SUDDIKSHANA KANNADA NEWS/ DAVANAGERE/ DATE:13-12-2023
ದಾವಣಗೆರೆ: sಜಿಲ್ಲೆಯಲ್ಲಿ ಆರ್ಟಿಸಿ ತಿದ್ದುಪಡಿ ಮಾಡಲು ಆಂದೋಲನವನ್ನು ಕೈಗೊಂಡು 5637 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು ಕಂದಾಯ ಇಲಾಖೆ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಿ ಕಳೆದ ಆರು ತಿಂಗಳಲ್ಲಿ ಜನಸ್ನೇಹಿ ಆಡಳಿತ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ತಿಳಿಸಿದ್ದಾರೆ.
ಪಹಣಿ ತಿದ್ದುಪಡಿಯಡಿ 2023 ರ ಮೇ ಅಂತ್ಯಕ್ಕೆ 5,039 ಅರ್ಜಿಗಳು ಬಾಕಿ ಇದ್ದು ಜೂನ್ 23 ರಿಂದ ನವೆಂಬರ್ 23 ರವರೆಗೆ ಆರು ತಿಂಗಳಲ್ಲಿ ಹೊಸದಾಗಿ ಸ್ವೀಕೃತವಾದ 4438 ಅರ್ಜಿಗಳು ಸೇರಿದಂತೆ 9477 ಪಹಣಿ ತಿದ್ದುಪಡಿ ಅರ್ಜಿಗಳಲ್ಲಿ ಇದೇ ಅವಧಿಯಲ್ಲಿ 5637 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು 2023 ರ ನವಂಬರ್ 27 ರ ಅಂತ್ಯಕ್ಕೆ 3,840 ಅರ್ಜಿಗಳು ತಿದ್ದುಪಡಿ ಅರ್ಜಿಗಳು ಬಾಕಿ ಇದ್ದು ಈ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಕಂದಾಯ ನ್ಯಾಯಾಲಯ ಪ್ರಕರಣಗಳ ವಿಲೇವಾರಿ:
ದಾವಣಗೆರೆ ಮತ್ತು ಹೊನ್ನಾಳಿ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಮತ್ತು ಜಿಲ್ಲೆಯ 6 ತಾಲ್ಲೂಕಗಳ ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಕಳೆದ 6 ತಿಂಗಳ ಅವಧಿಯಲ್ಲಿ ಸುಮಾರು 2 ರಿಂದ 5 ವರ್ಷ ಮೇಲ್ಪಟ್ಟು ವಿಚಾರಣೆಗೆ ಬಾಕಿ ಇದ್ದ ಪ್ರಕರಣಗಳಲ್ಲಿ 1,116 ಪ್ರಕರಣಗಳನ್ನು ವಿಲೇವಾರಿ ಮಾಡಿ ಆದೇಶ ಹೊರಡಿಸಿರುತ್ತಾರೆ. ಹಾಗೂ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ 202 ಪ್ರಕರಣಗಳನ್ನು ಇತ್ಯರ್ಥಪಡಿಸಿ ಆದೇಶ ಹೊರಡಿಸಲಾಗಿದ್ದು ಒಟ್ಟು 1,318 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿರುತ್ತದೆ.
ಕಂದಾಯ ಸಚಿವರ ನಿರ್ದೇಶನದ ಮೇರೆಗೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಹಾಗೂ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಾರದಲ್ಲಿ 3 ದಿನ ಹಾಗೂ ತಹಶೀಲ್ದಾರ್ ನ್ಯಾಯಾಲಯದಲ್ಲಿ 2 ದಿನ ಕಡ್ಡಾಯವಾಗಿ ನ್ಯಾಯಾಲಯಗಳ ಕಲಾಪಗಳನ್ನು ನಡೆಸಿ 90 ದಿನಗಳ ನಂತರದ ಎಲ್ಲಾ ಪ್ರಕರಣಗಳ ವಿಲೇವಾರಿ ಮಾಡಲಾಗಿದೆ.
