SUDDIKSHANA KANNADA NEWS/ DAVANAGERE/ DATE:02-12-2023
ದಾವಣಗೆರೆ: ಬಿಜೆಪಿ ಬಿಟ್ಟು ಶಾಸಕರು, ಮಾಜಿ ಶಾಸಕರು, ಮುಖಂಡರು ಯಾರೂ ಕಾಂಗ್ರೆಸ್ ಗೆ ಹೋಗುವುದಿಲ್ಲ. ಬಿ. ವೈ. ವಿಜಯೇಂದ್ರ ಯಡಿಯೂರಪ್ಪ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ಎಲ್ಲವೂ ಸರಿ ಹೋಗುತ್ತಿದೆ. ಅಸಮಾಧಾನಿತರ ಜೊತೆ ವಿಜಯೇಂದ್ರ ಅವರು ಮಾತುಕತೆ ನಡೆಸಿದ್ದು, ಹಾಗಾಗಿ, ಯಾರೂ ಹೋಗುವುದಿಲ್ಲ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಛಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಕಾಂಗ್ರೆಸ್ ಗೆ ವಲಸೆ ಹೋಗುತ್ತಾರೆ ಎಂಬ ವದಂತಿ ಹಬ್ಬಿತ್ತು. ಆದ್ರೆ, ಈಗ ಎಲ್ಲವೂ ಶಮನವಾಗಿಲ್ಲ. ನನಗೂ ಪಕ್ಷದ ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಅಸಮಾಧಾನ ಇತ್ತು. ಹಾಗೆಂದ ಮಾತ್ರಕ್ಕೆ ಬಿಜೆಪಿ ಬಿಡ್ತೀನಿ ಎನ್ನುವುದು ಸರಿಯಲ್ಲ. ನಾನು ಸಹ ಎಲ್ಲಿಯೂ ಕಾಂಗ್ರೆಸ್ ಗೆ ಹೋಗುತ್ತೀನಿ ಎಂದು ಹೇಳಿಲ್ಲ. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪರ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ಎದುರಿಸಬೇಕು ಹಾಗೂ ಬಿ. ವೈ. ವಿಜಯೇಂದ್ರ ರಾಜ್ಯ ಘಟಕದ ಅಧ್ಯಕ್ಷರಾಗಬೇಕು ಎಂಬ ಅಪೇಕ್ಷೆ ಇತ್ತು. ಅದು ಈಡೇರಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 28 ಕ್ಷೇತ್ರಗಳಲ್ಲಿಯೂ ಜಯ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಮಾಜಿ ಸಚಿವ ವಿ. ಸೋಮಣ್ಣರು ದೆಹಲಿಗೆ ಹೋಗಿ ಪಕ್ಷದ ವರಿಷ್ಠರ ಭೇಟಿ ವಿಚಾರ ಕುರಿತಂತೆ ಕಾದು ನೋಡೋಣ. ಈ ಬಗ್ಗೆ ಹೆಚ್ಚು ಈಗಲೇ ಏನನ್ನೂ ಮಾತನಾಡಲ್ಲ. ಪಕ್ಷದೊಳಗಿನ ಅಸಮಾಧಾನ ಸರಿ ಹೋಗುತ್ತಿದೆ. ಯತ್ನಾಳ್ ಹಾಗೂ ಸೋಮಣ್ಣರ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ತಿಳಿಸಿದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ವಾಪಸ್ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಪಕ್ಷದ ವರಿಷ್ಠರ ಮಟ್ಟದಲ್ಲಿ ಏನಾಗಿದೆ ಎಂಬುದು ಗೊತ್ತಿಲ್ಲ. ಜಗದೀಶ್ ಶೆಟ್ಟರ್ ತುಂಬಾ ಹಿರಿಯರು. ಮುಖ್ಯಮಂತ್ರಿಯಾಗಿದ್ದವರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತರಾದರು. ಶೆಟ್ಟರ್ ಅವರ ಇಡೀ ಕುಟುಂಬ ಜನಸಂಘ, ಹಿಂದುತ್ವ ಪರ ಇದ್ದವರು. ವಾಪಸ್ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ನನಗೆ ಈ ಕುರಿಂತೆ ಮಾಹಿತಿ ಇಲ್ಲ. ಮಾತನಾಡಿದರೆ ಪ್ರಚಾರಕ್ಕೆ ಹೇಳಿಕೆ ನೀಡಿದೆ ಎನ್ನುತ್ತಾರೆ. ಯಾವುದೇ ಮಾಹಿತಿ ಇಲ್ಲದೇ ಮಾತನಾಡುವುದು ಸರಿಯೂ ಆಗದು ಎಂದರು.
