SUDDIKSHANA KANNADA NEWS/ DAVANAGERE/ DATE:31-12-2023
ದಾವಣಗೆರೆ: ನಾನು ದೊಡ್ಡವನಲ್ಲ. ಅಷ್ಟೊಂದು ದೊಡ್ಡವನಾ…? ನೀನೇ ಹೇಳಣ್ಣಾ. ರೇಣುಕಾಚಾರ್ಯ ಬಣ ಅಂತೇನೂ ಇಲ್ಲ. ಇಲ್ಲೇನಿದ್ದರೂ ಕಮಲ ಬಣ.
ಇದು ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡುತ್ತಾ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಪ್ರತಿಕ್ರಿಯಿಸಿದ ಪರಿ. ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಹಾಗೂ ರೇಣುಕಾಚಾರ್ಯ ಬಣಗಳಿವೆ, ಅಸಮಾಧಾನ ಇದೆಯಲ್ವಾ. ನೀವು ಮುಖಂಡರ ಜೊತೆ ಚರ್ಚೆ ಮಾಡುತ್ತಾ ಸರಿ ಮಾಡುತ್ತಿದ್ದರಂತೆ ಎಂಬ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರಷ್ಟೇ ಅಲ್ಲ, ಕೈಮುಗಿದರು.
ನಾನಂತೂ ದೊಡ್ಡವನಲ್ಲ. ಚಿತ್ರದುರ್ಗ – ದಾವಣಗೆರೆ ಅಖಂಡ ಜಿಲ್ಲೆಯಾಗಿದ್ದ ಬಿಜೆಪಿ ಕಟ್ಟಿ ಬೆಳೆಸಿದವರು ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರು. ಜಿಲ್ಲೆಯಾದ್ಯಂತ ಸಂಚರಿಸಿ ಪಕ್ಷ ಕಟ್ಟಿದ್ದರು. ನಾವೆಲ್ಲರೂ ಒಂದೇ. ನಮ್ಮದೇನಿದ್ದರೂ ಕಮಲ ಬಣ. 1990ರಲ್ಲಿ ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧಿಸುವವರೇ ಇರಲಿಲ್ಲ. ಯಾರನ್ನು ಕೇಳಿದರೂ ಸ್ಪರ್ಧೆ ಮಾಡೋಲ್ಲ ಅಂತಿದ್ದರು. ಆದ್ರೆ, ಈಗ ಪಕ್ಷ ಬೆಳೆದಿದೆ. ಆಕಾಂಕ್ಷಿಗಳೂ ಹೆಚ್ಚಿದ್ದಾರೆ ಎಂದು ಹೇಳಿದರು.
ನಾನು ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ ಅಲ್ಲ. ನಾನು ಅರ್ಜಿಯನ್ನೂ ಹಾಕಿಲ್ಲ. ಯಾರು ಹೇಳಿದರು ಎಂಬುದು ಗೊತ್ತಿಲ್ಲ. ಜಿಲ್ಲಾಧ್ಯಕ್ಷರ ಆಯ್ಕೆ ಸಂಬಂಧ ವೀಕ್ಷಕರು ಬಂದಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು, ರಾಜ್ಯ ನಾಯಕರು ಸೇರಿದಂತೆ ಪಕ್ಷದ ಪ್ರಮುಖರು ಜಿಲ್ಲಾಧ್ಯಕ್ಷರು ಯಾರು ಆಗಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಈ ಬಗ್ಗೆ ಹೆಚ್ಚೇನೂ ಹೇಳಲು ಹೋಗುವುದಿಲ್ಲ. ಪಕ್ಷ ಸಂಘಟನೆ ಹಾಗೂ ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಆಯ್ಕೆ ಮಾಡುತ್ತಾರೆ ಎಂದು ತಿಳಿಸಿದರು.