SUDDIKSHANA KANNADA\ DAVANAGERE\ DATE:13-12-2023
ಡಿ.23ರಿಂದ ಮೂರು ದಿನಗಳ ಕಾಲ ದಾವಣಗೆರೆ ಬೆಣ್ಣೆದೋಸೆ ಹಬ್ಬ: ಎಂಬಿಎ, ಗ್ಲಾಸ್ಹೌಸ್ನಲ್ಲಿ ದೋಸೋತ್ಸವ
ದಾವಣಗೆರೆ: ದಾವಣಗೆರೆ ಬೆಣ್ಣೆದೋಸೆ ಇತಿಹಾಸ ಪ್ರಸಿದ್ದವಾಗಿದ್ದು ಇದಕ್ಕೊಂದು ಬ್ರಾಂಡಿಂಗ್ ನೀಡಲು ಜಿಲ್ಲಾಡಳಿತ ಡಿಸೆಂಬರ್ 23, 24, 25 ರಂದು ದಾವಣಗೆರೆಯಲ್ಲಿ ಬೆಣ್ಣೆದೋಸೆ ಹಬ್ಬವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದೋಸೆ ಉತ್ಸವ ಆಯೋಜನೆಗೆ ಸಂಬಂಧಿಸಿದಂತೆ ಸಿದ್ದತೆಯ ಕುರಿತು ಏರ್ಪಡಿಸಲಾದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಹೋಟೆಲ್ ಮಾಲೀಕರೊಂದಿಗೆ ಚರ್ಚಿಸಲಾಗಿದ್ದು ದಿನಾಂಕ ಮತ್ತು ಸ್ಥಳವನ್ನು ಅಂತಿಮಗೊಳಿಸಲಾಗಿದೆ. ದಾವಣಗೆರೆ ನಗರದ ಎಂ.ಬಿ.ಎ. ಮೈದಾನ ಮತ್ತು ಗ್ಲಾಸ್ಹೌಸ್ ಮುಂಭಾಗ ದೋಸೆ ಹಬ್ಬವನ್ನು ಆಯೋಜಿಸಲಾಗಿದ್ದು ಮೂರು ದಿನಗಳ ಕಾಲ ಬೆಳಗ್ಗೆ 8 ಗಂಟೆಯಿಂದ ರಾತ್ರಿವರೆಗೆ ದೋಸೆ ಸವಿಯಬಹುದಾಗಿದೆ ಎಂದರು.
ಬೆಣ್ಣೆದೋಸೆ ಹಬ್ಬದಲ್ಲಿ ಸುಮಾರು 5 ಲಕ್ಷ ಜನರು ಭಾಗಿಯಾಗಬೇಕೆಂಬ ಗುರಿ ಹೊಂದಲಾಗಿದೆ. ಇದಕ್ಕಾಗಿ ಎರಡು ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ದೋಸೆ ಹೋಟೆಲ್ ಮಾಲಿಕರೊಂದಿಗೆ ಸಭೆ ನಡೆಸಲಾಗಿದ್ದು 10 ಕ್ಕಿಂತ ಹೆಚ್ಚು ಹೋಟೆಲ್ ಮಾಲಿಕರು ಭಾಗವಹಿಸುವರು. ದೋಸೆ ಹಬ್ಬವನ್ನು ಏರ್ಪಡಿಸುವ ಮೂಲಕ ದಾವಣಗೆರೆ ದೋಸೆಯ ಸಾಂಪ್ರದಾಯಿಕತೆ ಉಳಿಸುವ ಮೂಲಕ ಗುಣಮಟ್ಟವನ್ನು ಕಾಪಾಡಿಕೊಂಡು ದಾವಣಗೆರೆ ಬೆಣ್ಣೆದೋಸೆಗೆ ಬ್ರಾಂಡಿಂಗ್ ಕಲ್ಪಿಸುವುದು ಈ ಹಬ್ಬದ ಉದ್ದೇಶವಾಗಿದೆ ಎಂದರು.
ದೋಸೆ ಹೋಟೆಲ್ಗಳಿಗೆ ಮಾನದಂಡದನ್ವಯ ಮುಂದಿನ ದಿನಗಳಲ್ಲಿ ಅಧಿಕೃತ ಟ್ಯಾಗ್ ನೀಡಲಿದ್ದು ಇದಕ್ಕಾಗಿ ಆಹಾರ ಸುರಕ್ಷತಾ ಕಾಯಿದೆ ನಿಯಮ ಪಾಲನೆ, ಗುಣಮಟ್ಟ, ಕಲಬೆರಕೆ ರಹಿತ ಆಹಾರದ ಮಾನದಂಡಗಳನ್ನು ಅಳವಡಿಸಿಕೊಳ್ಳುವವರಿಗೆ ಈ ಟ್ಯಾಗ್ ನೀಡಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್ .ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಶ್ರೀ, ಪಾಲಿಕೆ ಆಯುಕ್ತರಾದ ರೇಣುಕಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.