ಸಚಿವ ಜಮೀರ್ ಅಹ್ಮದ್ ಖಾನ್ ಸಚಿವ ಅನ್ನೋದನ್ನ ಮರೆತು ಸಂವಿಧಾನಿಕ ಹುದ್ದೆ ಬಗ್ಗೆ ಅಪಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ. ಮುಸ್ಲಿಂರಿಗೆ ಎಲ್ಲರೂ ನಮಸ್ಕಾರ ಮಾಡಬೇಕೆನ್ನುತ್ತಾರೆ. ಇಂಥ ಹೇಳಿಕೆ ನೀಡುವುದು ಸರಿಯಲ್ಲ. ಸ್ಪೀಕರ್
ಹುದ್ದೆಗೆ ತುಂಬಾನೇ ಮಹತ್ವ ಇದೆ. ಇದನ್ನು ಅರಿತು ಮಾತನಾಡಬೇಕು. ರಾಜ್ಯ ಸರ್ಕಾರದ ವೈಫಲ್ಯತೆ, ಸರಿಯಾಗಿ ನೀಡದ ಬರ ಪರಿಹಾರ, ಜನ ವಿರೋಧಿ, ರೈತ ವಿರೋಧಿ ನೀತಿಗಳ ವಿರುದ್ಧ ಸದನದ ಒಳಗೆ ವಿಪಕ್ಷ ನಾಯಕ ಆರ್. ಅಶೋಕ್, ಹೆಚ್. ಡಿ. ಕುಮಾರಸ್ವಾಮಿ ಹೋರಾಟ ಮಾಡಿದರೆ, ಹೊರಗಡೆ ವಿಜಯೇಂದ್ರ ಅವರ ನೇತೃತ್ವದಲ್ಲಿ ನಾವೆಲ್ಲರೂ ಸೇರಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.
ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್ ಘಡದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ತೆಲಂಗಾಣದಲ್ಲಿ ಪ್ರಬಲ ಪೈಪೋಟಿಯನ್ನು ಬಿಜೆಪಿ ನೀಡಲಿದೆ ಎಂಬ ವಿಶ್ವಾಸ ಇದೆ. ತೆಲಂಗಾಣದಲ್ಲಿ ಬಿಜೆಪಿ ಬಲಿಷ್ಠವಾಗಿಲ್ಲ. ಪಂಚರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಮೇಲುಗೈ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಾತಿಗಣತಿಗೆ ನಮ್ಮ ವಿರೋಧ ಇಲ್ಲ. ಆದ್ರೆ, ವೈಜ್ಞಾನಿಕವಾಗಿ ಇರಬೇಕು ಎಂಬುದು ಅಷ್ಟೇ ಒತ್ತಾಯ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ, ಡಿಸಿಎಂ ಡಿ. ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರು ತೀವ್ರ ವಿರೋಧ ಮಾಡಿದ್ದಾರೆ. ಆದರೂ ಜಾತಿಗಣತಿ ವರದಿ ಜಾರಿ ಮಾಡುತ್ತೇವೆ ಎನ್ನುವುದು ಸರಿಯಲ್ಲ. ಕಾಂತರಾಜ ಆಯೋಗದ ವರದಿಯು ವೈಜ್ಞಾನಿಕವಾಗಿಲ್ಲ. ಮನೆ ಮನೆಗೆ ತೆರಳಿ ಜಾತಿ ಗಣತಿ ಮಾಡಿಲ್ಲ. ನಮಗೆ ಈ ವಿಚಾರವೇ ಗೊತ್ತಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.
