SUDDIKSHANA KANNADA NEWS/ DAVANAGERE/ DATE: 29-12-2023
ದಾವಣಗೆರೆ: 2023 ಮುಗಿಸಿ 2024 ನೇ ವರ್ಷಕ್ಕೆ ಹೆಜ್ಜೆ ಇಡುತ್ತಿರುವ ದಾವಣಗೆರೆ ಜಿಲ್ಲೆಯ ಸಮಸ್ತ ಜನತೆಗೆ ದಾವಣಗೆರೆ ಜಿಲ್ಲಾ ಪೊಲೀಸ್ (Police) ಇಲಾಖೆಯು ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಸೂಚನೆಗಳನ್ನು ನೀಡಿದ್ದು, ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಆದೇಶಿಸಿದೆ.
ಹೊಸ ವರ್ಷಾಚರಣೆ ಪ್ರಯುಕ್ತ ಕುಡಿದು ವಾಹನ ಚಾಲನೆ ಮಾಡುವುದು, ವಾಹನಗಳಲ್ಲಿ ಹೆಚ್ಚಿನ ಜನರು ಸವಾರಿ ಮಾಡುವುದನ್ನು ನಿಷೇಧಿಸಿದೆ. ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಗರದ ಆಯಕಟ್ಟಿನ ಸ್ಥಳಗಳಲ್ಲಿ, ಮಹಿಳೆಯರ ಪಿ.ಜಿ., ಮತ್ತು ಹಾಸ್ಟಲ್ಗಳ ಬಳಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಶಾಪ್ಗಳು ನಿಗದಿಪಡಿಸಿದ ಸಮಯಕ್ಕೆ ಬಂದ್ ಮಾಡಲು ಸೂಚಿಸಲಾಗಿದೆ.
ಆಯಕಟ್ಟಿನ ಸ್ಥಳಗಳಲ್ಲಿ ಕೆಎಸ್ಆರ್ಪಿ ಮತು ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಹೊಸ ವರ್ಷಾಚರಣೆಯಲ್ಲಿ ಯುವಕರು ಅಶ್ಲೀಲವಾಗಿ, ಅಸಭ್ಯವಾಗಿ ವರ್ತನೆ ಮಾಡಿದ್ದೇ ಆದಲ್ಲಿ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಗರದ ಹೊರ ವಲಯಗಳಾದ ಕೊಂಡಜ್ಜಿ ಕೆರೆ, ದೇವರಬೆಳಕೆರೆ ಚೆಕ್ ಡ್ಯಾಂ ಮತ್ತು ಇತರೆ ಹೊರಭಾಗಗಳಲ್ಲೂ ಪೊಲೀಸ್ ನಿಯೋಜನೆ ಮಾಡಲಾಗುವುದು.
ವೇಗವಾಗಿ ವಾಹನ ಚಲಾಯಿಸಿದರೆ ಹುಷಾರ್:
ಸಾರ್ವಜನಿಕರು ಮುಖ್ಯವಾಗಿ ಯುವಕರು ಬೇರೆಯವರಿಗೆ ತೊಂದೆರೆಯಾಗದ ರೀತಿಯಲ್ಲಿ ಹೊಸ ವರ್ಷಾಚರಣೆ ಮಾಡಲು ಸೂಚಿಸಿದೆ. ವಾಹನಗಳನ್ನು ಅತೀ ವೇಗವಾಗಿ ಚಾಲನೆ ಮಾಡುತ್ತಾ, ಸಾರ್ವಜನಿಕರಿಗೆ ತೊಂದರೆಯಾಗುವಂತೆ ಜೋರಾಗಿ ಕೂಗುವುದು, ಕಿರಿಚುವುದಕ್ಕೆ ನಿಷೇಧ ಹೇರಲಾಗಿದೆ. ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ತ್ರಿಬಲ್ ರೈಡಿಂಗ್ ಗೂ ಬ್ರೇಕ್: ಪೊಲೀಸ್ ಎಚ್ಚರಿಕೆ
ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯ ತಾಲ್ಲೂಕು ಕೇಂದ್ರಗಳಾದ ಹರಿಹರ, ಹೊನ್ನಾಳಿ, ಚನ್ನಗಿರಿ, ಜಗಳೂರು, ನ್ಯಾಮತಿ ಪಟ್ಟಣಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿರುತ್ತದೆ.
