SUDDIKSHANA KANNADA NEWS/ DAVANAGERE/ DATE:13-12-2023
ದಾವಣಗೆರೆ: ಕಡ್ಲೆಗಿಡ ಬೇಕಾ… ಕಡ್ಲೆಗಿಡ ಬೇಕಾ… ಟೀ ಬೇಕಾ ಟೀ… ಹೊಟ್ಟೆ ತುಂಬಿಸಿಕೊಳ್ಳಲು ಬನ್ನಿ ತಟ್ಟೆ ಇಡ್ಲಿ ಸಿಗುತ್ತೆ. ಇದು ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರು ಹೇಳಿದ್ದಲ್ಲ. ತರಗತಿಯಲ್ಲಿ ಮಕ್ಕಳಿಗೆ ಪಾಠ ಮಾಡಬೇಕಾದ ಉಪನ್ಯಾಸಕರು ಬೀದಿಗೆ ಬಂದು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ ಪರಿ ಇದು.
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅತಿಥಿ ಉಪನ್ಯಾಸಕರು, ಕೂಡಲೇ ಅತಿಥಿ ಉಪನ್ಯಾಸಕರನ್ನು ರಾಜ್ಯ ಸರ್ಕಾರ ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ಡಿಫರೆಂಟ್ ಆಗಿ ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆ ಅತಿಥಿ ಉಪನ್ಯಾಸಕರ ಖಾಯಂಮಾತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ. ಸರ್ಕಾರದ ಗಮನ ಸೆಳೆಯುವ ಸಲುವಾಗಿ ಕಡ್ಲೆಗಿಡ, ಟೀ ಮಾರಾಟ ಮಾಡಿ, ತಟ್ಟೆ ಇಡ್ಲಿ ಮಾರಿ ಆಕ್ರೋಶ ವ್ಯಕ್ತಪಡಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.
ಕಳೆದ ಸುಮಾರು ವರ್ಷಗಳಿಂದ ಅತಿಥಿ ಉಪನ್ಯಾಸಕರು ಸೇವೆ ಖಾಯಂಗೊಳಿಸುವಂತೆ ಒತ್ತಾಯಿಸಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳುಲ್ಲಿ 11 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸ ನಿರ್ವಹಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಅತಿಥಿ ಉಪನ್ಯಾಸಕರು ಖಾಯಂಗೊಳಿಸಿದಂತೆ ರಾಜ್ಯದಲ್ಲಿಯೂ ಖಾಯಂಗೊಳಿಸಿ ಎಂದು ಒತ್ತಾಯಿಸಿದ್ದರು. ಆದ್ರೆ, ಈಗ ಅವರೇ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ. ತಾವು ಹೇಳಿದ್ದ ಮಾತಿನಂತೆ ನಡೆದುಕೊಳ್ಳಲಿ. ನಮ್ಮ ಸೇವೆ ಖಾಯಂಗೊಳಿಸಲಿ. ಆದ್ರೆ, ರಾಜ್ಯ ಸರ್ಕಾರ ಮನಸ್ಸು ಮಾಡುತ್ತಿಲ್ಲ. ನಮ್ಮನ್ನು ನಂಬಿಕೊಂಡಿರುವವರ ಬದುಕು ಬೀದಿಗೆ ಬೀಳುವಂತಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.
ಬೇರೆ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲಾಗಿದೆ. ಪಶ್ಚಿಮ ಬಂಗಾಳ, ಪಂಜಾಬ್, ಹರ್ಯಾಣ, ದೆಹಲಿ, ಆಂಧ್ರಪ್ರದೇಶದಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲಾಗಿದೆ. ನಾವೇನು ಮನುಷ್ಯರು ಅಲ್ವಾ. ಅತಿಥಿ ಉಪನ್ಯಾಸಕರ ಸಂಬಳ ನಂಬಿಕೊಂಡು 11 ಲಕ್ಷ ಮಂದಿ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಕಿಂಚಿತ್ತೂ ನಮ್ಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿದರು.
