SUDDIKSHANA KANNADA NEWS/ DAVANAGERE/ DATE:11-12-2023
ಮಂಗಳೂರು: ಕರಾವಳಿ ಭಾಗದಲ್ಲಿ ಮತ್ತೆ ಮಳೆ ಬಿರುಸು ಪಡೆಯುವ ಸಾಧ್ಯತೆ ಇದೆ. ಡಿ.11ರ ಬೆಳಗ್ಗೆವರೆಗೆ ಕರಾವಳಿಯಾದ್ಯಂತ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ತಡರಾತ್ರಿ
ಮತ್ತು ರವಿವಾರ ಸಂಜೆ ಬಳಿಕ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಕೆಲವು ಕಡೆ ಹಾನಿ ಉಂಟಾಗಿದೆ. ಉಡುಪಿ ಜಿಲ್ಲೆಯ ಕೆಲವು ಕಡೆ ಶನಿವಾರ ರಾತ್ರಿ ಮಳೆಯಾಗಿದೆ.
ಮಂಗಳೂರು ನಗರದಲ್ಲಿ ಶನಿವಾರ ರಾತ್ರಿ ರಾತ್ರಿ ಸುಮಾರು 12 ಗಂಟೆ ವೇಳೆಗೆ ಉತ್ತಮ ಮಳೆ ಸುರಿದಿದೆ. ಅದೇ ರೀತಿ, ರವಿವಾರ ಸಂಜೆ ಬಳಿಕ ಉಜಿರೆ, ಧರ್ಮಸ್ಥಳ ಬೆಳ್ತಂಗಡಿ, ಇಂದಬೆಟ್ಟು, ಮುಂಡಾಜೆ, ನಾರಾವಿ, ಅಳದಂಗಡಿ, ಗುರುವಾಯನಕೆರೆ, ಪುತ್ತೂರು, ಬಂಟ್ವಾಳ, ಸುಳ್ಯ, ಬೆಳ್ಳಾರೆ, ಕುಕ್ಕೆ ಸುಬ್ರಹ್ಮಣ್ಯ, ಕಡಬ, ಮದ್ದಡ್ಕ, ಕಡಿರುದ್ಯಾವರ, ಕೊಂಬಾರು, ಆಲಂಕಾರು ಸುತ್ತಮುತ್ತ ಬಿರುಸಿನ ಮಳೆ ಸುರಿದಿದೆ. ಜಿಲ್ಲೆಯಾದ್ಯಂತ ಕಳೆದ ಕೆಲವು ವಾರಗಳಿಂದ ಮಳೆ ಕ್ಷೀಣಗೊಂಡಿತ್ತು. ಸಂಜೆ ಬಳಿಕ ಸುರಿದ ಮಳೆಗೆ ಇಳೆ ತುಸು ತಂಪಾಗಿತ್ತು.
ಸಮಾರಂಭಗಳಿಗೆ ಅಡ್ಡಿ:
ಜಿಲ್ಲೆಯಾದ್ಯಂತ ಕೋಲ, ಯಕ್ಷಗಾನ, ಜಾತ್ರೆ ಸಹಿತ ವಿವಿಧ ಕಾರ್ಯಕ್ರಮಗಳಿಗೆ ಮಳೆ ಅಡ್ಡಿಪಡಿಸಿದ ಘಟನೆಯೂ ನಡೆಯಿತು. ಗ್ರಾಮೀಣ ಭಾಗದ ಕೆಲವು ಕಡೆಗಳಲ್ಲಿ ಅಡಿಕೆ ಕೊಯ್ಲಿನ ಕಾರಣಕ್ಕೆ ಹಣ್ಣಡಕೆ ಮಳೆಯಿಂದಾಗಿ ಒದ್ದೆಯಾಗಿದೆ. ಕೆಲವೆಡೆ ವಿದ್ಯುತ್ ಕೈಕೊಟ್ಟಿತ್ತು.