SUDDIKSHANA KANNADA NEWS/ DAVANAGERE/ DATE:25-12-2023
ದಾವಣಗೆರೆ: ದಾವಣಗೆರೆ ನಗರದ ಗಾಜಿನ ಮನೆ ಹಾಗೂ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ದೋಸೋತ್ಸವಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವ್ಯಾಪಾರಿಗಳು ಬಿಸಿ ಬಿಸಿ ದೋಸೆ ಮಾರಾಟ ಮಾಡಿ ಭರ್ಜರಿ ಲಾಭ ಗಳಿಸಿದರು. ಮಾತ್ರವಲ್ಲ, ಶನಿವಾರ ಮತ್ತು ಭಾನುವಾರವಂತೂ ಜನರು ಚಪ್ಪರಿಸಿಕೊಂಡು ಬೆಣ್ಣೆ ದೋಸೆ ಸವಿದರು.
ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ದೋಸೋತ್ಸವಕ್ಕೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವ್ಯಾಪಾರಿಗಳು ಹಾಕಿದ ಬಂಡವಾಳಕ್ಕಿಂತ ದುಪ್ಪಟ್ಟು ಲಾಭ ಮಾಡಿಕೊಂಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ದೋಸೆ ಸವಿದು ಖುಷಿಪಟ್ಟರು.
ಗಾಜಿನ ಮನೆಗೆ ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಇಲ್ಲಿ ದೋಸೋತ್ಸವ ಆಯೋಜಿಸಿದ್ದ ಕಾರಣ ಜನರು ಗಾಜಿನ ಮನೆ ಸೌಂದರ್ಯ ಸವಿಯುತ್ತಾ ಬೆಣ್ಣೆ ದೋಸೆ ರುಚಿ ಸವಿದು ಆನಂದಿಸಿದರು. ಗುರು ಕೊಟ್ಟೂರೇಶ್ವರ, ರವಿ ಬೆಣ್ಣೆ ದೋಸೆ ಸೇರಿದಂತೆ ದಾವಣಗೆರೆಯ ಖ್ಯಾತ ಬೆಣ್ಣೆದೋಸೆ ಹೊಟೇಲ್ ಗಳ ಮಾಲೀಕರು ಮಳಿಗೆಗಳನ್ನು ಹಾಕಿದ್ದರು. ಶನಿವಾರ ಮತ್ತು ಭಾನುವಾರ ವೀಕೆಂಡ್ ಆದ ಕಾರಣ ವ್ಯಾಪಾರ ಜೋರಾಗಿಯೇ ನಡೆಯಿತು. ಸೋಮವಾರ ಸ್ವಲ್ಪ ಕಡಿಮೆ ಆದರೂ ಲಾಭಕ್ಕೆೇನೂ ಕೊರತೆಯಾಗಲಿಲ್ಲ.
ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿಯೂ ಭರ್ಜರಿ ವ್ಯಾಪಾರವಾಯಿತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24 ನೇ ಮಹಾಧಿವೇಶನ ಇಲ್ಲೇ ನಡೆದಿತ್ತು. ಶನಿವಾರ ಮತ್ತು ಭಾನುವಾರ ಎರಡೂ ದಿನಗಳ ಸೇರಿ ಲಕ್ಷಾಂತರ ಜನರು ಆಗಮಿಸಿದ್ದರು. ಇಲ್ಲಿಗೆ ಬೇರೆ ಬೇರೆ ಜಿಲ್ಲೆಗಳಿಂದ ಊರುಗಳಿಂದ ಬಂದವರು ಬೆಣ್ಣೆ ದೋಸೆ ಸೇವಿಸಿ ಖುಷಿಪಟ್ಟರು. ಲಕ್ಷಾಂತರ ಜನರು ಬಂದ ಕಾರಣ ಎಲ್ಲಾ ಬೆಣ್ಣೆದೋಸೆ ಮಳಿಗೆಗಳು ಫುಲ್ ರಶ್ ಆಗಿದ್ದವು. ಗುರು ಕೊಟ್ಟೂರೇಶ್ವರ ಬೆಣ್ಣೆ ದೋಸೆ ಮಳಿಗೆ ಮುಂದೆ ಜನಸಾಗರವೇ ನೆರೆದಿತ್ತು.
