SUDDIKSHANA KANNADA NEWS/ DAVANAGERE/ DATE:03-11-2023
ದಾವಣಗೆರೆ: ರಾಜ್ಯ ಸರ್ಕಾರ ಭೀಕರ ಬರದಿಂದ ಹಾನಿಯಾಗಿರುವ ಬೆಳೆ ನಷ್ಟದ ಸಮೀಕ್ಷೆ ನಡೆಸಬೇಕು. ಭೂಮಿ ಉಳಿಮೆ, ಬಿತ್ತನೆ ಬೀಜ, ರಸಗೊಬ್ಬರ, ಕೂಲಿ ವೆಚ್ಚ, ರೈತನ ಶ್ರಮ ಎಲ್ಲವನ್ನೂ ಲೆಕ್ಕ ಹಾಕಿ ಪ್ರತಿ ಎಕರೆಗೆ ಬೆಳೆ ನಷ್ಟದ ಪ್ರಮಾಣ ಆಂದಾಜಿಸಬೇಕು. ದಾವಣಗೆರೆ ಜಿಲ್ಲೆಯಲ್ಲಿ ಪ್ರತಿ ಎಕರೆಗೆ ಪ್ರತಿ ಹಂಗಾಮಿಗೆ 30 ಸಾವಿರ ಪರಿಹಾರ ಕೊಡಬೇಕು ಎಂದು ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಭೀಕರ ಬರದ ಸಂಕಷ್ಟ ಈ ಬಾರಿ ರಾಜ್ಯವನ್ನು ತೀವ್ರವಾಗಿ ಕಾಡುತ್ತಿದೆ. ಈ ವರ್ಷ ಮಳೆ ಕೊರತೆಯಿಂದ ಬೀಕರ ಬರದಿಂದ ರೈತರು ಬಹಳಷ್ಟು ನಷ್ಟಕ್ಕೆ ಒಳಗಾಗಿ ಕಂಗೆಟ್ಟು ಹೋಗಿದ್ದಾರೆ. ರೈತರ ಸ್ಥಿತಿ ಶೋಚನೀಯವಾಗಿದೆ. ರಾಜ್ಯದಲ್ಲಿ ಕಳೆದ 50 ವರ್ಷಗಳಲ್ಲಿ ಕಂಡರಿಯದ ಅತ್ಯಂತ ಭೀಕರ ಮತ್ತು ಕರಾಳ ಬರ ಇದಾಗಿದೆ. ಅಳಿದುಳಿದ ಬೆಳೆ ರಕ್ಷಿಸಿಕೊಳ್ಳಲು ವಿದ್ಯುತ್ತಿಲ್ಲ. ಕುಡಿಯಲು ನೀರಿಲ್ಲ. ಕೃಷಿ ಕೂಲಿಕಾರರ ಕೈಗೆ ಕೆಲಸವಿಲ್ಲ. ಜಾನುವಾರುಗಳಿಗೆ ಮೇವಿನ ಅಭಾವ ತಲೆದೋರಿದೆ. ಕಂಗಾಲಾದ ರೈತರು ಬದುಕಿನ ಬಂಡಿ ಸಾಗಿಸಲು ಅಧಿಕ ಪ್ರಮಾಣದಲ್ಲಿ ಗುಳೆ ಹೋಗಲಾರಂಭಿಸಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಇಂಥ ಸ್ಥಿತಿಯಲ್ಲಿ ಬರ ಪರಿಹಾರದ ಕ್ರಮಗಳನ್ನು ಕೈಗೊಳ್ಳಬೇಕಾದ ರಾಜ್ಯದ ಕಾಂಗ್ರೆಸ್ ಸರ್ಕಾರ ಕೇಂದ್ರದ ಮೇಲೆ ಆರೋಪ ಹೊರಿಸುತ್ತಾ, ಕೇಂದ್ರದ ನೆರವಿಗೆ ಕಾಯುತ್ತ ಕುಳಿತಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಬರದಿಂದ ತತ್ತರಿಸಿರುವ ರೈತರ-ಜನಸಾಮಾನ್ಯರ ಬವಣೆಯನ್ನು ಆಲಿಸಿ-ಮಾತನಾಡಿಸಿ ಸಂತೈಸುವ ಸೌಜನ್ಯತೆ ಮೆರೆದಿಲ್ಲ. ಕನಿಷ್ಠ ಮಾನವೀಯತೆ ಇಲ್ಲದ ದುಷ್ಟ ಸರ್ಕಾರ ಇದಾಗಿದೆ ಎಂದು ಆರೋಪಿಸಲಾಗಿದೆ.
