SUDDIKSHANA KANNADA NEWS/ DAVANAGERE/ DATE:31-12-2023
ದಾವಣಗೆರೆ: ಪ್ರೇಮಿಗಳು ಓಡಿಹೋಗಿ ಮದುವೆಯಾಗಿದ್ದಕ್ಕೆ ಯುವಕನ ಕುಟುಂಬಸ್ಥರ ಮೇಲೆ ಮೇಲೆ ಯುವತಿ ಕುಟುಂಬಸ್ಥರು ಹಲ್ಲೆ ನಡೆಸಿದ ಘಟನೆ ಹರಿಹರ ತಾಲೂಕಿನ ಕಮಲಾಪುರ ಗ್ರಾಮದಲ್ಲಿ ನಡೆದಿದೆ. ಹಲ್ಲೆ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಳಗಾವಿಯಲ್ಲಿ ನಡೆದ ಪ್ರಕರಣ ಮಾಸುವ ಮುನ್ನವೇ ದಾವಣಗೆರೆ ಜಿಲ್ಲೆಯಲ್ಲಿ ಇಂಥ ಅಮಾನವೀಯ ಘಟನೆ ನಡೆದಿದೆ. ಕಮಲಾಪುರ ಗ್ರಾಮದ ಸೃಷ್ಟಿ ಹಾಗೂ ಸಿದ್ದಾರ್ಥ್ ಎನ್ನುವವರು ಪ್ರೀತಿಸಿ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದರು. ಬೇರೆ ಬೇರೆ ಜಾತಿಯಾಗಿದ್ದರಿಂದ ಯುವತಿಯ ಕಡೆಯವರು ಯುವಕನ ಕುಟುಂಬಸ್ಥರಿಗೆ ನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಕಳೆದ ಡಿಸೆಂಬರ್ 10 ರಂದು ಮನೆ ಬಿಟ್ಟು ಓಡಿ ಹೋಗಿ ಚಿತ್ರದುರ್ಗದಲ್ಲಿ ಯುವಕ ಹಾಗೂ ಯುವತಿ ಮದುವೆಯಾಗಿದ್ದರು. ಬೇರೆ ಬೇರೆ ಜಾತಿಯವರಾದ ಕಾರಣ ಮದವೆಗೆ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಜೋಡಿ ಓಡಿ ಹೋಗಿ ಸಪ್ತಪದಿ ತುಳಿದಿತ್ತು.
ಯುವತಿಯ ಮನೆಯವರ ಕಡೆಯಿಂದ ಯುವಕನಿಗೆ ಜೀವ ಬೆದರಿಕೆ ಇದ್ದ ಕಾರಣಕ್ಕೆ ಡಿಸೆಂಬರ್ 15ರಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಪಿ ಉಮಾ ಪ್ರಶಾಂತ್ ರವರ ಮುಂದೆ ಹಾಜರಾಗಿ ರಕ್ಷಣೆ
ಕೋರಿದ್ದರು. ಪೊಲೀಸ್ ಠಾಣೆಯಲ್ಲಿ ಇತ್ಯರ್ಥ ಮಾಡಿ ಪ್ರೇಮಿಗಳನ್ನು ಒಂದು ಮಾಡಿ ಪೊಲೀಸರು ಕಳುಹಿಸಿದ್ದರು. ಯುವಕ ಹಾಗೂ ಯುವತಿಗೆ ಯಾವುದೇ ರೀತಿಯ ತೊಂದರೆ ಕೊಡುವುದಾಗಲೀ, ಹಲ್ಲೆ ನಡೆಸುವುದಾಗಲೀ ಕಂಡು ಬಂದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿದ್ದರು.
ಇಬ್ಬರೂ ವಯಸ್ಕರಾಗಿರುವ ಕಾರಣದಿಂದ ಅವರ ಅಭಿಪ್ರಾಯವೇ ಅಂತಿಮ. ಹಾಗಾಗಿ, ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಪೊಲೀಸರು ಸೂಚನೆ ಕೊಟ್ಟು ಕಳುಹಿಸಿದ್ದರು. ಶನಿವಾರ ರಾತ್ರಿ ಏಕಾಏಕಿ ಯುವಕನ ಮನೆಗೆ ನುಗ್ಗಿ ತಂದೆ ತಾಯಿ ಸೇರಿದಂತೆ ಹಲವರ ಮೇಲೆ ಹಲ್ಲೆ ನಡೆಸಲಾಗಿದೆ. ಸಿದ್ಧಾರ್ಥ್ ತಂದೆ ಬಸಪ್ಪ ಗಂಭೀರವಾಗಿ ಹಲ್ಲೆಗೆ ಒಳಗಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಲ್ಲೆ ಮಾಡಿದವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಮಲೇಬೆನ್ನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಇಬ್ಬರ ಬಂಧನ:
ಪ್ರೀತಿಸಿ ಮದುವೆಯಾಗಿದ್ದಕ್ಕೆ ಹುಡುಗನ ಮನೆಯವರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಯುವತಿಯ ಕಡೆಯವರ ಇಬ್ಬರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಘಟನೆ ಕುರಿತಂತೆ ಮಾಧ್ಯಮವದರಿಗೆ ಪ್ರತಿಕ್ರಿಯೆ ನೀಡಿರುವ ಅವರು, ಈಗಾಗಲೇ ಗಲಾಟೆಯಾದ ಬಗ್ಗೆ ಕೇಸ್ ದಾಖಲಾಗಿದೆ. ಈ ಸಂಬಂಧ 307 ಕೇಸ್ ಕೂಡ ದಾಖಲಾಗಿದೆ. ಹುಡುಗಿ ಮನೆಯವರು ಹಲ್ಲೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಹುಡುಗ-ಹುಡುಗಿ ಇಬ್ಬರು ಅಂತರ್ಜಾತಿಯವರು. ಇಬ್ವರು ಮೇಜರ್ ಆಗಿದ್ದರಿಂದ ಒಪ್ಪಿ ಮದುವೆಯಾಗಿದ್ದಾರೆ. ಹುಡುಗಿ ಮನೆಯವರಿಗೂ ಗಲಾಟೆ ಮಾಡದಂತೆ ಹೇಳಲಾಗಿದೆ. ಅಲ್ಲದೇ, ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸದ್ಯ ಯಾವುದೇ ಸಮಸ್ಯೇ ಇಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಹಿತಕರ ಘಟನೆ ನಡೆದರೆ ಮುಲಾಜಿಲ್ಲದೇ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.