ಮುಟೇಷನ್ ಪ್ರಕರಣಗಳ ವಿಲೇವಾರಿ : ಜಿಲ್ಲೆಯಲ್ಲಿ ಜಮೀನಿನ ಹಕ್ಕು ಬದಲಾವಣೆ, ಮ್ಯುಟೇಷನ್ ಪ್ರಕರಣಗಳ ವಿಲೇವಾರಿಗೆ ಸಂಬಂಧಿಸಿದಂತೆ ನೋಟಿಸ್ ಸಹಿತ ಪ್ರಕರಣಗಳಲ್ಲಿ ನೋಟಿಸ್ ಅವಧಿ ಮುಕ್ತಾಯದ ನಂತರ ವಿಲೇವಾರಿ ಸರಾಸರಿ ದಿನಗಳನ್ನು ಕಳೆದ 6 ತಿಂಗಳಲ್ಲಿ 21 ದಿನದಿಂದ 13 ದಿನಗಳಿಗೆ ಇಳಿಸಲಾಗಿದ್ದು ಶೀಘ್ರ ವಿಲೇವಾರಿಗೆ ಕ್ರಮವಹಿಸಲಾಗಿದೆ.
ನೊಟೀಸ್ ಅವಧಿ (7 ದಿನ) ಮುಕ್ತಾಯವಾದ 3 ದಿನಗಳೊಳಗೆ ಹಾಗೂ ಪೌತಿ, ವಿಲ್ ಆಧಾರಿತ ಖಾತೆ ಬದಲಾವಣೆ ಪ್ರಕರಣಗಳಲ್ಲಿ ನೊಟೀಸ್ ಅವಧಿ (15 ದಿನ) ಮುಕ್ತಾಯವಾದ ನಂತರ 3 ದಿನಗಳೊಳಗಾಗಿ ಮ್ಯುಟೇಷನ್ ವಿಲೇವಾರಿ ಮಾಡಲು ಕ್ರಮವಹಿಸಲಾಗುತ್ತಿದೆ. ನೋಟಿಸ್ ರಹಿತ ಪ್ರಕರಣಗಳಾದ ಆಧಾರ, ಭೋಗ್ಯ ಮತ್ತು ಬಿಡುಗಡೆ , ಪೋಡಿ ಹಾಗೂ ಕೋರ್ಟ್ ಆದೇಶ, ಭೂ ಪರಿವರ್ತನೆ ಪ್ರಕರಣಗಳಲ್ಲಿ 1 ದಿನಗಳೊಳಗಾಗಿ ವಿಲೇಪಡಿಸಲಾಗುತ್ತಿದ್ದು ಆದ್ಯತೆ ಮೇರೆಗೆ ನಿಗಧಿತ ಕಾಲಾವಧಿಯೊಳಗೆ ಕ್ರಮವಹಿಸಲಾಗುತ್ತಿದೆ.
ಸರ್ಕಾರಿ ಜಮೀನು ಟ್ಯಾಗ್: ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಜಮೀನುಗಳು, ಪಿಟಿಸಿಎಲ್ ವ್ಯಾಪ್ತಿಗೊಳಪಡುವ ಮಂಜೂರಿದಾರರ ಜಮೀನು ಹಾಗೂ ಇತರೆ ವರ್ಗಗಳ ವ್ಯಾಪ್ತಿಗೊಳಪಡುವ ಮಂಜೂರಿದಾರರ ಜಮೀನುಗಳಲ್ಲಿ ಅಕ್ರಮ ಖಾತೆ ವಹಿವಾಟುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಒಟ್ಟು 43,794 ಜಮೀನುಗಳ ವಿವರಗಳನ್ನು ಗುರುತಿಸಿ, ಭೂಮಿ ತಂತ್ರಾಂಶದಲ್ಲಿ ಪ್ರಾಗ್ (ಲಾಕ್) ಮಾಡಲಾಗಿದ್ದು ಅಕ್ರಮ ವಹಿವಾಟು ನಡೆಯದಂತೆ ತಡೆಹಿಡಿಯಲಾಗಿದೆ.
ಈ ಪೈಕಿ 18,829 ಸರ್ಕಾರಿ ಜಮೀನುಗಳು, 20,416 ಪಿಟಿಸಿಎಲ್ ವ್ಯಾಪ್ತಿಯ ಜಮೀನುಗಳು ಮತ್ತು 4549 ಇತರೆ ವರ್ಗಗಳಿಗೆ ಸೇರಿದವರ ಜಮೀನುಗಳನ್ನು ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.