SUDDIKSHANA KANNADA NEWS/ DAVANAGERE/ DATE:01-11-2023
ದಾವಣಗೆರೆ: ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದ ಗರಡಿ ಚಿತ್ರವು ನವೆಂಬರ್ 10ರಂದು ತೆರೆ ಕಾಣಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್ಯದ 250 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರದ ನಿರ್ಮಾಪಕ ಹಾಗೂ ನಟ ಬಿ. ಸಿ. ಪಾಟೀಲ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮೂರು ಹಾಡುಗಳನ್ನು ಬಿಡುಗಡೆ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೈಲ್ವಾನ್ ರ ಪ್ರಮುಖವಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಮೂಲಕ ಗರಡಿ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂಬ ಭಾವನೆ ನಮ್ಮದು ಎಂದರು.
ಎಸ್. ಎಸ್. ಸೂರ್ಯ ನಾಯಕ ನಟನಾಗಿ ನಟಿಸಿದ್ದರೆ, ಸೋನಾಲಿ ಚಿತ್ರದ ಹೀರೋಯಿನ್. ರಶ್ಮಿಕಾ ನಾಯ್ಡು ನಟಿಸಿದ್ದು, ದರ್ಶನ್ ತೂಗುದೀಪ ಅವರದ್ದು ಪ್ರಮುಖ ಪಾತ್ರ. ವಿಭಿನ್ನ ಕಥಾ ಹಂದರ ಹೊಂದಿದ್ದು, ಬಾದಾಮಿ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಆರು ಹಾಡುಗಳಿದ್ದು, ವಿ. ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಜಯ್ ಪ್ರಕಾಶ್, ಸಂತೋಷ್, ಹರಿಕೃಷ್ಣ ಅವರು ಹಾಡುಗಳನ್ನು ಹಾಡಿದ್ದಾರೆ. ಎಸ್. ಎಸ್. ಸೂರ್ಯ ಅವರು ನಾಯಕನಟನಾದರೆ ತಾನೂ ಅಭಿನಯಿಸುತ್ತೇನೆ ಎಂದು ದರ್ಶನ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಥೆಗೂ ಹೊಂದಿದ ಕಾರಣ ಸೂರ್ಯ ನಾಯಕ ನಟರಾದರು. ಇದಕ್ಕೆ ದರ್ಶನ್ ಅವರೇ ಕಾರಣ ಎಂದು ತಿಳಿಸಿದರು.
ಲವ್, ಥ್ರಿಲ್ಲಿಂಗ್, ಕುಸ್ತಿ ಸೇರಿದಂತೆ ಹಲವು ವಿಚಾರಗಳ ಕಥಾ ಹಂದರ ಹೊಂದಿದೆ. ಪಂಜಾಬ್, ಹರ್ಯಾಣ, ಮುಂಬೈ ಸೇರಿದಂತೆ ಎಲ್ಲೆಡೆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ಬಿಡುಗಡೆಯಾದ ಒಂದು ವಾರದ ಬಳಿಕ ಹಿಂದಿ ಭಾಷೆಗೆ ಡಬ್ ಆಗಲಿದೆ. 12 ಕೋಟಿ ರೂಪಾಯಿ ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ ಎಂದು ಬಿ. ಸಿ. ಪಾಟೀಲ್ ತಿಳಿಸಿದರು.
ನನ್ನ ಸಿನಿಮಾ ಜರ್ನಿ ದಾವಣಗೆರೆಯಿಂದ ಪ್ರಾರಂಭವಾಯ್ತು. ನಿಷ್ಕರ್ಷ ಸಿನಿಮಾದಲ್ಲಿ ನಟನೆ ಮಾಡುವಾಗ ದಾವಣಗೆರೆಯಲ್ಲಿ ಸಬ್ ಇನ್ ಸ್ಪೆಕ್ಟರ್ ಆಗಿದ್ದೆ. ಆಗ ಪತ್ರಿಕೆಯವರು ನನಗೆ ಘಾತುಕರಾದರು. ಇಂದಿಗೆ 30 ವರ್ಷವಾಗಿದೆ. ನಾನು ಓದಿದ್ದು, ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ನನ್ನ ಹೆಂಡತಿ ಊರು ದಾವಣಗೆರೆಯೇ. ಹಾಗಾಗಿ, ನಾನು ಮರೆಯಲು ಸಾಧ್ಯವೇ ಇಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವನಾಗಬೇಕಿತ್ತು. ಕಾರಣಾಂತರಗಳಿಂದ ಆಗಲಿಲ್ಲ ಎಂದು ತಿಳಿಸಿದರು.
ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ ದಾವಣಗೆರೆಯೆಂದರೆ ನನ್ನಷ್ಟು ಅನುಭವ ಯಾರಿಗೂ ಇಲ್ಲ. ಶಿರಸಿ, ಹಳಿಯಾಳ ಬಸ್ ದಾವಣಗೆರೆ ಬಂದು ಹೋಗಬೇಕು. ಕಾಲೇಜು ಬಿಟ್ಟ ತಕ್ಷಣ ಸ್ಪೆಷಲ್ ಸಿನಿಮಾ ನೋಡಲು ಹುಬ್ಬಳ್ಳಿಗೆ ಹಾಗೂ ಹೊಸ ಸಿನಿಮಾ ಬಿಡುಗಡೆ ಆದಾಗ ಚಿತ್ರ ನೋಡಲು ದಾವಣಗೆರೆ ಬರುತ್ತಿದ್ದೆ. ಇಲ್ಲಿ ಬಹಳ ಮಂದಿ ಸ್ನೇಹಿತರು ಇದ್ದು, 200ಕ್ಕೂ ಹೆಚ್ಚು ಫ್ರೆಂಡ್ಸ್ ಇದ್ದಾರೆ. ಬಯಲುಸೀಮೆಯಿಂದ ಬೆಂಗಳೂರಿಗೆ ಹೋಗಿ ಜೀವನ ಕಂಡುಕೊಂಡವರಿಗೆ ದಾವಣಗೆರೆ ಜಂಕ್ಷನ್ ಇದ್ದ ಹಾಗೆ ಎಂದರು.
ಗರಡಿ ಚಿತ್ರ ಕೈಗೆತ್ತಿಕೊಂಡು ಒಂದೂವರೆ ವರ್ಷ ಮೇಲಾಯ್ತು. ನಾವೇನೋ ಅಂದುಕೊಂಡೆವು. ದರ್ಶನ್ ನಟನೆ ಮಾಡಲು ಒಪ್ಪಿದರು. ನಾನು ಹಾಗೂ ಪಾಟೀಲ್ ದಿನಕ್ಕೆ 20 ಸಭೆ ಮಾಡುತ್ತಿದ್ದೆವು. ಈಗ ಸಿನಿಮಾ ಬಿಡುಗಡೆಗೆ ಕಾಲ ಕೂಡಿ ಬಂದಿದೆ. ಮುಂಚಿನ ರೀತಿ ಸಿನಿಮಾ ಇಲ್ಲ. ದೊಡ್ಡ ಸಿನಿಮಾ ಆಯ್ತು. ಎಲ್ರೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ದಾವಣಗೆರೆ ನೆಲದ ವಾಸನೆಯೂ ಇದೆಯ ಸೊಲ್ಲಾಪುರ, ರಾಣೆಬೆನ್ನೂರು ಪೈಲ್ವಾನರು ಸೇರಿದಂತೆ ಒರಿಜಿನಲ್ ಪೈಲ್ವಾನ್ ರು ನಟಿಸಿದ್ದಾರೆ. ಉತ್ತರ ಕರ್ನಾಟಕ ಸೇರಿದಂತೆ ಎಲ್ಲರಿಗೂ ಇಷ್ಟವಾಗುವಂಥ ಚಿತ್ರ ಮಾಡಿದ್ದೇವೆ ಎಂದರು.
ಏಕಲವ್ಯ ದ್ರೋಣಚಾರ್ಯ ಕಥೆ ಈ ಚಿತ್ರದ್ದು. ಕುಸ್ತಿ ಕಲಿಯಬಾರದು ಎಂದು ಚಿತ್ರದಲ್ಲಿ ನಟಿಸಿರುವ ಬಿ. ಸಿ. ಪಾಟೀಲ್ ಅವರು ನಾಯಕನಟನಿಗೆ ಯಾಕೆ ಭಾಷೆ ತೆಗೆದುಕೊಂಡಿರುತ್ತಾರೆ ಎನ್ನೋದೇ ಒಂದು ವಾಕ್ಯದ ಸ್ಟೋರಿ ಎಂದರು.
ಗೋಷ್ಠಿಯಲ್ಲಿ ಚಿತ್ರದ ನಟ ಪೃಥ್ವಿ ಶಾಮನೂರು ಮತ್ತಿತರರು ಹಾಜರಿದ್ದರು.