ಬರದ ಹೊತ್ತಿನಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡಲು ಉಧ್ಯೋಗ ಖಾತ್ರಿ ಯೋಜನೆಯಡಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಸೇರಿದಂತೆ ವೈಯಕ್ತಿಕ ಕಾಮಗಾರಿಗಳಿಗೆ ಆದ್ಯತೆ ನೀಡಿ ತಾಲ್ಲೂಕುವಾರು ಮತ್ತು ಗ್ರಾಮ ಪಂಚಾಯಿತಿವಾರು ಗುರಿ ನಿಗದಿಪಡಿಸಬೇಕು. ಈ ಯೋಜನೆ ಅನುಷ್ಠಾನದಲ್ಲಿ ನಿಯಮಗಳನ್ನು ಸಡಿಲಗೊಳಿಸಿ, ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಬೇಕು. ವೈಯಕ್ತಿಕ ಕಾಮಗಾರಿಗಳಿಗೆ ಕುಟುಂಬದ ಯಾರಾದರೊಬ್ಬರು ಜಾಬ್ ಕಾರ್ಡ್ ಹೊಂದಿರಬೇಕು, ಕುಟುಂಬದ ಯಾರಾದರೊಬ್ಬರು ಮನರೇಗದಡಿಯಲ್ಲಿ ಈ ಹಿಂದೆ ಕೆಲಸ ಮಾಡಿರಬೇಕು, ಸಣ್ಣ ಅತಿ ಸಣ್ಣ ರೈತರಾಗಿರಬೇಕು ಎಂಬ ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.
ಬೆಳೆ ಇಲ್ಲದೆ ಮೇವಿನ ಕೊರತೆಯಿಂದ ಹಾಲಿನ ಉತ್ಪಾದನೆ ಕ್ಷೀಣವಾಗಿದೆ. ಇದರಿಂದಾಗಿ ಹೈನೋಧ್ಯಮಕ್ಕೆ ತೀವ್ರ ಪೆಟ್ಟು ಬಿದ್ದಿದ್ದು, ಇದರ ನಷ್ಟದ ಪ್ರಮಾಣವನ್ನು ಪ್ರತ್ಯೇಕವಾಗಿ ಆಂದಾಜಿಸಿ, ಹೈನುಗಾರಿಕೆ, ಕುರಿ ಕೋಳಿ ಸಾಕಾಣಿಕೆಯಲ್ಲಿ ನಿರತರಾಗಿರುವ ರೈತರಿಗೆ ಪ್ರತ್ಯೇಕವಾಗಿ ಪರಿಹಾರ ನೀಡಬೇಕು..ರೈತರ ಸಾಲ ವಸೂಲಾತಿಗೆ ಪೂರ್ಣ ಬ್ರೇಕ್ ಹಾಕಿ, ಸಾಲವನ್ನು ರಿ ಶೆಡ್ಯೂಲ್ ಮಾಡಿ, ಕೊಡಲೇ ಹೊಸ ಸಾಲ ಸಿಗುವಂತೆ ಮಾಡಬೇಕು ಎಂದು ಬ್ಯಾಂಕ್ ಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕು. ಖಾಸಗಿ ಲೇವಿದಾರರು ಮತ್ತು ಫೈನಾನ್ಸ್ ಸಂಸ್ಥೆಯವರು ಮಾಡುವ ಸಾಲ ವಸೂಲಾತಿಗೆ ಬ್ರೇಕ್ ಹಾಕಿ, ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವಂತೆ ಆದೇಶಿಸಬೇಕು. ಮೊದಲೇ ನೀರಿನ ಬರ ಅದರ ಜೊತೆಗೆ ವಿದ್ಯುತ್ ಅಭಾವ ಮತ್ತು ಕಣ್ಣು ಮುಚ್ಚಾಲೆ ಯಿಂದ ರೈತರ ಬದುಕು ಹೈರಾಣಾಗಿದೆ. 2 ವಾರದ ಹಿಂದೆಯೇ ರೈತರಿಗೆ ನಿರಂತರ 5 ತಾಸು ತ್ರೀಫೇಸ್ ವಿದ್ಯುತ್ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಟ್ಟು ನಿಟ್ಟಾಗಿ ಅಧಿಕಾರಿಗಳಿಗೆ ಸೂಚಿಸಿದ್ದರೂ ರೈತರ ಬವಣೆ ತಪ್ಪಿಲ್ಲ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ಬಿಜೆಪಿ ಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್, ಧನಂಜಯ ಕಡ್ಲೆಬಾಳ್, ಬಾತಿ ರೇವಣಸಿದ್ದಪ್ಪ, ಬಿ ಕೆ ಶಿವಕುಮಾರ್, ಹೆಬ್ಬಾಳು ಮಹೇಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡದ ಗಣೇಶಪ್ಪ, ಕುಂದುವಾಡದ ಪುನೀತ್ ಆರುಂಡಿ, ಅಣಬೇರು ಶಿವಪ್ರಕಾಶ್, ಅಥಿತ್ ಅಂಬರಕರ್, ವಾಸನ ಬಸವರಾಜ, ಕಡ್ಲೆಬಾಳ್ ಎಲ್ ಬಿ ಚಂದ್ರು ಮುಂತಾದವರು ಉಪಸ್ಥಿತರಿದ್ದರು.