ಕಾಚಾರವೂ ಇದೆ.
ಚನ್ನಗಿರಿ ಮಾರುಕಟ್ಟೆಯಲ್ಲಿ ಅಡಿಕೆಯು ಪ್ರತಿ ಕ್ವಿಂಟಾಲ್ ಗೆ ಗರಿಷ್ಠ 49,800 ರೂಪಾಯಿ ದಾಖಲಿಸಿದ್ದರೆ, ಕನಿಷ್ಠ ಬೆಲೆ 46,559 ರೂಪಾಯಿ ಇದೆ. ಉತ್ತಮ ಅಡಿಕೆ ರಾಶಿಗೆ ಕನಿಷ್ಠ 46,559 ರೂಪಾಯಿ ಹಾಗೂಗರಿಷ್ಠ ಬೆಲೆ 49,800, ಸರಾಸರಿ ಬೆಲೆ 48,894 ರೂಪಾಯಿ ಹಾಗೂ ಬೆಟ್ಟೆ ಅಡಿಕೆ ದರ 36,305 ರೂಪಾಯಿ ಆಗಿದೆ. ಒಟ್ಟಿನಲ್ಲಿ ಅಡಿಕೆ ಧಾರಣೆಯು 50 ಸಾವಿರ ಮುಟ್ಟಿದ್ದು, ಅಡಿಕೆ ಬೆಳೆಗಾರರು ಖುಷಿವ್ಯಕ್ತಪಡಿಸಿದ್ದಾರೆ.
ಒಂದೆಡೆ ಧಾರಣೆ ಹೆಚ್ಚಾಗಿದ್ದರೆ, ಮತ್ತೊಂದೆಡೆ ಈ ವರ್ಷವೇ ಇಳುವರಿ ಕಡಿಮೆಯಾಗಬೇಕಿತ್ತಾ ಎಂಬ ಮಾತು ಅಡಿಕೆ ಬೆಳೆಗಾರರಲ್ಲಿ ಕೇಳಿ ಬರುತ್ತಿದೆ. ಬೇಸಿಗೆಯೂ ಬರುತ್ತಿದೆ. ತೋಟಗಳಿಗೆ ನೀರು ಸಿಗದಿದ್ದರೆ, ಅಡಿಕೆ ಮರಗಳು ಒಣಗುವ ಆತಂಕವೂ ಹೆಚ್ಚಾಗುತ್ತಿದೆ.