SUDDIKSHANA KANNADA NEWS/ DAVANAGERE/ DATE:10-12-2023
ದಾವಣಗೆರೆ: ಜಾತಿಗಣತಿ ವರದಿಗೆ ಮತ್ತೆ ವಿರೋಧ ವ್ಯಕ್ತಪಡಿಸಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು, ಜಾತಿ ಗಣತಿ ವಿಚಾರ ಕುರಿತಂತೆ ಸಿದ್ದರಾಮಯ್ಯರ ನಿರ್ಧಾರ ಏನೇ ಇರಲಿ, ಜಾತಿಗಣತಿ ಬೇಕಿದ್ದರೆ ಮಾಡಲಿ, ಅದಕ್ಕೆ ನಮ್ಮ ಬೇಸರ ಇಲ್ಲ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದರು.
ನಗರದ ಎಂಬಿಎ ಕಾಲೇಜು ಆವರಣದಲ್ಲಿ 24ನೇ ಮಹಾ ಅಧಿವೇಶನ ಪ್ರಯುಕ್ತ ಪ್ರಚಾರಕ್ಕಾಗಿ ಜಿಲ್ಲೆಯಾದ್ಯಂತ ಪ್ರಚಾರ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಡಿಸೆಂಬರ್ 23, 24ರಂದು ಅಖಿಲ ಭಾರತ ವೀರಶೈವ ಮಹಾಸಭೆಯ ಮಹಾ ಅಧಿವೇಶನದಲ್ಲಿ ಈ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸಮಾವೇಶದಲ್ಲಿ ಏನಿಲ್ಲಾ ಎಂದರೂ ಮೂರರಿಂದ ನಾಲ್ಕು ಲಕ್ಷ ಜನರು ಆಗಮಿಸಲಿದ್ದಾರೆ. ಜಾತಿಗಣತಿ ಬೇಕಿದ್ದರೆ ಸಿಎಂ ಸಿದ್ದರಾಮಯ್ಯ ಮಾಡಲಿ, ನಮಗೆ ಬೇಸರವಿಲ್ಲ. ವೀರಶೈವ ಮಹಾ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರುತ್ತೇವೆ. ಸಮಾವೇಶಕ್ಕೆ ಪರಂಪರೆಯ ಎಲ್ಲಾ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಸಮಾವೇಶದ ಬಗ್ಗೆ ಜನರಿಗೆ ಮಾಹಿತಿ ನೀಡಲು ಪ್ರಚಾರ ವಾಹನಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದರು.
ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸುವುದಾಗಿ ಹೇಳಿದರು.
ಚಿತ್ರದುರ್ಗ ಮುರುಘಾ ಮಠದ ಸ್ವಾಮೀಜಿ ಅವರು ಮೊದಲು ಆರೋಪದಿಂದ ಹೊರಗೆ ಬರಲಿ. ಆಮೇಲೆ ಅವರನ್ನು ಅಧಿವೇಶನಕ್ಕೆ ಕರೆಯುವ ಕುರಿತಂತೆ ಚರ್ಚೆ ನಡೆಸುತ್ತೇವೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.