SUDDIKSHANA KANNADA NEWS/ DAVANAGERE/ DATE:26-12-2023
ದಾವಣಗೆರೆ: ಪ್ರಚೋದನಕಾರಿ ಭಾಷಣ ಮಾಡಿರುವ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಬಂಧನಕ್ಕೆ ಒತ್ತಾಯಿಸಿ ದಾವಣಗೆರೆ ಮುಸ್ಲಿಂ ಒಕ್ಕೂಟದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.
ಇದೇ ವೇಳೆ ಒಕ್ಕೂಟದ ಸಂಚಾಲಕ ಟಿ.ಅಸ್ಗರ್ ಮಾತನಾಡಿ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಡಿಸೆಂಬರ್ 24ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಆರೆಸ್ಸೆಸ್ಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಭಾಷಣ ಮಾಡುತ್ತಾ ಮುಸ್ಲಿಂರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಜೊತೆಗೆ ಮುಸ್ಲಿಂ ಮಹಿಳೆಯರ ವೈವಾಹಿಕ ಜೀವನವನ್ನು ಬಹಿರಂಗವಾಗಿ ಅವಮಾನಿಸಿದ್ದಾರೆ. ಇಂತಹವರ ಮೇಲೆ ತಕ್ಷಣ ಸರ್ಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ತಂಜಿಮ್ ಕಮಿಟಿ ಕಾರ್ಯದರ್ಶಿ ಶಾನವಾಜ್ ಖಾನ್ ಮಾತನಾಡಿ, ಜಾತಿ – ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುತ್ತಾ ಕೋಮು ಸಂಘರ್ಷ ನಡೆಸಲು ಪ್ರಭಾಕರ್ ಭಟ್ ಪ್ರಚೋದನೆ ನೀಡುತ್ತಿದ್ದಾರೆ. ಶಾಂತಿಯ ರಾಜ್ಯದಲ್ಲಿ ಕೋಮುಗಲಭೆ ಹುಟ್ಟುಹಾಕಲು ಪ್ರಯತ್ನಿಸುವ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ತಕ್ಷಣ ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಮುಖಂಡರಾದ ಮಹಮ್ಮದ್ ಶೋಯೆಬ್, ರಜ್ವಿ ರಿಯಾಜ್ ಸಾಬ್, ಇಸ್ಮಾಯಿಲ್ ಜಬೀವುಲ್ಲಾ, ಸೈಯದ್ ಆರೀಫ್, ಆದಿಲ್ ಖಾನ್, ಮಹಮ್ಮದ್ ಹಯಾತ್, ಇನಯಾತ್ ಅಲಿ ಖಾನ್, ಕೆ.ಹೆಚ್.ಮೆಹಬೂಬ್,
ಬ್ಯಾಟರಿ ಜಬೀವುಲ್ಲಾ, ಕಲಿಂವುಲ್ಲಾ ಖಾನ್, ಮನ್ಸೂರ್, ನವೀದ್, ಅಜ್ಮತ್, ರಫೀಕ್, ಹೈದರ್, ಎನ್.ಉಸ್ಮಾನ್, ನೂರ್, ಅಯೂಬ್ ಬುತ್ತಿ ಮತ್ತಿತರರು ಹಾಜರಿದ್ದರು.