ನಮ್ಮನ್ನು ಮನುಷ್ಯರಂತೆ ನೋಡಿ. ನಮಗೇನೂ ಕಾಯಿಲೆ ಬರಲ್ವಾ, ಹೆಂಡ್ತಿ ಮಕ್ಕಳಿಲ್ವಾ, ತಂದೆ ತಾಯಿ ಇಲ್ವಾ. ಕಳೆದ ಜುಲೈ ತಿಂಗಳಿಂದ ಸಂಬಳ ಆಗಿಲ್ಲ. ವರ್ಷದಲ್ಲಿ ಕೇವಲ ಏಳೆಂಟು ತಿಂಗಳು ಮಾತ್ರ ವೇತನ ಸಿಗುತ್ತದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನಾಲ್ಕು ಸಾವಿರ ರೂಪಾಯಿ ಜಾಸ್ತಿ ಮಾಡಿತ್ತು. ಕೆಲಸವೂ ಹೆಚ್ಚಾಗಿತ್ತು. ಕೆಲಸಕ್ಕೆ ತಕ್ಕಂತೆ ವೇತನ ನೀಡಲಾಗುತಿತ್ತು. 15 ಸಾವಿರ ರೂಪಾಯಿಯಿಂದ 35 ಸಾವಿರರವರೆಗೆ ಸಿಗುತ್ತಿದೆ. ಅದೂ ಕೇವಲ ಏಳು ತಿಂಗಳು ಮಾತ್ರ ಸಂಬಳ ಸಿಗುವುದರಿಂದ ಐದು ತಿಂಗಳು ತುಂಬಾನೇ ಕಷ್ಟವಾಗುತ್ತದೆ. ಕಡಿಮೆ ವೇತನದಲ್ಲಿ ದುಡಿಯುತ್ತಿದ್ದೇವೆ ಎಂದು ತಿಳಿಸಿದರು.
ಜೀವನಕ್ಕೋಸ್ಕರ ಕಡ್ಲೆಗಿಡ ಮಾರಾಟ, ಟೀ ಮಾರಾಟ ಮಾಡಿ. ಸಾರ್ವಜನಿಕರ ಸಹಾಯ ತೆಗೆದುಕೊಂಡು ಹೊಟ್ಟೆ ಪಾಡಿಗಾಗಿ ತಟ್ಟೆ ಇಡ್ಲಿ ಮಾರಾಟ ಮಾಡುವಂಥ ಸ್ಥಿತಿ ಬಂದಿದೆ. ಜೀತ ಪದ್ಧತಿಯಂತೆ ದುಡಿಯುತ್ತಿದ್ದೇವೆ. ಯಾವ ಶತಮಾನದಲ್ಲಿ ಇದ್ದೇವೆ ಎಂಬುದೇ ಗೊತ್ತಾಗುತ್ತಿಲ್ಲ. ನಾವು ಉನ್ನತ ವಿದ್ಯಾಭ್ಯಾಸ ಮಾಡಿದ್ದೇ ತಪ್ಪಾ. ಹತ್ತರಿಂದ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇವೆ. ಕೆಇಬಿ, ಕೃಷಿ ಇಲಾಖೆ ಸೇರಿದಂತೆ ಬೇರೆ ಬೇರೆ ಇಲಾಖೆಗಳಲ್ಲಿ ಗುತ್ತಿಗೆ ಅಡಿ ಕೆಲಸ ನಿರ್ವಹಿಸುತ್ತಿದ್ದವರನ್ನು ಖಾಯಂಗೊಳಿಸಲಾಗಿದೆ. ನಮ್ಮನ್ನು ಯಾಕೆ ಮಾಡುತ್ತಿಲ್ಲ. ಅತಿಥಿ ಉಪನ್ಯಾಸಕರ ಖಾಯಂ ಮಾಡಿ ಸೂಕ್ತ ವೇತನ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ನವೆಂಬರ್ 23ರಿಂದ ರಾಜ್ಯಾದ್ಯಂತ ತರಗತಿ ಬಹಿಷ್ಕಾರ ಮಾಡಿ ಹೋರಾಟ ಮಾಡುತ್ತಿದ್ದೇವೆ. ಬೀದಿ ಪಾಲಾದರೂ ಸರ್ಕಾರಕ್ಕೆ ಮಾನವೀಯತೆ, ಕರುಣೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಹತ್ತು ಸಾವಿರ ಉಪನ್ಯಾಸಕರು ಹೋರಾಟ ಮಾಡಿದ್ದೇವೆ. ಉನ್ನತ ಶಿಕ್ಷಣ ಸಚಿವರು ಬಂದ ಬಳಿಕ ವಾಪಸ್ ಬಂದಿದ್ದೇವು. ಮೂಗಿಗೆ ತುಪ್ಪ ಸವರಿ ಕಳುಹಿಸಿದ್ದಾರೆ. 11 ಸಾವಿರ ಅತಿಥಿ ಉಪನ್ಯಾಸಕರ ಖಾಯಂಗೊಳಿಸುವವರೆಗೂ ಹೋರಾಟ ನಿಲ್ಲದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.