SUDDIKSHANA KANNADA NEWS/ DAVANAGERE/ DATE:15-12-2023
ದಾವಣಗೆರೆ: ದಾವಣಗೆರೆ ಲೋಕಸಭಾ ವ್ಯಾಪ್ತಿಯಲ್ಲಿ ಡಿಸೆಂಬರ್ 18ರಿಂದ 2024ರ ಜನವರಿ 12ರವರೆಗೆ ಬೃಹತ್ ಪಾದಯಾತ್ರೆ ಮತ್ತು ಗ್ರಾಮ ವಾಸ್ತವ್ಯವನ್ನು ವಿನಯ ಮಾರ್ಗ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿನಯ ಕುಮಾರ್ ತಿಳಿಸಿದರು.
ನಗರದ ಹೊರವಲಯದ ದೇವನಗರಿ ರೆಸಾರ್ಟ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 25 ದಿನಗಳ ಕಾಲ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಹಳ್ಳಿಗಳಲ್ಲಿ ವಿನಯ ನಡಿಗೆ ಹಳ್ಳಿ ಕಡೆಗೆ’ ಎಂಬ ವಿನೂತನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಡಿಸೆಂಬರ್ 18 ರಂದು ಸೋಮವಾರ ಬೆಳಿಗ್ಗೆ 9 ಗಂಟೆಗೆ ಜಗಳೂರು ವಿಧಾನಸಭಾ ಕ್ಷೇತ್ರದ ಗಡಿ ಭಾಗದ ಚಿಕ್ಕಉಜ್ಜನಿ ಗ್ರಾಮದಿಂದ ಪಾದಯಾತ್ರೆ ಪ್ರಾರಂಭವಾಗಲಿದೆ. ಪಾದಯಾತ್ರೆಯಲ್ಲಿ ಜನಪ್ರತಿನಿಧಿಗಳು, ಮುಖಂಡರು, ಮಹಿಳೆಯರು ಯುವಕರು ಅಭಿಮಾನಿಗಳು ಪಾಲ್ಗೊಳ್ಳಲ್ಲಿದ್ದಾರೆ. ಪಾದಯಾತ್ರೆ ಪ್ರಾರಂಭದ ದಿನದಿಂದ ಮುಕ್ತಾಯದವರೆಗೂ ಪ್ರತಿನಿತ್ಯ ರಾತ್ರಿ ವಾಸ್ತವ್ಯ ಮಾಡುವ ಹಳ್ಳಿಗಳಲ್ಲಿ ಮುಖಂಡರೊಂದಿಗೆ ಗ್ರಾಮಗಳ ಮೂಲಭೂತ ಸಮಸ್ಯೆಗಳು, ಕ್ಷೇತ್ರ ಅಭಿವೃದ್ಧಿ ಕುರಿತು ಗ್ರಾಮಸ್ಥರ ಜೊತೆ ಸಮಾಲೋಚನೆ ನಡೆಸಲಾಗುವುದು. ಈಗಾಗಲೇ ಕ್ಷೇತ್ರದ ವ್ಯಾಪ್ತಿಗಳ ಹಳ್ಳಿಗಳಲ್ಲಿ ಭೇಟಿ ಮಾಡಿದ್ದು, ಜನರ ಸಮಸ್ಯೆಗಳ ಬಗ್ಗೆ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
ವಿನಯಮಾರ್ಗ ಟ್ರಸ್ಟ್ ವತಿಯಿಂದ ಈಗಾಗಲೇ ಅನೇಕ ಜನೋಪಯೋಗಿ, ಸಮಾಜಮುಖಿ, ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಎರಡು ಸಾವಿರ ವಿಕಲಚೇತನರಿಗೆ ವೀಲ್ ಚೇರ್, ವಾಕಿಂಗ್ ಸ್ಟಿಕ್, ವಾಕರ್, ಶ್ರವಣಯಂತ್ರಗಳನ್ನು ಟ್ರಸ್ಟ್ನಿಂದ ವಿತರಣೆ ಮಾಡಲಾಗಿದೆ. ಅಂತೆಯೇ ಆಟೋ, ಗೂಡ್ಸ್, ಲಾರಿ ಚಾಲಕರಿಗೆ ಸಮವಸ್ತ್ರ, ಅವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಜೊತೆಗೆ ಆರ್ಥಿಕ ಸಹಾಯ ಮಾಡಲಾಗಿದೆ. ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಯು.ಪಿ.ಎಸ್ಸಿ.ಕೆ.ಪಿ.ಎಸ್ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿ ಕಾರ್ಯಾಗಾರಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ಮನಸ್ಟೈರ್ಯ ತುಂಬಿ ಪದವಿ ನಂತರ ಮುಂದೇನು ಎಂಬುವ ವಿಚಾರಗಳಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ಈಗಾಗಲೇ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಲಾಗುತ್ತಿದೆ. ಎಲ್ಲಾ ಕಡೆ ಜನ ಸಾಮಾನ್ಯರು ಪ್ರೀತಿ ಅಭಿಮಾನಗಳನ್ನು ತೋರುತ್ತಿದ್ದಾರೆ. ಕ್ಷೇತ್ರದ ಜನರೂ ಕೂಡ ಬದಲಾವಣೆಯ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ನನಗೂ ಕೂಡ ಚುನಾವಣೆಯಲ್ಲಿ ಜನರೂ ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ಹಾಗೂ ವಿಶ್ವಾಸವಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಜಿ. ಬಿ. ಹಾಲೇಕಲ್ಲು ಎಸ್. ಟಿ. ಅರವಿಂದ್, ಸುರೇಶ್, ಬಿ. ನಿಂಗರಾಜ್, ಎಸ್. ಶರತ್ ಕುಮಾರ್ ಮತ್ತಿತರರು ಹಾಜರಿದ್ದರು.