ದಾವಣಗೆರೆಯಲ್ಲಿ ಗುರುಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೊಟೇಲ್ ಗೆ ಯಾವಾಗಲೂ ಜನರು ಬರುತ್ತಾರೆ. ತುಂಬಾ ಹಳೆಯದಾದ ಬೆಣ್ಣೆದೋಸೆ ಹೊಟೇಲ್ ಆಗಿದ್ದ ಕಾರಣ ಅಧಿವೇಶನಕ್ಕೆ ಬಂದವರು ಇಲ್ಲಿಗೆ ಬಂದು ಬೆಣ್ಣೆದೋಸೆ ಸವಿದರು. ಮಾತ್ರವಲ್ಲ, ಇಲ್ಲಿನ ಟೇಸ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದಾವಣಗೆರೆಯ ದೋಸೆ ಪ್ರಿಯರು ಸಹ ಇಲ್ಲಿಗೆ ಬಂದು ಬೆಣ್ಣೆದೋಸೆ ಸವಿದು ಖುಷಿಪಟ್ಟರು. ಬೆಣ್ಣೆದೋಸೆ, ಖಾಲಿ ದೋಸೆ, ಮಸಾಲೆ ದೋಸೆ ಜೊತೆಗೆ ಚಟ್ನಿ ಹಾಗೂ ಪಲ್ಯದ ರುಚಿಗೆ ಮಾರು ಹೋದರು.
60 ರೂಪಾಯಿಗೆ ಬೆಣ್ಣೆದೋಸೆ ಒಂದು ಮಾರಾಟ ಮಾಡಲಾಯಿತು. ಬಂದವರಲ್ಲಿ ಬಹುತೇಕರು ಎರಡು ಬೆಣ್ಣೆ ದೋಸೆ ಕೇಳುತ್ತಿದ್ದರು. ಮೊದಲೇ ಟಿಕೆಟ್ ಪಡೆದು ದೋಸೆ ಪಡೆಯಬೇಕಾಗಿತ್ತು. ಹಾಗಾಗಿ, ಜನಸಂದಣಿ ಇದ್ದರೂ ಟೋಕನ್ ಪಡೆಯಲು ಜನರು ಸರತಿ ಸಾಲಿನಲ್ಲಿ ಕಾಯುವಂತ ಸ್ಥಿತಿ ನಿರ್ಮಾಣವಾಗಿತ್ತು. ಜನರು ಸಹ ಬಿಸಿಲಿನ ಝಳದ ನಡುವೆಯೇ ಕಾದು ದೋಸೆ ಪಡೆದು ಸೇವಿಸಿದರು. ಮಹಾಧಿವೇಶನದಲ್ಲಿ ಊಟದ ವ್ಯವಸ್ಥೆ ಮಾಡಿದ್ದರೂ ಮಧ್ಯಾಹ್ನಕ್ಕಿಂತ ರಾತ್ರಿ ಹೊತ್ತು ದೋಸೆ ಮಳಿಗೆಗಳ ಮುಂದೆ ಜನಸಾಗರವೇ ಇತ್ತು.
ಮಹಾಧಿವೇಶನ ಮುಗಿದರೂ ಎಂಬಿಎ ಕಾಲೇಜು ಮೈದಾನಕ್ಕೆ ವಿದ್ಯಾರ್ಥಿಗಳು ಹೆಚ್ಚಾಗಿ ಆಗಮಿಸುತ್ತಿದ್ದರು. ಸಂಜೆ ಹೊತ್ತಿನಲ್ಲಿ ಕ್ರಿಕೆಟ್ ಅಭ್ಯಾಸ ಮಾಡಲು ಬರುವ ಕ್ರೀಡಾಪಟುಗಳು, ತರಬೇತುದಾರರು ಬೆಣ್ಣೆದೋಸೆ ರುಚಿ ಸವಿದರು.
