SUDDIKSHANA KANNADA NEWS/ DAVANAGERE/ DATE:01-12-2023
ಬೆಂಗಳೂರು: ಬೆಂಗಳೂರಿನ 15 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದೆ. ಎಲ್ಲಾ ಕಡೆ ಪರಿಶೀಲಿಸಲಾಗುತ್ತಿದೆ. ಕಳೆದ ವರ್ಷವೂ ಇದೇ ರೀತಿ ಆಗಿತ್ತು. ನಾವು ನಿರ್ಲಕ್ಷಿಸುವುದಿಲ್ಲ. ಯಾವ ಪೋಷಕರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಧೈರ್ಯ ತುಂಬಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಈ ವಿಚಾರವನ್ನು ಲಘುವಾಗಿ ಪರಿಗಣಿಸುವುದಿಲ್ಲ. ಯಾರೂ ಸಮಾಜಘಾತುಕ ಕೆಲಸ ಮಾಡಿದವರ ವಿರುದ್ದ ಹೆಡೆಮುರಿ ಕಟ್ಟೇ ಕಟ್ಟುತ್ತೇವೆ. ಮುಗ್ದ ಮಕ್ಕಳ ಜೀವನದ ಜೊತೆ ಚೆಲ್ಲಾಟ ಆಡುವವರ ವಿರುದ್ಧ ಸುಮ್ಮನೇ ಬಿಡುವುದಿಲ್ಲ. ಎಷ್ಟೇ ಬಲಿಷ್ಠವಾಗಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದರು.
ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುವುದು. ಆಂತರಿಕ ಭದ್ರತೆ ವಿಭಾಗದವರಿಗೆ ಸೂಚನೆ ಕೊಟ್ಟಿದ್ದೇನೆ. ಈಗಾಗಲೇ ನಮಗೆ ಸೈಬರ್ ಪೊಲೀಸರಿಗೂ ಸೂಚನೆ ನೀಡಿದ್ದೇನೆ. ಎಲ್ಲಿಂದ ಇ – ಮೇಲ್ ಬಂದಿದೆ ಎಂಬುದನ್ನು ಪರಿಶೀಲನೆ
ಮಾಡುತ್ತಿದ್ದಾರೆ. ಈಗ ನಾನು ಬೆಂಗಳೂರಿಗೆ ಹೋಗುತ್ತಿದ್ದೇನೆ. ಆರೋಗ್ಯ ತಪಾಸಣೆ ದೊಡ್ಡ ಕಾರ್ಯಕ್ರಮ ಇತ್ತು. ದಿನೇಶ್ ಗುಂಡೂರಾವ್ ಅವರು ಬರುತ್ತಿದ್ದಾರೆ. ಹಾಗಾಗಿ, ಕಾರ್ಯಕ್ರಮ ಮುಗಿದ ತಕ್ಷಣ ಬೆಂಗಳೂರಿಗೆ ಹೋಗುತ್ತಿದ್ದೇನೆ. ತುಮಕೂರಿನಲ್ಲಿದ್ದೇನೆ ಎಂದರು.
ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಆಗುವ ಪ್ರಶ್ನೆಯೇ ಇಲ್ಲ. ಯಾರೇ ಆಗಲಿ ಹೆಡೆಮುರಿ ಕಟ್ಟುತ್ತೇವೆ. ಮಕ್ಕಳ ಬದುಕಿನ, ಜೀವನದ ಚೆಲ್ಲಾಟ ಆಡುವವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಪುನರಚ್ಚರಿಸಿದರು.