SUDDIKSHANA KANNADA NEWS/ DAVANAGERE/ DATE:05-11-2023
ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ದಾಖಲಿಸುವ ಮೂಲಕ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸತತ 8 ಪಂದ್ಯಗಳನ್ನು ಗೆದ್ದ ಶ್ರೇಯಕ್ಕೆ ಪಾತ್ರವಾಯಿತು. 243 ರನ್ ಗಳ ಭರ್ಜರಿ ಜಯವನ್ನು ರೋಹಿತ್ ಪಡೆ ಸಾಧಿಸಿತು. ಈ ಮೂಲಕ ಈ ಬಾರಿಯ ವಿಶ್ವಕಪ್ ನಲ್ಲಿ ಸೋಲಿಲ್ಲದ ಸರದಾರ ಎನಿಸಿಕೊಂಡ ಟೀಂ ಇಂಡಿಯಾ ಸಂಘಟಿತ ಆಟಕ್ಕೆ ದಕ್ಷಿಣ ಆಫ್ರಿಕಾ ಉಡೀಸ್ ಆಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ಉತ್ತಮ ಆರಂಭ ಪಡೆಯಿತು. ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಬಿರುಸಿನ ಅರ್ಧಶತಕದ ಜೊತೆಯಾಟ ನೀಡಿದರು. ಆದ್ರೆ, ರೋಹಿತ್ ಶರ್ಮಾ ಹೆಚ್ಚು ಹೊತ್ತು ಸ್ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಶುಭಮನ್ ಗಿಲ್ ಅವರೂ ರೋಹಿತ್ ಶರ್ಮಾ ಹಿಂಬಾಲಿಸಿದರು. ಕೇವಲ 24 ಎಸೆತಗಳಲ್ಲಿ ರೋಹಿತ್ ಶರ್ಮಾ ಎರಡು ಸಿಕ್ಸ್ ಹಾಗೂ ಆರು ಬೌಂಡರಿ ಸಮೇತ 40 ರನ್ ಬಾರಿಸಿದರು. ಶುಭಮನ್ ಗಿಲ್ ಕೇವಲ 23 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಬರ್ತ್ ಡೇ ಬಾಯ್ ವಿರಾಟ್ ಕೊಹ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ಸಂಭ್ರಮಿಸಿದರು. 101 ರನ್ ಗಳ ಭರ್ಜರಿ ಶತಕ ಬಾರಿಸುವ ಮೂಲಕ ಭಾರತ ತಂಡಕ್ಕೆ ಆಸರೆಯಾದರು. ಶ್ರೇಯಸ್ ಅಯ್ಯರ್ 77ರನ್ ಬಾರಿಸಿ ಗಮನ ಸೆಳೆದರು. ಭಾರತವು 50 ಓವರ್ ಗಳಿಗೆ 326 ರನ್ ಗಳ ಭಾರೀ ಮೊತ್ತ ಪೇರಿಸಿತು.
ವಿರಾಟ್ ಕೊಹ್ಲಿ ಅವರ ಅಜೇಯ 101 ರನ್ಗಳ ಮೇಲೆ ಸವಾರಿ ಮಾಡುತ್ತಿರುವ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಈಡನ್ ಗಾರ್ಡನ್ಸ್ನಲ್ಲಿ 5 ವಿಕೆಟ್ಗೆ 326 ರನ್ ಗಳಿಸಿತು, ಅವರ 35 ನೇ ಹುಟ್ಟುಹಬ್ಬವನ್ನು ಅತ್ಯಂತ ಸೂಕ್ತವಾದ ರೀತಿಯಲ್ಲಿ ಆಚರಿಸಿದರು. ಮಾತ್ರವಲ್ಲ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ 49 ನೇ ಶತಕವನ್ನು ಸರಿಗಟ್ಟಿದರು. ಈ ಮೂಲಕ ಇನ್ನು ಒಂದು ಶತಕ ಬಾರಿಸಿದರೆ ಸಚಿನ್ ದಾಖಲೆ ಧೂಳೀಪಟವಾಗಲಿದೆ.
ಈಡನ್ ಗಾರ್ಡನ್ನಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಮುಂದೆ ಭಾರತೀಯ ಇನ್ನಿಂಗ್ಸ್ನ 49ನೇ ಓವರ್ನಲ್ಲಿ ಕಗಿಸೊ ರಬಾಡ ಎಸೆತದಲ್ಲಿ ಸಿಂಗಲ್ ರನ್ ಗಳಿಸಿದಾಗ ಕೊಹ್ಲಿ ಈ ಹೆಗ್ಗುರುತನ್ನು ತಲುಪಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ, ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಭಾರತದ ಪಂದ್ಯದಲ್ಲಿ ಕೊಹ್ಲಿ ತಮ್ಮ 49 ನೇ ODI ಶತಕವನ್ನು ಸ್ವಲ್ಪಮಟ್ಟಿಗೆ ತಪ್ಪಿಸಿಕೊಂಡಿದ್ದರು. ಆದ್ರೆ, ಇಂದಿನ ಪಂದ್ಯದಲ್ಲಿ ಅದನ್ನು ಸಾಧಿಸಿದರು.
ಶ್ರೇಯಸ್ ಅಯ್ಯರ್ (77) ಅವರೊಂದಿಗೆ ಮೂರನೇ ವಿಕೆಟ್ಗೆ ಕೊಹ್ಲಿ 134 ರನ್ಗಳ ಅದ್ಭುತ ಜೊತೆಯಾಟ ನಡೆಸಿದರು. ಇದಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ 24 ಎಸೆತಗಳಲ್ಲಿ 40 ರನ್ ಗಳಿಸಿ ಭಾರತಕ್ಕೆ ಭರ್ಜರಿ ಆರಂಭ ನೀಡಿದರು. ಸೂರ್ಯಕುಮಾರ್ ಯಾದವ್ (14 ಎಸೆತಗಳಲ್ಲಿ 22) ಮತ್ತು ರವೀಂದ್ರ ಜಡೇಜಾ 15 ಎಸೆತಗಳಲ್ಲಿ ಅಜೇಯ 29 ರನ್ ಗಳಿಸಿ ಭಾರತದ ರನ್ ಹೆಚ್ಚಳಕ್ಕೆ ಕಾರಣವಾದರು.
ಇನ್ನು ಸೌತ್ ಆಫ್ರಿಕಾ ಕೇವಲ 83 ರನ್ ಗಳಿಗೆ ಸರ್ವಪತನ ಕಂಡಿತು. ರವೀಂದ್ರ ಜಡೇಜಾ ಐದು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಕುಲದೀಪ್ ಯಾದವ್, ಮೊಹಮ್ಮದ್ ಶಮಿ ತಲಾ 2 ವಿಕೆಟ್, ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದರು. ಸೌತ್ ಆಫ್ರಿಕಾ ಕೇವಲ 27.1 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಹೀನಾಯವಾಗಿ ಸೋತಿತು.