ದಾವಣಗೆರೆಗೆ ಯಾರೇ ಬಂದರೂ ಬೆಣ್ಣೆದೋಸೆ ಸವಿಯುತ್ತಾರೆ. ಸೆಲೆಬ್ರಿಟಿಗಳು, ರಾಜಕಾರಣಿಗಳು, ಉದ್ಯಮಿಗಳು, ಶಿಕ್ಷಣ ತಜ್ಞರು, ಚಿತ್ರನಟರು, ನಟಿಯರು ಸೇರಿದಂತೆ ಇಲ್ಲಿನ ಬೆಣ್ಣೆದೋಸೆ ಟೇಸ್ಟ್ ಗೆ ಫಿದಾ ಆಗಿಯೇ ಆಗುತ್ತಾರೆ. ಕೆಲವರಂತೂ ದಾವಣಗೆರೆ ಮೂಲಕ ಬೇರೆ ಜಿಲ್ಲೆಗಳಿಗೆ ಹೋಗುವುದಿದ್ದರೆ ಇಲ್ಲಿಗೆ ಬಂದು ಎರಡು ಬೆಣ್ಣೆದೋಸೆ ಸವಿದು ಮುಂದಕ್ಕೆ ಹೋಗುತ್ತಾರೆ. ಈಗಲೂ ಈ ಪರಿಪಾಠ ಇದೆ. ಇದನ್ನು ಹಲವಾರು ನಟ, ನಟಿಯರು ಹೇಳಿಕೊಂಡಿದ್ದಾರೆ ಸಹ. ಅಷ್ಟು ಫೇಮಸ್ ಆಗಿದೆ ದಾವಣಗೆರೆ ಬೆಣ್ಣೆದೋಸೆ.
ಜಿಲ್ಲಾಡಳಿತವು ಈ ದೋಸೋತ್ಸವ ಆಯೋಜಿಸಲು ಕಾರಣ ಬೆಣ್ಣೆದೋಸೆಗೆ ರಾಷ್ಟ್ರಮಟ್ಟದಲ್ಲಿ ಜನಪ್ರಿಯಗೊಳಿಸಬೇಕು. ದೋಸೆಯ ಸಾಂಪ್ರಾದಾಯಿಕತೆ ಉಳಿಸಿ, ಗುಣಮಟ್ಟ ಕಾಪಾಡಿಕೊಂಡು ಬ್ರಾಡಿಂಗ್ ಕಲ್ಪಿಸಬೇಕು ಎಂಬುದು. ಈ ಉದ್ದೇಶ ಸಾರ್ಥಕಪಡಿಸುವ ರೀತಿಯಂತೆ ಜನರು ಸ್ಪಂದಿಸಿದರು. ಸ್ಟಾಲ್ ಹಾಕಿದವರಿಗೆ ನಷ್ಟ ಆಗಲಿಲ್ಲ. ಭರ್ಜರಿ ಲಾಭವನ್ನೇ ಮಾಡಿಕೊಂಡರು. ಖ್ಯಾತ ದೋಸೆ ಹೊಟೇಲ್ ಗಳ ಮಾಲೀಕರು ಸ್ಟಾಲ್ ಗಳನ್ನು ಹಾಕಿದ ಕಾರಣಕ್ಕೆ ಜನರಿಗೂ ಬಿಸಿ ಬಿಸಿ, ಗರಿ ಗರಿ, ಟೇಸ್ಟಿ ಟೇಸ್ಟಿ ದೋಸೆ ಸಿಕ್ಕಿತು. 60 ರೂಪಾಯಿಗೆ ಲೆಕ್ಕ ಹಾಕದೇ ದೋಸೆ ಸೇವಿಸಿ ಬಾಯಿ ಚಪ್ಪರಿಸಿದರು.