ಲೋಕಸಭೆ ಬಳಿಕ ಸರ್ಕಾರ ಪತನ:
ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಪತನವಾಗಲಿದೆ. ಅಧಿಕಾರಕ್ಕೆ ಬಂದು ಏಳು ತಿಂಗಳಾದರೂ ಅಭಿವೃದ್ಧಿ ಶೂನ್ಯ. ಪ್ರತಿ ಶಾಸಕರಿಗೆ ಕೇವಲ 50 ಲಕ್ಷ ರೂಪಾಯಿ ಅನುದಾನ ಮಾತ್ರ ನೀಡಲಾಗಿದೆ. ಇದರಿಂದಾಗಿ ಶಾಸಕರು ಅಸಮಾಧಾನಗೊಂಡಿದ್ದಾರೆ. ಹಿರಿಯ ಶಾಸಕರು ಸಿಎಂ ಸಿದ್ದರಾಮಯ್ಯರಿಗೆ ಪತ್ರ ಬರೆದು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ನಾವೇನೂ ಆಪರೇಷನ್ ಕಮಲ ಮಾಡಲು ಹೋಗುವುದಿಲ್ಲ. ಕಾಂಗ್ರೆಸ್ ಶಾಸಕರೇ ರಾಜೀನಾಮೆ ಕೊಟ್ಟು ಸರ್ಕಾರ ಪತನಗೊಳಿಸಲಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಪತನ ಆದರೂ ಆಗಬಹುದು ಎಂದು ಭವಿಷ್ಯ ನುಡಿದರು.
ಕುಡಿಯುವ ನೀರು, ಏತ ನೀರಾವರಿ ಯೋಜನೆ ಸೇರಿದಂತೆ ಹಲವು ಕಾಮಗಾರಿಗಳಿಗೆ ಬಿಜೆಪಿ ಹಣ ಬಿಡುಗಡೆ ಮಾಡಿದೆ. ಆದ್ರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯಾವ ಕೆಲಸಗಳೂ ಆಗುತ್ತಿಲ್ಲ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದ್ದ ಕಾಮಗಾರಿಗಳು ಈಗ ನಡೆಯುತ್ತಿವೆ ಎಂದು ಆರೋಪಿಸಿದರು.
ಜಮೀರ್ ಅಹ್ಮದ್ ಹುಚ್ಚ ಎಂದಿದ್ದಕ್ಕೆ ಹರಿಹರ ಮಾಜಿ ಶಾಸಕ ಎಸ್. ರಾಮಪ್ಪ ಅವರು ನಿಮ್ಮನ್ನು ಹುಚ್ಚ, ಹುಂಬ ಎಂದಿದ್ದಾರಲ್ವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡದ ಎಂ. ಪಿ. ರೇಣುಕಾಚಾರ್ಯ ಅವರು, ನನಗೆ ನನ್ನದೇ ಆದ ಲೆವೆಲ್ ಇದೆ. ರಾಮಪ್ಪರ ಬಗ್ಗೆ ಏನೂ ಮಾತನಾಡುವುದಿಲ್ಲ. ಈ ಬಗ್ಗೆ ಬರೆಯಬೇಡಿ ಎಂದು ಮಾಧ್ಯಮದವರಲ್ಲಿ ಮನವಿ ಮಾಡಿದರು. ರಾಮಪ್ಪರ ಬಗ್ಗೆ ನೋ ಕಮೆಂಟ್ಸ್ ಎಂದರು.