ಈ ಸುದ್ದಿಯನ್ನೂ ಓದಿ:
Davanagere: ಐಯಾಮ್ ಇನ್ ಲವ್, ಯೂ ಆರ್ ಇನ್ ಲವ್ ಅನ್ನುತ್ತಲೇ ನಾಲ್ಕು ಮದುವೆಯಾದಳಾ ಕಿಲಾಡಿ ಲೇಡಿ…? ಆಕೆ ಪತಿ ಮಾಡಿದ ಆರೋಪಗಳೇನು…?
ನಗರದ ವಿವಿಧ ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆದಿದ್ದು, ಕುಡಿದು ವಾಹನಗಳನ್ನು ಚಾಲನೆ ಮಾಡುವವರ, ತ್ರಿಬಲ್ ರೈಡಿಂಗ್ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು.
ಮಾರ್ಗಸೂಚಿ ಪಾಲನೆ ಕಡ್ಡಾಯ:
ವಿಶೇಷವಾಗಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೋವಿಡ್ 19 ಉಪ ತಳಿ ಎಓ.1 ವೈರಸ್ ವ್ಯಾಪಿಸುತ್ತಿರುವುದರಿಂದ ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕ, ಜನಸಂದಣಿ ಪ್ರದೇಶಗಳಲ್ಲಿ ಪಟಾಕಿಗಳನ್ನು ಸಿಡಿಸಬಾರದು.
ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಸಂಧರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೇ ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ಆಚರಿಸುವುದು, ಯಾವುದೇ ಅಹಿತಕರ ಘಟನೆಗಳು ಕಂಡುಬಂದರೆ ತುರ್ತು ಸಹಾಯವಣಿ 112 ಗೆ ಕರೆ ಮಾಡುವುದು ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ , ಸಿಬ್ಬಂದಿೆ ಮಾಹಿತಿ ನೀಡುವಂತೆ ಕೋರಲಾಗಿದೆ.
ಸೂಕ್ತ ಕಾನೂನು ಕ್ರಮ:
ಸಾಮಾಜಿಕ ಜಾಲತಾಣಗಳಲ್ಲಿ ಕೋಮುಪ್ರಚೋದಕ ಹಾಗೂ ಧಾರ್ಮಿಕ ನಿಂದನೆ, ಸುಳ್ಳುಸುದ್ದಿ ಹರಡುವುದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂಥ ಪೋಸ್ಟ್ ಗಳನ್ನು ಹಾಕುವುದಾಗಲೀ ಹಾಗೂ ಶೇರ್ ಮಾಡುವುದಾಗಲೀ ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಹೊಸ ವರ್ಷಾಚರಣೆ ಸಂಧರ್ಭದಲ್ಲಿ ಕರ್ಕಶವಾದ ಶಬ್ಧವನ್ನುಂಟು ಮಾಡುವ ಸೌಂಡ್ ಸಿಸ್ಟಂ ಮತ್ತು ಡಿಜೆಗಳನ್ನು ಉಪಯೋಗಿಸಬಾರದು, ನ್ಯಾಯಾಲಯವು ಕರ್ಕಶವಾದ ಶಬ್ಧವನ್ನುಂಟು ಮಾಡುವ ಸೌಂಡ್ ಸಿಸ್ಟಂ ಮತು ಡಿಜೆಗಳನ್ನು ನಿಷೇಧಿಸಿದ್ದು, ಉಲ್ಲಂಘಿಸಿದ್ದಲ್ಲಿ ಕಾನೂನು ರಿತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯಾದ್ಯಂತ ಹೊಸ ವರ್ಷಾಚರಣೆ ಸಂಬಂಧ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.