ಫ್ರೀ ಅಂತಾ ಹೋದವರಿಗೆ ಕಾದಿತ್ತು ಶಾಕ್..!
ಇನ್ನು ಜಿಲ್ಲಾಡಳಿತದ ವತಿಯಿಂದ ಗಾಜಿನ ಮನೆ ಮತ್ತು ಬಾಪೂಜಿ ಎಂಬಿಎ ಕಾಲೇಜಿನಲ್ಲಿ ದೋಸೋತ್ಸವ ನಡೆಯುತ್ತಿದೆ ಎಂದುಕೊಂಡ ಮಹಿಳೆಯರು, ಯುವತಿಯರು ಆಟೋ ಮಾಡಿಕೊಂಡು ದೋಸೆ ಸವಿಯಲು ಹೊರಟಿದ್ದರು. ಆನಂತರ ಒಂದು ದೋಸೆಗೆ 60 ರೂಪಾಯಿ ನಿಗದಿಪಡಿಸಿದ್ದಾರೆಂಬ ವಿಷಯ ತಿಳಿಯುತ್ತಿದ್ದಂತೆ ಅಲ್ಲಿಗೆ ಹೋಗಲಿಲ್ಲ. ಕೆಲವರಂತೂ ಹೋಗಿ ದೋಸೆ ತಿಂದು 60 ರೂಪಾಯಿ ಕೊಟ್ಟು ಬಂದ ಘಟನೆಯೂ ನಡೆಯಿತು.
ಕರ್ನಾಟಕದಲ್ಲಿನ ಜನರಿಗೆ ದಾವಣಗೆರೆ ಬೆಣ್ಣೆದೋಸೆ ಚಿರಪರಿಚಿತ. ಇದು ರಾಷ್ಟ್ರಮಟ್ಟದಲ್ಲಿ ಖ್ಯಾತಿಯಾಗಬೇಕು ಎಂಬ ಉದ್ದೇಶ ಜಿಲ್ಲಾಡಳಿತದ್ದು. ಕಳೆದ ನಾಲ್ಕು ದಶಕಗಳಿಂದಲೂ ದೋಸೆ ತನ್ನ ಟೇಸ್ಟ್ ಉಳಿಸಿಕೊಳ್ಳುವ ಜೊತೆಗೆ ಜನರ ಬಾಯಿ ರುಚಿ ಮೆಚ್ಚಿಸುತ್ತಿದೆ. ಇದೇ ಗುಣಮಟ್ಟ ಉಳಿಸಿಕೊಂಡಿದೆ. ಬೆಣ್ಣೆ ದೋಸೆ ಮಾರಾಟ ಮಾಡುತ್ತಿರುವ ಅಂಗಡಿ ಮಾಲೀಕರ ಮೂಲಕ ಜನರಿಗೆ ಗುಣಮಟ್ಟದ ಬೆಣ್ಣೆದೋಸೆಯನ್ನು ತಲುಪಿಸುವಲ್ಲಿ ಜಿಲ್ಲಾಡಳಿತ ಸಫಲವಾಗಿದೆ ಎಂಬ ಸಂತೋಷ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಅವರದ್ದು.
ಒಟ್ಟಿನಲ್ಲಿ ಜನರಿಗೂ ವೆರಿ ಟೇಸ್ಟಿ ಟೇಸ್ಟಿ ಆದ ಬೆಣ್ಣೆದೋಸೆ, ಖಾಲಿ ದೋಸೆ, ಮಸಾಲೆ ದೋಸೆ ಸಿಕ್ಕಿತು. ವ್ಯಾಪಾರಿಗಳಿಗೂ ಭರ್ಜರಿಗೂ ಲಾಭ ಸಿಕ್ಕಿತು. ಜಿಲ್ಲಾಡಳಿತಕ್ಕೂ ಜನರ ಸ್ಪಂದನೆ ಮೆಚ್ಚುಗೆಗೆ ಕಾರಣವಾಯ್ತು.