SUDDIKSHANA KANNADA NEWS/ DAVANAGERE/ DATE:15-12-2023
ದಾವಣಗೆರೆ: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಪುಣ್ಯಭೂಮಿ ಬೆಂಗಳೂರಿನಲ್ಲಿ ಆಗಬೇಕೆಂದು ಒತ್ತಾಯಿಸಿ ಹಮ್ಮಿಕೊಂಡಿರುವ ಹೋರಾಟಕ್ಕೆ ದಾವಣಗೆರೆಯ ಡಾ.ರಾಜ್ , ಡಾ.ವಿಷ್ಣುವರ್ಧನ್, ಅಂಬರೀಷ್, ಶಿವಣ್ಣ, ಪುನೀತ್ ರಾಜಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘಗಳು ಬೆಂಬಲ ನೀಡಿವೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಡಾ. ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಕೊಂಡಜ್ಜಿ ರಾಜಶೇಖರ್ ಅವರು, ಕಳೆದ 4 ದಶಕಗಳಿಂದ ವಂಶವೃಕ್ಷ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶವಾಗಿ ನಾಗರಹಾವು ಚಿತ್ರದಿಂದ ಪೂರ್ಣ ಪ್ರಮಾಣದ ನಾಯಕನಟನಾಗಿ ಅಭಿನಯಿಸಿ ನಮ್ಮ ಕರ್ನಾಟಕ ಅಲ್ಲದೇ ಬೇರೆ ಬೇರೆ ರಾಜ್ಯ , ದೇಶಗಳಲ್ಲಿ ಅಭಿಮಾನಿಗಳ ಬಳಗವನ್ನು ಹೊಂದಿರುವ ನಟ ವಿಷ್ಣುವರ್ಧನ್. ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಬೆಂಗಳೂರಿನಲ್ಲಿಯೇ ನಿಧನರಾದ ಹಿನ್ನಲೆಯಲ್ಲಿ ಅವರ ಪುಣ್ಯಭೂಮಿ ನಮ್ಮ ನಾಡಿನ ಬೆಂಗಳೂರಿನಲ್ಲಿಯೇ ಆಗಬೇಕೆಂದು ಹಲವಾರು ಅವರ ಅಭಿಮಾನಿಗಳ ಬಳಗದವರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ನಮ್ಮ ಸಹಕಾರವೂ ಇರಲಿದೆ ಎಂದರು.
ಈ ಪ್ರತಿಭಟನೆಗೆ ದಾವಣಗೆರೆಯ ಅಖಿಲ ಕರ್ನಾಟಕ ಡಾ. ವಿಷ್ಣುವರ್ಧನ್ ಸಂಘ, ಡಾ.ವಿಷ್ಣು ಸೇನೆ, ಡಾ. ರಾಜಕುಮಾರ್ ಅಭಿಮಾನಿಗಳ ಸಂಘ, ಡಾ. ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘ, ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅಭಿಮಾನಿಗಳ ಸಂಘ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ, ರೆಬಲ್ ಸ್ಟಾರ್ ಅಂಬರೀಷ್ ಅಭಿಮಾನಿಗಳ ಸಂಘ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಅಭಿಮಾನಿಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಸಾಹಸಸಿಂಹ ವಿಷ್ಣುವರ್ಧನ್ ಅವರು ಬರೀ ಕನ್ನಡ ಚಿತ್ರರಂಗವಷ್ಟೇ ಅಲ್ಲ ತೆಲುಗು , ಹಿಂದಿ , ತಮಿಳು , ಮಲಯಾಳಂ ಸೇರಿದಂತೆ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಕನ್ನಡ ನಾಡು, ನುಡಿ, ಭಾಷೆಗಾಗಿ ಎಲ್ಲ ಹಿರಿಯ ನಟರೊಂದಿಗೆ ಗೋಕಾಕ್ ವರದಿ ಜಾರಿಗೆ ಬರಲಿ ಎಂದು ಕನ್ನಡ ಚಳುವಳಿಗಳಲ್ಲಿ ಭಾಗವಹಿಸಿ ರಾಜ್ಯಾದ್ಯಂತ ಬೃಹತ್ ರಾಲಿ ಮೂಲಕ ಹೋರಾಟ ಮಾಡುತ್ತಾ ಬಂದಿದ್ದರು. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿ ಇದ್ದು, ಕೆಲವರು ಸ್ಥಳಾಂತರ ಮಾಡಬೇಕೆಂದು ಹೋರಾಟ ನಡೆಸಿದರು. ಭಾರತಿ ವಿಷ್ಣುವರ್ಧನ್ ಕೂಡಾ ಈ ಹೋರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಲಕ್ಷಾಂತರ ವಿಷ್ಣು ಅಭಿಮಾನಿಗಳಿಗೆ ಮನಸ್ಸಿಗೆ ತುಂಬಾ ನೋವಾಗಿದೆ. ಈ ಹಿನ್ನೆಲೆಯಲ್ಲಿ ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿ ನಮ್ಮ ಕನ್ನಡ ನಾಡಿನ ಬೆಂಗಳೂರಿನಲ್ಲಿಯೇ ಆಗಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಈ ವಿಷಯವಾಗಿ ಗಮನಹರಿಸಿ ಮುಂದೆ ಆಗಬಹುದಾದ ಕೆಲಸಗಳಿಗೆ ಸಹಾಯ ನೀಡಬೇಕು. ಸರ್ಕಾರವು ಜಾಗ ನೀಡಿ ಅವರ ಪುಣ್ಯಭೂಮಿ ಬೆಂಗಳೂರಿನಲ್ಲಿಯೇ ಆಗುವಂತೆ ಕ್ರಮ ವಹಿಸಬೇಕು ಎಂಬುದು ಅಭಿಮಾನಿಗಳ ಆಸೆಯಾಗಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಎಲ್ಲಾ ಹಿರಿಯ ಕಲಾವಿದರ ಅಭಿಮಾನಿಗಳ ಸಂಘಗಳು ನಮ್ಮ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಡಿ . 17 ರ ಭಾನುವಾರ ಬೆಳಿಗ್ಗೆ ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ವರೆಗೆ ನಡೆಯುವ ” ಪುಣ್ಯ ಭೂಮಿಗಾಗಿ ಹೋರಾಟ ” ಬೃಹತ್ ಪ್ರತಿಭಟನೆಯಲ್ಲಿ ಲಕ್ಷಾಂತರ ಅಭಿಮಾನಿಗಳು ಸೇರಲಿದ್ದಾರೆ. ಹಾಗಾಗಿ, ದಾವಣಗೆರೆಯಿಂದಲೂ ಸಹ ನಾವು ತೆರಳುತ್ತಿದ್ದೇವೆ. ಈ ಹೋರಾಟಕ್ಕೆ ಎಲ್ಲಾ ಅಭಿಮಾನಿಗಳ ಸಂಘದವರು ಪ್ರೋತ್ಸಾಹ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಜಿ. ಎಚ್. ತಿಮ್ಮೇಶ್, ಎಂ. ಮನು, ಯೋಗೀಶ್, ಮಂಜುನಾಥ, ಚಂದ್ರು ಇತರರು ಹಾಜರಿದ್ದರು.