SUDDIKSHANA KANNADA NEWS/ DAVANAGERE/ DATE:18-12-2023
ದಾವಣಗೆರೆ: ಜಾತಿಗಣತಿ ವರದಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿರುವುದು ನಾವು ಮಾತ್ರ ಅಲ್ಲ, ಒಕ್ಕಲಿಗ ಸಮುದಾಯ ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜಾತಿಗಣತಿ ವಿರೋಧ ಮಾಡಿದರೆ ಕಾಂಗ್ರೆಸ್ ಗೆ ನಷ್ಟ ಆಗಲ್ಲ. ನಾನು ಕಾಂಗ್ರೆಸ್ಸಿಗ. ಪಕ್ಷಕ್ಕೆ ಪ್ರೋತ್ಸಾಹ ಮಾಡಲು ಇರುವುದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಹಾಗೂ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಹೇಳಿದರು. ಈ ಮೂಲಕ ಜಾತಿಗಣತಿ ವರದಿ ಅಂಗೀಕಾರಕ್ಕೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ ನೀಡಿದ್ದಾರೆ.
ನಗರದ ಎಂಸಿಸಿ ಬಿ ಬ್ಲಾಕ್ ನ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಾತಿಗಣತಿ ವರದಿ ಅಂಗೀಕರಿಸಿ ಬಿಡುಗಡೆ ಸಂಬಂಧ ಈಗಾಗಲೇ ಮಹಾಸಭಾವು ಸ್ಪಷ್ಟ ನಿರ್ಧಾರ ಹೇಳಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿರುವ ಕಾಂತರಾಜ್ ವರದಿ ಆಯೋಗದ ಜಾತಿಗಣತಿ ವಿಚಾರ ಅಂಗೀಕರಿಸಬಾರದು ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವು ಮನವಿ ಸಲ್ಲಿಸಿದೆ. ಇದಕ್ಕೆ ಸಿದ್ದರಾಮಯ್ಯರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಜಾತಿ ಗಣತಿ ವರದಿ ನಾನು ನೋಡಿಲ್ಲವೆಂದು ಸಿದ್ದರಾಮಯ್ಯರು ಹೇಳಿದ್ದಾರೆ. ಹಾಗಾಗಿ, ನಾವು ಕಾದು ನೋಡುತ್ತೇವೆ ಎಂದು ಹೇಳಿದರು.
ಮೊದಲು ವರದಿ ಬಿಡುಗಡೆ ಆಗಲಿ. ಜಾತಿಗಣತಿ ವರದಿ ಬಿಡುಗಡೆ ಮಾಡದೇ ವಿರೋಧ ಮಾಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯರು ಹೇಳಿದ್ದಾರಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಸಿದ್ದರಾಮಯ್ಯರೂ ಸಹ ನಾನು ಸಹ ವರದಿ ನೋಡಿಲ್ಲ, ಲೋಪದೋಷವಾಗಿದ್ದರೆ ಸರಿಪಡಿಸುವ ಭರವಸೆ ನೀಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಊಹಾಪೋಹಕ್ಕೆ ಅವಕಾಶ ನೀಡುವುದು ಬೇಡ. ಎಲ್ಲರೂ ಒಟ್ಟಾಗಿ ಹೋಗೋಣ ಎಂದು ಹೇಳಿದರು.
ದಾವಣಗೆರೆಯಲ್ಲಿ ಡಿ. 23 ಮತ್ತು 24ರಂದು ನಡೆಯಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು. ಈಗಾಗಲೇ ಎಲ್ಲವನ್ನೂ ಹೇಳಲಾಗದು. ಸಮಾವೇಶದಲ್ಲಿ
ತೆಗೆದುಕೊಳ್ಳುವ ನಿರ್ಣಯ ಕುರಿತಂತೆ ಮಹಾಸಭಾದ ಪದಾಧಿಕಾರಿಗಳು, ಸಮಾಜದ ಶ್ರೀಗಳು ಸೇರಿದಂತೆ ಎಲ್ಲರೊಟ್ಟಿಗೆ ಚರ್ಚಿಸಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಶಾಮನೂರು ಶಿವಶಂಕರಪ್ಪ ಅವರು ಹೇಳಿದರು.