SUDDIKSHANA KANNADA NEWS/ DAVANAGERE/ DATE:14-12-2023
ಬೆಳಗಾವಿ: ಭದ್ರಾ ಮೇಲ್ದಂಡೆ ಯೋಜನೆಗೆ 2023-24ನೇ ಸಾಲಿನಲ್ಲಿ 2.723 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿಗಳೂ ಆದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ವಿಧಾನ ಪರಿಷತ್ನಲ್ಲಿ ತಿಳಿಸಿದರು.
ಸದಸ್ಯರಾದ ಚಿದಾನಂದ ಎಂ. ಗೌಡ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಭದ್ರಾ ಮೇಲ್ಡಂಡೆ ಯೋಜನೆಯ 21,474.67 ಕೋಟಿಗಳ ಪುನರ್ ಪರಿಷ್ಕೃತ ಯೋಜನಾ ವರದಿಗೆ 2020ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ ಎಂದು ಇದೆ ವೇಳೆ ಅವರು ತಿಳಿಸಿದರು.
ಪ್ರಸ್ತಾಪ ಬಂದಲ್ಲಿ ಅನುದಾನ: ಹೆಚ್.ಕೆ.ಪಾಟೀಲ
ರಾಯಚೂರು ಜಿಲ್ಲೆಯ ಜಲದುರ್ಗ ಐತಿಹಾಸಿಕ ಕೋಟೆಗೆ ಯಾವುದೇ ಅನುದಾನ ನಿಗದಿಪಡಿಸಿರುವುದಿಲ್ಲ. ಜಲದುರ್ಗ ಐತಿಹಾಸಿಕ ಕೋಟೆಯ ಸಂರಕ್ಷಣೆ ಜೀರ್ಣೋದ್ಧಾರಕ್ಕೆ ಪ್ರಸ್ತಾವನೆ ಸ್ವೀಕೃತಗೊಂಡಲ್ಲಿ ವಿಸ್ತೃತ ಯೋಜನಾ ವರದಿಯೊಂದಿಗೆ ಅನುದಾನದ ಲಭ್ಯತೆಗೆ ಅನುಗುಣವಾಗಿ ನಿಯಮಾನುಸಾರ ಪರಿಶೀಲಿಸಲಾಗುವುದು ಎಂದು ಕಾನೂನು ನ್ಯಾಯ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ ಅವರು ವಿಧಾನ ಪರಿಷತ್ನಲ್ಲಿ ಹೇಳಿದರು.
ಸದಸ್ಯರಾದ ಶರಣಗೌಡ ಬಯ್ಯಾಪುರ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, 2013-14ನೇ ಸಾಲಿನ 13ನೇ ಹಣಕಾಸಿನ ಯೋಜನೆಯಡಿ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಐತಿಹಾಸಿಕ ಮುದಗಲ್ ಕೋಟೆಯ ಸಂರಕ್ಷಣಾ ಕಾಮಗಾರಿಯನ್ನು 50 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಕೋಟೆಯ ಗೋಡೆಯ ಸಂರಕ್ಷಣಾ ಕಾಮಗಾರಿ ಹಾಗೂ ಕಾಂಕ್ರಿಟ್ ಚೈನ್ಲಿಂಕ್ ಫೇನ್ಸಿಂಗ್ ಕಾಮಗಾರಿಗಳ ಕೆಲಸ ಪೂರ್ಣಗೊಂಡಿದೆ. ಅದರಂತೆ ಜಲದುರ್ಗ ಐತಿಹಾಸಿಕ ಕೋಟೆಯ ಸಂರಕ್ಷಣೆ ಜೀರ್ಣೋದ್ಧಾರಕ್ಕೆ ಪ್ರಸ್ತಾವನೆ ಸ್ವೀಕೃತಗೊಂಡಲ್ಲಿ ನಿಯಮಾನುಸಾರ ಪರಿಶೀಲಿಸಲಾಗುವುದು ಎಂದು ಸಚಿವರು ಉತ್ತರಿಸಿದ್ದಾರೆ.
ವಿಧೇಯಕಗಳಿಗೆ ಅನುಮೋದನೆ
ವಿಧಾನಸಭೆಯಲ್ಲಿಂದು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸಕ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ ಅವರು ಮಂಡಿಸಿದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಎರಡನೇ ತಿದ್ದುಪಡಿ) ವಿಧೇಯಕ 2023 ನ್ನು ಮತ್ತು ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ 2023ನ್ನು ಅನುಮೋದಿಸಲಾಯಿತು.
ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಮಂಡಿಸಿದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ 2023ನ್ನು ಅಂಗೀಕರಿಸಲಾಯಿತು. ಈ ವಿಧೇಯಕಗಳು ವಿಧಾನಪರಿಷತ್ನಲ್ಲಿ ಚರ್ಚೆಗೆ ಬರಲಿವೆ.