SUDDIKSHANA KANNADA NEWS/ DAVANAGERE/ DATE:26-12-2023
ದಾವಣಗೆರೆ: ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿ ನಡೆಯುತ್ತಿರುವ ಮುಷ್ಕರ ಮುಂದುವರಿದಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವ ಅತಿಥಿ ಉಪನ್ಯಾಸಕರು 2024ರ ಜನವರಿ 1 ರಿಂದ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ.
ಅದು ರಾಜ್ಯದಲ್ಲಿರುವ 11000 ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲೇಬೇಕು. ನವೆಂಬರ್ 23ರಿಂದ ಅತಿಥಿ ಉಪನ್ಯಾಸಕರ ಮುಷ್ಕರ ಆರಂಭಗೊಂಡಿದ್ದು. ಉರುಳು ಸೇವೆ, ಟೀ, ಕಡ್ಲೆೇ ಗಿಡ, ತರಕಾರಿ, ಹೂವು ಮಾರಾಟ ಮಾಡಿ ಹಾಗೂ ಕಸಗೂಡಿಸುವುದರ ಮೂಲಕ ಹೀಗೆ ವಿವಿಧ ರೀತಿಯಲ್ಲಿ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಹೋರಾಟ ಮಾಡಲಾಗಿದೆ. ಸರಕಾರದಿಂದ ಇದುವರೆಗೂ ಯಾವುದೇ ಸಕಾರಾತ್ಮಕ ಉತ್ತರ ಇಲ್ಲದೆ ಕಾರಣ ಪಾದಯಾತ್ರೆ ನಡೆಸಲು ತೀರ್ಮಾನಿಸಿರುವುದಾಗಿ ಪ್ರತಿಭಟನಾಕಾರರು ತಿಳಿಸಿದರು.
ರಾಜ್ಯಾದ್ಯಂತ ಎಲ್ಲಾ ಅತಿಥಿ ಉಪನ್ಯಾಸಕರು ತುಮಕೂರು ಸಿದ್ದಗಂಗಾ ಮಠದಿಂದ ಬೆಂಗಳೂರು ಫ್ರೀಡಮ್ ಪಾರ್ಕ್ ವರೆಗೂ, ಸಿದ್ದಗಂಗಾ ಸ್ವಾಮಿಗಳ ಆಶೀರ್ವಾದ ಪಡೆದು ಪಾದ ಯಾತ್ರೆ ಮಾಡಲಿಕ್ಕೆ ಎಲ್ಲಾ ತಯಾರಿ ನಡೆದಿದೆ ಎಂದು ಹೇಳಿದರು.
ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರಕ್ಕೆ ಸ್ವಲ್ಪವೂ ಕಾಳಜಿ ಇಲ್ಲ, ಸೌಜನ್ಯ ಇಲ್ಲ. ಅತಿಥಿ ಉಪನ್ಯಾಸಕರ ಬದುಕು ಮೂರಾಬಟ್ಟೆಯಾಗಿದೆ. ನಮ್ಮನ್ನು ಅವಲಂಬಿಸಿರುವ ಕುಟುಂಬ ಸದಸ್ಯರ ಗತಿ ಏನು…? ಬೇರೆ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲಾಗಿದೆ. ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವುದಾಗಿ ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದು ಏಳು ತಿಂಗಳಾಗುತ್ತಾ ಬಂದಿದ್ದರೂ ಇತ್ತ ಗಮನ ಹರಿಸಿಲ್ಲ. ಕೂಡಲೇ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವ ಮೂಲಕ ಪುಣ್ಯ ಕಟ್ಟಿಕೊಳ್ಳಲಿ ಎಂದು ಅಳಲು ತೋಡಿಕೊಂಡರು.
ಅತಿಥಿ ಉಪನ್ಯಾಸಕರಿಗೆ ಕೇವಲ ಭರವಸೆ ನೀಡಲಾಗುತ್ತಿದೆಯೇ ವಿನಾಃ ಪರಿಹರಿಸುವ ಕೆಲಸ ಯಾವ ಸರ್ಕಾರಗಳು ಮಾಡುತ್ತಿಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸ್ವಲ್ಪ ಪ್ರಮಾಣದಲ್ಲಿ ವೇತನ ಏರಿಕೆ ಮಾಡಿದರೂ ಕೆಲಸ ಜಾಸ್ತಿ ಮಾಡಿತ್ತು. ಕಾಂಗ್ರೆಸ್ ಸರ್ಕಾರ ನಾವು ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘ- ದಾವಣಗೆರೆ ಜಿಲ್ಲಾ ಸಂಘಟನೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು 34ನೇ ದಿನದ ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ. ಈ ದಿನ ಜಿಲ್ಲಾ ಮಟ್ಟದ ವಿವಿಧ ಕಾಲೇಜಿನ ಅತಿಥಿ ಉಪನ್ಯಾಸಕರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಶ್ಯಾಮ್ ಪ್ರಸಾದ್, ಸಿದ್ದೇಶ್, ಕಳಕಪ್ಪ ಚೌರಿ, ಮೋಹನ್, ಜಗದೀಶ್, ಚೌಡೇಶ್, ಪ್ರವೀಣ್ ಕುಮಾರ್, ಸಂತೋಷ್ ಕುಮಾರ್, ಸಂದೀಪ್, ರವೀಂದ್ರ, ರಾಘವೇಂದ್ರ, ಶುಭ, ಸ್ಮಿತಾ, ಚಂದ್ರಿಕಾ, ಲಕ್ಷ್ಮೀ, ಡಾ.ಭಾರತಿ ಮೊದಲಾದವರು ಪಾಲ್ಗೊಂಡಿದ್ದರು.